

ಬೆಂಗಳೂರು: ಹರಿಶ್ಚಂದ್ರ ಘಾಟ್ ನಿರ್ವಹಣೆ ಮಾಡುವ ಪುಣ್ಯ ಕೆಲಸದಲ್ಲಿ ತೊಡಗಿರುವ ಸಿಬ್ಬಂದಿಗಳ ಸಂಬಳವನ್ನು ಸಹ ನೀಡದ ಮುಖ್ಯಮಂತ್ರಿ ರಾಜ್ಯಕ್ಕೆ ಇದ್ದರೇನು, ಇಲ್ಲದಿದ್ದರೇನು ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಸ್ಮಶಾನ ನಿರ್ವಹಣಾ ಸಿಬ್ಬಂದಿಗೆ ಕಳೆದ 8 ತಿಂಗಳಿನಿಂದ ವೇತನ ಸಿಗದಿರುವ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಕೂಡ ಪಾವತಿಯಾಗುತ್ತಿಲ್ಲ, ಸ್ಮಶಾನ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ಸಂಬಳವೂ ಬರುತ್ತಿಲ್ಲ. ಉಪನ್ಯಾಸಕರಿಂದ ಹಿಡಿದು ಅಶಾ ಕಾರ್ಯಕರ್ತೆಯರ ತನಕವೂ ಕೊಟ್ಟ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ವಚನಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಎಂದು ವಾಗ್ದಾಳಿ ನಡೆಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಶಾನ ಮತ್ತು ವಿದ್ಯುತ್ ಚಿತಾಗಾರದ ಸಿಬ್ಬಂದಿಗಳಿಗೆ ಫೆಬ್ರವರಿ 2025 ರಿಂದ ಇದುವರೆಗೆ ಸಂಬಳ ಪಾವತಿಯಾಗಿಲ್ಲ. ಹರಿಶ್ಚಂದ್ರ ಘಾಟ್ ನಿರ್ವಹಣೆ ಮಾಡುವ ಪುಣ್ಯ ಕೆಲಸದಲ್ಲಿ ತೊಡಗಿರುವ ಸಿಬ್ಬಂದಿಗಳ ಸಂಬಳವನ್ನು ಸಹ ನೀಡದ ಮುಖ್ಯಮಂತ್ರಿ ರಾಜ್ಯಕ್ಕೆ ಇದ್ದರೇನು, ಇಲ್ಲದಿದ್ದರೇನು ಎಂದು ಹೇಳಿದೆ.
ಜೆಡಿಎಸ್ ಪೋಸ್ಟ್ ಮಾಡಿ, ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕಕ್ಕೆ ಎಂತಹ ದರಿದ್ರ ಸ್ಥಿತಿ ಬಂದಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಸ್ಮಶಾನದ ಸಿಬ್ಬಂದಿಗೆ 9 ತಿಂಗಳಿಂದ ವೇತನವನ್ನೇ ನೀಡಿಲ್ಲ. ವಿದ್ಯುತ್ ಚಿತಾಗಾರ ಮತ್ತು ರುದ್ರಭೂಮಿಯಲ್ಲಿ ಕೆಲಸ ಮಾಡುವ 145ಕ್ಕೂ ಹೆಚ್ಚು ಸಿಬ್ಬಂದಿ ಸಂಬಳವಿಲ್ಲದೇ, ಅವರ ಕುಟುಂಬಗಳು ಪರದಾಡುವಂತಾಗಿದೆ.
ರಾಜ್ಯ ಸರ್ಕಾರ, ಸ್ಮಶಾನ ಸಿಬ್ಬಂದಿಗೆ ಶಾಶ್ವತ ಮನೆಗಳ ಬೇಡಿಕೆಯನ್ನು ಪರಿಹರಿಸಿಲ್ಲ, ಕುಟುಂಬಗಳು ರುದ್ರಭೂಮಿಯ ಶಿಥಿಲವಾದ ಕೊಠಡಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ರುದ್ರಭೂಮಿ ಮತ್ತು ವಿದ್ಯುತ್ ಚಿತಾಗಾರ ಸಂಘ ಆರೋಪಿಸಿದೆ ಎಂದು ತಿಳಿಸಿದೆ.
ಇದೇ ವೇಳೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಜೆಡಿಎಸ್ ನಾಯಕರು ಸರ್ಕಾರವನ್ನು ಟೀಕಿಸಿದ್ದಾರೆ.
Advertisement