

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆಗೆ ಪಟ್ಟು ಹಿಡಿದಿದ್ದು, ಇಂದು ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರನ್ನು ಭೇಟಿಯಾಗಲಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವದಂತಿ ನಡುವೆ ಖರ್ಗೆ ಅವರು ಶುಕ್ರವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದು, ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಈ ಮಧ್ಯೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. "ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು 2025ರ ಮತ್ಸ್ಯ ಮೇಳ"ದ ಉದ್ಘಾಟನಾ ಸಮಾರಂಭದ ನಂತರ ಮಾತನಾಡಿದ ಮುಖ್ಯಮಂತ್ರಿ, ಖರ್ಗೆ ಅವರನ್ನು ಭೇಟಿಯಾಗುವುದಾಗಿ ಹೇಳಿದರು.
ಸಂಪುಟ ಪುನಾರಚನೆಗೆ ಪಟ್ಟು ಹಿಡಿದಿರುವ ಸಿದ್ದರಾಮಯ್ಯ, ಖರ್ಗೆ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮತ್ತೊಂದೆಡೆ ಶತಾಯಗತಯ ಸಿಎಂ ಸ್ಥಾನ ಪಡೆಯುವ ಹಠಕ್ಕೆ ಬಿದ್ದಿರುವ ಡಿಕೆ ಶಿವಕುಮಾರ್, ನಂಬರ್ ಗೇಮ್ ನಲ್ಲಿ ತೊಡಗಿದ್ದು, ಒಕ್ಕಲಿಗ ಶಾಸಕರ ಬೆಂಬಲದ ಜೊತೆಗೆ ಪಕ್ಷದ ಉಳಿದ ಶಾಸಕರ ಬೆಂಬಲ ಪಡೆಯುವ ಕಸರತ್ತು ಮುಂದುವರೆಸಿದ್ದಾರೆ. ಜೀನುಕಲ್ಲು ಸ್ವಾಮೀಜಿ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದು, ವಿಶೇಷ ಹೋಮ, ಹವನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಒಟ್ಟಾರೇ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವದಂತಿ ನಡುವೆ ಇಂದು ಸಂಜೆ ನಡೆಯಲಿರುವ ಸಿದ್ದರಾಮಯ್ಯ- ಖರ್ಗೆ ಮಾತುಕತೆಯತ್ತ ಎಲ್ಲರ ಕಣ್ಣು ನೆಟ್ಟಿದೆ.
Advertisement