ಯಾವ ತಪ್ಪೂ ಮಾಡಿಲ್ಲ, ರಾಜೀನಾಮೆ ಪ್ರಶ್ನೆಯೇ ಇಲ್ಲ: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪಗಳು ಹೊಸದೇನಲ್ಲ. ಜೆ.ಹೆಚ್. ಪಟೇಲ್, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇಂತಹ ಆರೋಪಗಳು ಬಂದಿವೆ. ಆದರೆ, ಯಾರೂ ರಾಜೀನಾಮೆ ನೀಡಿಲ್ಲ.
Karnataka Excise Minister RB Timmapur
ಸಚಿವ ಆರ್‌ಬಿ ತಿಮ್ಮಾಪುರ
Updated on

ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಂಗಳವಾರ ಹೇಳಿದ್ದಾರೆ.

ಬಿಜೆಪಿ ಆರೋಪ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು. ಯಾವುದಾದರೂ ಅಧಿಕಾರಿ ಸಚಿವ ಅಥವಾ ಮುಖ್ಯಮಂತ್ರಿಯ ಹೆಸರನ್ನು ದುರುಪಯೋಗ ಮಾಡಿಕೊಂಡು ಲಂಚ ಪಡೆದಿದ್ದರೆ, ಆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾನು ಯಾವ ತಪ್ಪು ಮಾಡಿದ್ದೇನೆ? ರಾಜೀನಾಮೆ ನೀಡುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿದರು.

ತಮ್ಮ ಹಾಗೂ ತಮ್ಮ ಪುತ್ರರ ಹೆಸರಿರುವ ಆಡಿಯೋ ಕುರಿತು ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿಸುವ ಕುರಿತು ಹರಿದಾಡಿದ್ದ ಆಡಿಯೋ ನಂತರ ನಕಲಿ ಎಂದು ಸಾಬೀತಾಗಿದ್ದುದನ್ನು ಉದಾಹರಣೆಯಾಗಿ ನೀಡಿದರು.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪಗಳು ಹೊಸದೇನಲ್ಲ. ಜೆ.ಹೆಚ್. ಪಟೇಲ್, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇಂತಹ ಆರೋಪಗಳು ಬಂದಿವೆ. ಆದರೆ, ಯಾರೂ ರಾಜೀನಾಮೆ ನೀಡಿಲ್ಲ ಎಂದು ಹೇಳಿದರು.

ಲೋಕಾಯುಕ್ತರಿಗೆ ದೂರು ನೀಡಿದ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ವಾಸ್ತವವಾಗಿ ಅಸ್ತಿತ್ವದಲ್ಲೇ ಇಲ್ಲ. ಈ ಸಂಘ ಸಾಮಾನ್ಯ ಸಭೆ ನಡೆಸಿಲ್ಲ, ವಾರ್ಷಿಕ ಆಡಿಟ್ ಕೂಡ ಮಾಡಿಲ್ಲ. ಹಾಗಿರುವಾಗ ಅದು ಕಾನೂನಾತ್ಮಕ ಸಂಘವೇ? ಎಂದು ಪ್ರಶ್ನಿಸಿದರು.

ಅಧಿಕಾರಿಗಳ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ, ಸ್ವಂತ ಜಿಲ್ಲೆಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡದಿರುವುದು, ಅಮಾನತುಗೊಂಡ ಅಧಿಕಾರಿಗಳಿಗೆ ಕಾರ್ಯನಿರ್ವಹಣಾ ಹುದ್ದೆ ನೀಡದಿರುವುದು, ಬೆಂಗಳೂರು ನಗರದಲ್ಲಿ ಐದು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಹಿಂದಿನ ಸಚಿವರಿಗಿಂತ ನಾನು ಹಲವು ಸುಧಾರಣೆಗಳನ್ನು ತಂದಿದ್ದೇನೆ.

Karnataka Excise Minister RB Timmapur
ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು: ಬಿಜೆಪಿ, ಜೆಡಿಎಸ್ ನಿಂದ ಸದನದಲ್ಲಿ ಅಹೋರಾತ್ರಿ ಧರಣಿ

ಈ ಹಿಂದೆ ಒಬ್ಬೊಬ್ಬರ ಬಳಿ 100, 50, 40 ಮದ್ಯ ಪರವಾನಗಿಗಳು ಇದ್ದವು. ಹಿಂದುಳಿದ ವರ್ಗದವರಿಗೆ ಅವಕಾಶ ಸಿಗಬಾರದೇ? ಅದಕ್ಕಾಗಿಯೇ ಕೇಂದ್ರ ಸರ್ಕಾರದ ಸಂಸ್ಥೆಯಾದ MSTC ಸಹಯೋಗದಲ್ಲಿ ಇ-ಹರಾಜು ವ್ಯವಸ್ಥೆ ಜಾರಿಗೆ ತಂದೆವು. ಇದರಲ್ಲಿ ಭ್ರಷ್ಟಾಚಾರ ಎಲ್ಲಿದೆ? ಎಂದು ಪ್ರಶ್ನಿಸಿದರು.

ಇದೇ ವೇಳೆ ತಮ್ಮ ವಿರುದ್ಧ ದೂರು ನೀಡಿದ ಲಕ್ಷ್ಮೀನಾರಾಯಣ ಅವರು ವಸತಿ ಪ್ರದೇಶದಲ್ಲಿ ಅಕ್ರಮವಾಗಿ CL-7 ಮದ್ಯದಂಗಡಿ ಪರವಾನಗಿ ಪಡೆಯಲು ಯತ್ನಿಸಿದ್ದರು ಹಾಗೂ ಅವರ ವ್ಯಾಪಾರ ಪರವಾನಗಿಯೂ ನಕಲಿಯಾಗಿದೆ ಎಂದು ಆರೋಪಿಸಿದರು.

ಮಂಡ್ಯ ಅಬಕಾರಿ ಡಿಸಿ ನಾಗಶಯನ ವಿರುದ್ಧ ಆರೋಪಗಳು ಬಂದ ಬಳಿಕ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.

“ನಾನು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಹಲವು ಸುಧಾರಣೆಗಳನ್ನು ತಂದಿದ್ದೇನೆ. ನನ್ನ ವಿರುದ್ಧ ಹರಡಲಾಗುತ್ತಿರುವ ಆರೋಪಗಳು ಸುಳ್ಳು ಎಂದರು.

ಏತನ್ಮಧ್ಯೆ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ​​ಮುನಿಯಪ್ಪ ಅವರು, ಪ್ರಕರಣವು ಲೋಕಾಯುಕ್ತದಲ್ಲಿ ಇರುವುದರಿಂದ ತಿಮ್ಮಾಪುರ ಅವರ ರಾಜೀನಾಮೆಯನ್ನು ಕೋರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದು, ಲೋಕಾಯುಕ್ತರು ಸಚಿವರನ್ನು ತಪ್ಪಿತಸ್ಥರೆಂದು ಕಂಡುಕೊಂಡರೆ ರಾಜೀನಾಮೆಗೆ ಆಗ್ರಹಿಸಬಹುದು ಎಂದು ಹೇಳಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ತಿಮ್ಮಾಪುರ್ ಅವರು ವಂಚನೆ ಮಾಡಿ ಹಗರಣದ ವಿಷಯವನ್ನು ಬೇರೆಡೆಗೆ ತಿರುಗಿಸಿದ್ದಾರೆ. ಬಿಜೆಪಿ ಅವರ ವಾದವನ್ನು ಒಪ್ಪುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರನ್ನು ವಜಾಗೊಳಿಸುವವರೆಗೆ ಪ್ರತಿಭಟನೆಗಳನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com