

ಬೆಂಗಳೂರು: ನಿನ್ನಂತಹ ನೂರು ಜನ ಬರುತ್ತಾರೆ, ಹೋಗುತ್ತಾರೆ. ಪಕ್ಷ ಬಿಟ್ಟು ಪಕ್ಷಕ್ಕೆ ಹೋಗಿದ್ದೀಯಾ, ನಿನಗೆ ನಾಚಿಕೆ ಆಗಲ್ಲವಾ? ನಮ್ಮ ಪಕ್ಷಕ್ಕೆ ಬಂದು ಮಂತ್ರಿಯಾಗಿ ಮಜಾ ಮಾಡಿ ಖಾಲಿ ಮಾಡಿಕೊಂಡು ಹೋದಿರಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಶಿವರಾಜ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಕ್ಷಾಂತರ ವಿಷಯವಾಗಿ ಆರ್. ಅಶೋಕ್, ಶಿವರಾಜ್ ತಂಗಡಗಿ ಮತ್ತು ಎಂಪಿ ನರೇಂದ್ರ ಸ್ವಾಮಿ ನಡುವೆ ವಿಧಾನಸಭೆಯಲ್ಲಿ ತೀವ್ರ ವಾಗ್ದಾದ ನಡೆಯಿತು, ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ ತಂಗಡಗಿ, ನಾವು ಐದು ಜನ ಬಂದಿದ್ದರಿಂದ ನೀವು ಸರ್ಕಾರ ಮಾಡಿದ್ದು. ಅಷ್ಟಿದ್ದಿದ್ದರೆ ನನ್ನ ಮನೆ ಮುಂದೆ ಬಂದು ಜೀ ಹುಜೂರ್ ಅಂದಿದ್ದೇಕೆ? ನಿಮ್ಮಿಂದ ನಾವಲ್ಲ. ನಮ್ಮಿಂದ ನೀವು... . ನಾವೇ ಇಲ್ಲ ಎಂದಿದ್ದರೆ ನೀವು ಎಲ್ಲಿರುತ್ತಿದ್ದೀರಿ. ಕಚೇರಿ ಕಟ್ಟಲು ತಾಕತ್ತಿರಲಿಲ್ಲ. ನಿಮಗೆ ನಾಚಿಕೆ ಆಗಬೇಕು ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ವಿಪಕ್ಷ ನಾಯಕ ಅಶೋಕ್ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪಕ್ಷ ಬಿಟ್ಟು ಪಕ್ಷಕ್ಕೆ ಹೋಗಿದ್ದನ್ನು ನೆನಪಿಸಿದ್ದೆ. ಶಿವಲಿಂಗೇಗೌಡರಿಗೂ ಆದನ್ನೇ ಹೇಳಿದ್ದೆ. ನಾವು ಧರಣಿಯಲ್ಲಿದ್ದೆವು. ಸರ್ಕಾರ, ಅಬಕಾರಿ ಸಚಿವರ ವಿರುದ್ಧ ಘೋಷಣೆ ಕೂಗುತ್ತಿದ್ದೆವು.
ಶಿವಲಿಂಗೇಗೌಡರ ಬಗ್ಗೆಯಾಗಲೀ, ಅವರ ಹೆಂಡತಿ, ಕುಟುಂಬದ ಬಗ್ಗೆಯಾಗಲೀ ಕೆಟ್ಟ ಶಬ್ದ ಬಳಸಿರಲಿಲ್ಲ. ಪಕ್ಷ ಬದಲಿಸಿದ್ದಾರೆ. ಜೆಡಿಎಸ್‌ಗೆ ದ್ರೋಹ ಮಾಡಿದ್ದಾರೆ. ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದೆವು ಅದರಲ್ಲಿ ತಪ್ಪೇನಿತ್ತು? ನರೇಂದ್ರಸ್ವಾಮಿ ಕೂಡ ಪಕ್ಷ ಬಿಟ್ಟು ಪಕ್ಷಕ್ಕೆ ಜಂಪ್ ಆಗಿದ್ದರು. ನಮ್ಮ ಪಕ್ಷಕ್ಕೂ ಬಂದಿದ್ದರು. ನಮ್ಮ ಸರ್ಕಾರದಲ್ಲಿ ಮಂತ್ರಿಯಾಗಿ ಮಜಾ ಮಾಡಿ, ಖಾಲಿ ಮಾಡಿಕೊಂಡು ಹೋದರು ಎನ್ನುತ್ತಿದ್ದಂತೆ ನರೇಂದ್ರಸ್ವಾಮಿ ವ್ಯಗ್ರರಾದರು.
ಶಿವಲಿಂಗೇಗೌಡರು ಏನ್ರೀ ದ್ರೋಹ ಮಾಡಿದ್ದಾರೆ? ನಾನು ಯಾವ ಪಕ್ಷಕ್ಕೂ ಹೋಗಿರಲಿಲ್ಲ. ನಾನು ಸ್ವತಂತ್ರನಾಗಿದ್ದೆ. ನಿಮ್ಮದು 110 ಸ್ಥಾನ ಮಾತ್ರ. ಸ್ವತಂತ್ರವಾಗಿ ಸರ್ಕಾರ ಮಾಡಿರಲಿಲ್ಲ. ಮಾಡುವುದೂ ಇಲ್ಲ. ನಾನು ನಾನು 113ನೇಯವನು ಎಂದು ನರೇಂದ್ರಸ್ವಾಮಿ ಹರಿಹಾಯ್ದರು.
ಇದಕ್ಕೆ ಧ್ವನಿಗೂಡಿಸಿದ ಸಚಿವ ಶಿವರಾಜ ತಂಗಡಗಿ, ವಿಷಯಾಂತರ ಮಾಡಲು ಏನೇನೋ ಹೇಳಬೇಡಿ. ನಾವು ಬರದಿದ್ದರೆ ನೀವು ಸರ್ಕಾರವನ್ನೇ ಮಾಡುತ್ತಿರಲಿಲ್ಲ ಎನ್ನುತ್ತಿದ್ದಂತೆ, ಅಶೋಕ್ ಮಾತು ಮುಂದುವರಿಸಿ, ನಿನ್ನಂಥ ನೂರು ಜನ ಬರುತ್ತಾರೆ.
ನಿನ್ನಂತ ಸಾವಿರ ಜನರನ್ನು ಕರೆದುಕೊಂಡು ಬರುತ್ತೇವೆ. ಪಕ್ಷ ಬಿಟ್ಟು ಪಕ್ಷಕ್ಕೆ ಹೋಗಿದ್ದೀಯಾ. ನಾಚಿಕೆ ಆಗಲ್ಲವೇ? ನಾನು ಒಂದೇ ಪಕ್ಷದಲ್ಲಿದ್ದೇನೆ. ನನಗೆ ಹೇಳುತ್ತೀಯಾ? ಎಂದರು. ಈ ವೇಳೆ ಸ್ಪೀಕರ್ ಮಧ್ಯಪ್ರವೇಶಿಸಿ, ಶಿವಲಿಂಗೇಗೌಡರಿಗೆ ಮಾತು ಮುಂದುವರಿಸಲು ಅವಕಾಶ ಕೊಟ್ಟರು.
Advertisement