

ಕಲಬುರಗಿ: ಆಳಂದ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿ.ಆರ್. ಪಾಟೀಲ್ ಅವರಿಗೆ ಕಾಂಗ್ರೆಸ್ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವುದಕ್ಕೆ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಕ್ಷೇತ್ರದ ಬೆಂಬಲಿಗರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ನಾನು ಜೀವನಪೂರ್ತಿ ಹೋರಾಡಿದ್ದಕ್ಕೆ ಸಿಕ್ಕ ಪ್ರತಿಫಲ ಇದೆಯೇ? ಕೋಮು ಮತ್ತು ವಿಭಜನಾ ಶಕ್ತಿಗಳ ವಿರುದ್ಧ ನಾನು ಅವಿರತವಾಗಿ ಹೋರಾಡಿದ್ದೇನೆ. ರಾಜ್ಯದಲ್ಲಷ್ಟೇ ಅಲ್ಲ, ದೇಶದಾದ್ಯಂತ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ ಎಂದು ಬರೆದಿದ್ದಾರೆ.
ತಮಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಬೆಂಬಲಿಗರು ವ್ಯಕ್ತಪಡಿಸುತ್ತಿರುವ ಆಕ್ರೋಶವನ್ನು ಉಲ್ಲೇಖಿಸಿದ ಬಿ ಆರ್ ಪಾಟೀಲ್, ನನಗೂ ನೋವಾಗಿದೆ. ಆದರೆ ನಾನು ಕುಗ್ಗಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕು ಮತ್ತು ಸಮಾಜದಲ್ಲಿ ಸಮಾನತೆ ಬರಬೇಕು ಎಂಬ ಉದ್ದೇಶದಿಂದ ನಾನು ನಿರಂತರ ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾನು ಮಹಾತ್ಮ ಗಾಂಧಿ, ರಾಮಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳಲ್ಲಿ ದೃಢ ನಂಬಿಕೆ ಹೊಂದಿದ್ದೇನೆ. ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ 50 ವರ್ಷಗಳ ರಾಜಕೀಯ ಹೋರಾಟದಲ್ಲಿ ಹಲವು ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.