ಬಿ-ಖಾತಾ ಮಾಲೀಕರಿಗೆ ಸರ್ಕಾರ ಬಿಗ್ ರಿಲೀಫ್; ಸಕ್ರಮಕ್ಕೆ ಸಿಕ್ಕಿತು ಶಾಸನಬದ್ಧ ಮುದ್ರೆ..!

ಹೊಸ ನಿಯಮಗಳ ಅಡಿಯಲ್ಲಿ ಇಂತಹ ಅಕ್ರಮ ಬಡಾವಣೆಗಳಲ್ಲಿರುವ ರಸ್ತೆಗಳನ್ನು ಅಧಿಕೃತವಾಗಿ ಸಾರ್ವಜನಿಕ ರಸ್ತೆಗಳೆಂದು ಘೋಷಿಸಲು ಅವಕಾಶವಿದೆ. ಇದರಿಂದ ಅರ್ಹ ಆಸ್ತಿಗಳನ್ನು ಬಿ ಖಾತಾದಿಂದ ಎ ಖಾತಾಗೆ ಮೇಲ್ದರ್ಜೆಗೇರಿಸಲು ಸಾಧ್ಯವಾಗಲಿದೆ.
Karnataka Assembly passes Bill to regulate apartment ownership
ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ
Updated on

ಬೆಂಗಳೂರು: ರಾಜ್ಯದ ಲಕ್ಷಾಂತರ ಆಸ್ತಿ ಮಾಲೀಕರಿಗೆ ಕರ್ನಾಟಕ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಅನಧಿಕೃತ ಬಡಾವಣೆಗಳಲ್ಲಿರುವ ಬಿ-ಖಾತಾ ಆಸ್ತಿಗಳನ್ನು ಕಾನೂನುಬದ್ಧ ಎ-ಖಾತಾವಾಗಿ ಪರಿವರ್ತಿಸಲು ಮತ್ತು ಅಲ್ಲಿನ ರಸ್ತೆಗಳನ್ನು ಸಕ್ರಮಗೊಳಿಸಲು ಅವಕಾಶ ನೀಡುವ ಮಹತ್ವದ ತಿದ್ದುಪಡಿ ವಿಧೇಯಕಗಳಿಗೆ ವಿಧಾನಸಭೆ ಅಧಿಕೃತ ಅಂಗೀಕಾರ ನೀಡಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಕರ್ನಾಟಕ ಮಹಾನಗರ ಪಾಲಿಕೆಗಳ (ತಿದ್ದುಪಡಿ) ಮಸೂದೆ-2026 ಮಂಡಿಸಿದ್ದು, ಹಲವು ದಶಕಗಳಿಂದ ಅಕ್ರಮ ಬಡಾವಣೆಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಆಸ್ತಿ ಮಾಲೀಕರಿಗೆ ಈ ತಿದ್ದುಪಡಿ ದೊಡ್ಡ ಮಟ್ಟದ ಪರಿಹಾರ ನೀಡಲಿದೆ ಎಂದು ಹೇಳಿದರು.

ಹೊಸ ನಿಯಮಗಳ ಅಡಿಯಲ್ಲಿ ಇಂತಹ ಅಕ್ರಮ ಬಡಾವಣೆಗಳಲ್ಲಿರುವ ರಸ್ತೆಗಳನ್ನು ಅಧಿಕೃತವಾಗಿ ಸಾರ್ವಜನಿಕ ರಸ್ತೆಗಳೆಂದು ಘೋಷಿಸಲು ಅವಕಾಶವಿದೆ. ಇದರಿಂದ ಅರ್ಹ ಆಸ್ತಿಗಳನ್ನು ಬಿ ಖಾತಾದಿಂದ ಎ ಖಾತಾಗೆ ಮೇಲ್ದರ್ಜೆಗೇರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕಳೆದ ನಾಲ್ಕು ದಶಕಗಳಲ್ಲಿ ರಾಜ್ಯದಾದ್ಯಂತ ಸಾವಿರಾರು ಅಕ್ರಮ ಬಡಾವಣೆಗಳು ನಿರ್ಮಾಣವಾಗಿವೆ. ಈ ಕುರಿತು ಕಾನೂನು ಇದ್ದರೂ ಹಿಂದಿನ ಸರ್ಕಾರಗಳು ಪರಿಣಾಮಕಾರಿಯಾಗಿ ಕ್ರಮ ಕೈಗೊಂಡಿಲ್ಲ. ಮತ್ತೊಂದೆಡೆ, ಬಡಾವಣೆ ನಿರ್ಮಾಣಕಾರರೂ ನಿಯಮಗಳನ್ನು ನಿರ್ಲಕ್ಷಿಸಿದ್ದರಿಂದ ಆಸ್ತಿ ಮಾಲೀಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇಂತಹ ಹಲವು ಬಡಾವಣೆಗಳಲ್ಲಿ ಅಗಲವಾದ ಡಾಂಬರು ರಸ್ತೆಗಳು, ವಿದ್ಯುತ್ ಸಂಪರ್ಕ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು, ಮಳೆನೀರು ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿದೆ. ಸೂಕ್ತ ಯೋಜನೆ ಇಲ್ಲದೆ ಬಡಾವಣೆಗಳನ್ನು ನಿರ್ಮಿಸಿರುವುದರಿಂದ ಆಸ್ತಿ ಮಾಲೀಕರಿಗೆ ಸ್ಪಷ್ಟ ಮಾಲೀಕತ್ವದ ಹಕ್ಕುಗಳೂ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ.

Karnataka Assembly passes Bill to regulate apartment ownership
ಬೆಂಗಳೂರಿನಲ್ಲಿ ಅನಾಥ ವಾಹನ ತೆರವು ಕಾರ್ಯಾಚರಣೆಗೆ ಸಚಿವ ಕೃಷ್ಣ ಭೈರೇಗೌಡ ಚಾಲನೆ; Video

ಈ ಹಿಂದೆ ಇಂತಹ ಆಸ್ತಿ ಮಾಲೀಕರಿಗೆ ಬಿ ಖಾತಾ ನೀಡಲಾಗುತ್ತಿತ್ತು. ಇದೀಗ ಸರ್ಕಾರ ಎ ಖಾತಾ ನೀಡಲು ಕ್ರಮ ಕೈಗೊಂಡಿದೆ. ಎ ಖಾತಾ ಮಾತ್ರ ಆಸ್ತಿಗೆ ಬಲವಾದ ಕಾನೂನು ಮಾನ್ಯತೆ ಹಾಗೂ ಮಾಲೀಕತ್ವದ ಭದ್ರತೆಯನ್ನು ಒದಗಿಸಲಿದೆ ಎಂದು ಹೇಳಿದರು.

ತಿದ್ದುಪಡಿ ಮಸೂದೆಯ ಪ್ರಕಾರ, ಅಕ್ರಮ ಬಡಾವಣೆಗಳಲ್ಲಿರುವ ಹಾಗೂ ಮೂಲ ಭೂ ಮಾಲೀಕರ ಹೆಸರಿನಲ್ಲೇ ದಾಖಲಾಗಿರುವ ರಸ್ತೆಗಳನ್ನು ಸಂಬಂಧಪಟ್ಟ ಮಹಾನಗರ ಪಾಲಿಕೆ ಅಥವಾ ನಗರಸಭೆಯ ದಾಖಲೆಗಳಲ್ಲಿ ಅಧಿಕೃತವಾಗಿ “ಸಾರ್ವಜನಿಕ ರಸ್ತೆ” ಎಂದು ಘೋಷಿಸಲು ಅವಕಾಶ ಕಲ್ಪಿಸಲಾಗುತ್ತದೆ.

ರಸ್ತೆಗಳು ಅಧಿಕೃತವಾಗಿ ಸಾರ್ವಜನಿಕ ರಸ್ತೆಗಳೆಂದು ಗುರುತಿಸಿಕೊಂಡ ಬಳಿಕ, ಅಂತಹ ಬಡಾವಣೆಗಳಲ್ಲಿರುವ ಅರ್ಹ ನಿವೇಶನಗಳು ಹಾಗೂ ಮನೆಗಳಿಗೆ ನಿಯಮಾನುಸಾರ ಎ ಖಾತಾ ನೀಡಲು ಸಾಧ್ಯವಾಗಲಿದೆ.

‘ಭೂ ಖಾತರಿ’ ಉಪಕ್ರಮದಡಿ ಪ್ರತಿಯೊಬ್ಬ ಆಸ್ತಿ ಮಾಲೀಕರಿಗೂ ಸಂಪೂರ್ಣ ಆಸ್ತಿ ಭದ್ರತೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಅಕ್ರಮ ಬಡಾವಣೆಗಳಲ್ಲಿ ವಾಸಿಸುವ ಆಸ್ತಿ ಮಾಲೀಕರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಈ ತಿದ್ದುಪಡಿ ಪರಿಹಾರ ಕಲ್ಪಿಸಲಿದೆ ಎಂದರು.

ಹೊಸ ಅಕ್ರಮ ಬಡಾವಣೆಗಳ ನಿರ್ಮಾಣವನ್ನು ತಡೆಯಲು ಹಾಗೂ ನಿಯಮ ಉಲ್ಲಂಘನೆಗಳನ್ನು ನಿಯಂತ್ರಿಸಲು ಸರ್ಕಾರ 2024ರಲ್ಲೇ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಈ ಕ್ರಮವನ್ನು ಮೊದಲು ಬೆಂಗಳೂರಿನಲ್ಲಿ ಜಾರಿಗೊಳಿಸಲಾಗಿದ್ದು, ಇದೀಗ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com