
ಬೆಂಗಳೂರು: "ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ" ಎನ್ನುವಂತೆ, ಸರ್ಕಾರ ಸ್ವಂತ ಹೆಲಿಕಾಪ್ಟರ್, ಜೆಟ್ ಖರೀದಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಮತ್ತು ನಾಚಿಕೆಗೇಡು ಎಂದು ಬಿಜೆಪಿ ಸೋಮವಾರ ರಾಜ್ಯ ಸರ್ಕಾರವನ್ನು ಟೀಕೆ ಮಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಹೆಲಿಕಾಪ್ಟರ್ ಖರೀದಿಸುವ, ಗುತ್ತಿಗೆ ಪಡೆಯುವ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.
ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ" ಎನ್ನುವಂತಾಗಿದೆ ಸರ್ಕಾರದ ನಡೆ. ನಡು ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿರುವ ಸರ್ಕಾರಿ ಬಸ್ಸುಗಳ ದುರಸ್ತಿಗೆ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ. ಹೊಸ ಬಸ್ಸುಗಳ ಖರೀದಿಗೆ ದುಡ್ಡಿಲ್ಲ. ಸಾರಿಗೆ ನೌಕರರಿಗೆ ಸಿಗಬೇಕಾದ ನೂರಾರು ಕೋಟಿ ಹಿಂಬಾಕಿ ಪಾವತಿಸಲು ದುಡ್ಡಿಲ್ಲ. ಯಾವುದಕ್ಕೂ ದುಡ್ಡಿಲ್ಲ, ದುಡ್ಡಿಲ್ಲ ಎಂದು ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಿ, ಬಸ್ ನಿಲ್ದಾಣಗಳನ್ನು ಹರಾಜು ಹಾಕುವ ದುಸ್ಥಿತಿ ತಂದಿಟ್ಟಿರುವ ದಿವಾಳಿ ಕಾಂಗ್ರೆಸ್, ಈಗ ಸ್ವಂತ ಹೆಲಿಕಾಪ್ಟರ್, ಜೆಟ್ ಖರೀದಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಮತ್ತು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕರಿಗೆ ಕನಿಷ್ಠ ಸೌಕರ್ಯ ನೀಡುವುದಕ್ಕಿಂತ ಮುಖ್ಯಮಂತ್ರಿಗಳು, ಸಚಿವರ ಐಷಾರಾಮಿ ಶೋಕಿಯೇ ಮುಖ್ಯವಾಗಿರುವ ಈ ಕಾಂಗ್ರೆಸ್ ಸರ್ಕಾರದ ಲಜ್ಜೆಗೆಟ್ಟ ಧೋರಣೆಗೆ ಕನ್ನಡಿಗರು ರೋಸಿ ಹೋಗಿದ್ದಾರೆಂದು ಕಿಡಿಕಾರಿದ್ದಾರೆ.
Advertisement