ದೆಹಲಿಗೆ ಹೋಗಿದ್ದರ ಹಿಂದೆ ಯಾವುದೇ ರಾಜಕೀಯ ಲೆಕ್ಕಾಚಾರವಿವ್ವ, DCM ಹುದ್ದೆ ಬಗ್ಗೆ ಸದ್ಯ ಯಾವುದೇ ಚರ್ಚೆಯಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಇತ್ತೀಚೆಗೆ ತಾವು ಕೈಗೊಂಡ ದೆಹಲಿ ಪ್ರವಾಸ ಸಾಮಾನ್ಯ ಭೇಟಿಯಾಗಿತ್ತು. ಅದನ್ನು ರಾಜಕೀಯ ಬೆಳವಣಿಗೆಗಳೊಂದಿಗೆ ತಳುಕು ಹಾಕುವುದು ಸರಿಯಲ್ಲ ಎಂದು ಹೇಳಿದರು.
Satish jarkiholi and dk shivakumar
ಸತೀಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್
Updated on

ಬೆಳಗಾವಿ: ತಮ್ಮ ಇತ್ತೀಚಿನ ದೆಹಲಿ ಭೇಟಿಯ ಬೆನ್ನಲ್ಲೇ ಉಪಮುಖ್ಯಮಂತ್ರಿ ಹುದ್ದೆ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬ ವದಂತಿಗಳನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಳ್ಳಿಹಾಕಿದ್ದಾರೆ.

ದೆಹಲಿ ಭೇಟಿ ಸಾಮಾನ್ಯವಾಗಿತ್ತು. ಇದಕ್ಕೆ ಯಾವುದೇ ರಾಜಕೀಯ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಸದ್ಯ ಉಪಮುಖ್ಯಮಂತ್ರಿ ಹುದ್ದೆಯ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಅಂತಹ ಅವಕಾಶ ಅಥವಾ ಪರಿಸ್ಥಿತಿ ಎದುರಾದರೆ ಆಗ ಈ ಬಗ್ಗೆ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ತಾವು ಕೈಗೊಂಡ ದೆಹಲಿ ಪ್ರವಾಸ ಸಾಮಾನ್ಯ ಭೇಟಿಯಾಗಿತ್ತು. ಅದನ್ನು ರಾಜಕೀಯ ಬೆಳವಣಿಗೆಗಳೊಂದಿಗೆ ತಳುಕು ಹಾಕುವುದು ಸರಿಯಲ್ಲ ಎಂದು ಹೇಳಿದರು.

ಇತ್ತೀಚೆಗೆ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಹೊಸದಾಗಿ ಸೇರ್ಪಡೆಯಾದ ಸಚಿವರಿಗೆ ಖಾತೆ ಹಂಚಿಕೆ ಇನ್ನೂ ಪೂರ್ಣಗೊಂಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶನಿವಾರ ಅಥವಾ ಭಾನುವಾರ ಖಾತೆ ಹಂಚಿಕೆ ಪ್ರಕ್ರಿಯೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಇದೇ ವೇಳೆ ಖಾತೆ ಹಂಚಿಕೆಯಲ್ಲಿ ಯಾವುದೇ ದೊಡ್ಡ ಸಮಸ್ಯೆ ಎದುರಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದ ಅವರು, ವಿಸ್ತರಿತ ಸಚಿವ ಸಂಪುಟದಲ್ಲಿ ಅನುಭವ ಹೊಂದಿರುವ ಹಲವು ಸಚಿವರಿದ್ದಾರೆ. ಹೀಗಾಗಿ ಯಾರಿಗೆ ಯಾವ ಖಾತೆ ನೀಡಬೇಕು ಎಂಬುದರಲ್ಲಿ ಹೆಚ್ಚಿನ ತೊಂದರೆ ಇರುವುದಿಲ್ಲ ಎಂದರು.

Satish jarkiholi and dk shivakumar
ಸತೀಶ್ ಜಾರಕಿಹೊಳಿ ಭಾವೀ DCM: ಸಂಪುಟ ವಿಸ್ತರಣೆ ಹೊಸ್ತಿಲಲ್ಲಿ ಅಭಿಮಾನಿಗಳಿಂದ ಪೋಸ್ಟರ್ ವೈರಲ್

ಮತ್ತೊಮ್ಮೆ ಸಚಿವ ಸಂಪುಟ ಪುನಾರಚನೆ ನಡೆಯಲಿದೆ ಎಂಬ ಚರ್ಚೆಗಳ ಬಗ್ಗೆಯೂ ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯಿಸಿದರು. ಈ ರೀತಿಯ ಯಾವುದೇ ಬೆಳವಣಿಗೆಯ ಕುರಿತು ತಮ್ಮ ಬಳಿ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕದ ಕುರುಬ ಸಮುದಾಯದ ನಾಯಕರೊಬ್ಬರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸುತ್ತಿದ್ದಾರೆ ಎಂಬ ವರದಿಗಳ ಕುರಿತು ಕೇಳಿದ ಪ್ರಶ್ನೆಗೆ, ಈ ವಿಚಾರದಲ್ಲಿ ಸ್ವಲ್ಪ ಗೊಂದಲವಿದೆ ಎಂದು ಸತೀಶ್‌ ಒಪ್ಪಿಕೊಂಡರು. ಆದರೆ, ಪಕ್ಷದ ನಾಯಕತ್ವ ಈ ಸಮಸ್ಯೆಯನ್ನು ಸೂಕ್ತವಾಗಿ ಬಗೆಹರಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಪರವಾಗಿಯೂ ಸತೀಶ್‌ ಜಾರಕಿಹೊಳಿ ಮಾತನಾಡಿದರು. ಕನಿಷ್ಠ ಒಬ್ಬ ಮಹಿಳೆಯನ್ನಾದರೂ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬೆದರಿಕೆ ಹಾಕಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪಗಳನ್ನೂ ಸತೀಶ್‌ ಜಾರಕಿಹೊಳಿ ತಳ್ಳಿಹಾಕಿದರು.

ಹೊರಟ್ಟಿ ಅವರು ಸ್ವತಃ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಗೆ ಯಾರೂ ಬೆದರಿಕೆ ಹಾಕಿ ರಾಜೀನಾಮೆ ಕೊಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com