

ಬೆಂಗಳೂರು: 'ಗಾತ್ರಕ್ಕಿಂತ ಗುಣ ಮುಖ್ಯ' ಅನ್ನುವ ಹಾಗೆ ಸುದೀರ್ಘ ಕಾಲಕ್ಕಿಂತಲೂ ಶಾಶ್ವತ ಸಾಧನೆ ಬಹಳ ಮುಖ್ಯ. ಎಷ್ಟು ದಿನ ಕುರ್ಚಿ ಮೇಲೆ ಕೂತಿದ್ದರು ಎನ್ನುವುದಕ್ಕಿಂತಲೂ ಆ ಸ್ಥಾನದಲ್ಲಿ ಕುಳಿತು ಮಾಡಿದ ಕೆಲಸಗಳಿಗೆ ಮಹತ್ವ ಹೆಚ್ಚು ಎಂದು ಬಿಜೆಪಿ ಹೇಳಿದ್ದು, ಈ ಮೂಲಕ ರಾಜ್ಯದ ದೀರ್ಘಾವಧಿ ಸಿಎಂ ಆಗಿ ದೇವರಾಜ ಅರಸು ದಾಖಲೆಯನ್ನು ಸರಿಗಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಬಿಜೆಪಿ ಟೀಕಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಸಿದ್ದರಾಮಯ್ಯ ಅವರನ್ನು ಅಭಿನಂದಿಸುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಹಿಡಿದು ಟೀಕೆಯನ್ನೂ ಮಾಡಿದ್ದಾರೆ.
'ಗಾತ್ರಕ್ಕಿಂತ ಗುಣ ಮುಖ್ಯ' ಅನ್ನುವ ಹಾಗೆ ಸುದೀರ್ಘ ಕಾಲಕ್ಕಿಂತಲೂ ಶಾಶ್ವತ ಸಾಧನೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಅರಸು ಅವರ ಹತ್ತಿರಕ್ಕೂ ಬರಲಾಗದಿದ್ದರೂ, ಎತ್ತರಕ್ಕೆ ಏರಲಾಗದಿದ್ದರೂ, ಹಿಂದುಳಿದ ವರ್ಗಗಳ ಹರಿಕಾರ ಸನ್ಮಾನ್ಯ ದೇವರಾಜ ಅರಸ್ ಅವರ ದಾಖಲೆ ದಾಟಿ, ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿಗಳಾಗುತ್ತಿರುವ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಅರಸು ಅವರ ಹಲವು ಸೈದ್ಧಾಂತಿಕ ನಿಲುವು, ನಿರ್ಧಾರಗಳನ್ನು, ಕಾರ್ಯಗಳನ್ನು ನಾವು ಮೆಚ್ಚಿಕೊಳ್ಳದೆ ಇದ್ದರೂ, ಅವರ ದಿಟ್ಟತನ, ಜನರ ಬಗ್ಗೆ ಅವರ ಕಾಳಜಿ, ಅವರು ತಂದ ಹಲವು ಐತಿಹಾಸಿಕ ಸುಧಾರಣೆಗಳನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಎಷ್ಟು ದಿನ ಕುರ್ಚಿ ಮೇಲೆ ಕೂತಿದ್ದರು ಎನ್ನುವುದಕ್ಕಿಂತಲೂ ಆ ಸ್ಥಾನದಲ್ಲಿ ಕುಳಿತು ಮಾಡಿದ ಕೆಲಸಗಳಿಗೆ ಮಹತ್ವ ಹೆಚ್ಚು ಎಂದು ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಮನಸ್ಸಿನಲ್ಲಿ ಮೂಡಿದ ಕೆಲವು ಪ್ರಶ್ನೆಗಳನ್ನೂ ವಿಜಯೇಂದ್ರ ಅವರು ಹಂಚಿಕೊಂಡಿದ್ದು, ದೇವರಾಜ ಅರಸು ಅವರು ‘ಉಳುವವನೇ ಭೂಮಿಯ ಒಡೆಯ’ ಸುಧಾರಣೆ ತಂದು ಲಕ್ಷಾಂತರ ಬಡವರ ಜೀವನದಲ್ಲಿ ಪರಿವರ್ತನೆ ತಂದರು. ಅವರೆಂದೂ ಹಗರಣದಲ್ಲಿ ಸಿಲುಕಿ ನಿವೇಶನ ಹಿಂದಿರುಗಿಸಿಲ್ಲ, ಅಕ್ರಮ ವಲಸಿಗರಿಗೆ ಭೂಮಿ ನೀಡಲು ಮುಂದಾಗಲಿಲ್ಲ. ಸುಧಾರಣೆಗೂ ‘ವಹಿವಾಟಿಗೂ’ ವ್ಯತ್ಯಾಸವಿದೆ ಅಲ್ಲವೇ? ಎಂದು ಹೇಳಿದ್ದಾರೆ.
ಅರಸು ಅವರು ಹಿಂದುಳಿದ ವರ್ಗಕ್ಕೆ ‘ಅಧಿಕಾರ’ ನೀಡಿದರು, ಹಿಂದುಳಿದವರನ್ನು ಮುಂದಕ್ಕೆ ತಂದರು. ಅವರು ‘ಅಂಕಿ-ಅಂಶ’ಗಳ ಜಾತಿ ಜನಗಣತಿ ವರದಿ ಹಿಡಿದು ಎಂದೂ ರಾಜಕೀಯ ಮಾಡಲಿಲ್ಲ. ಅರಸು ಅವರು ಹಿಂದುಳಿದ ಸಮಾಜವನ್ನು ಒಗ್ಗೂಡಿಸಿ, ಮೇಲೆಕ್ಕೆತ್ತಲು ರಾಜಕೀಯ ಮಾಡಿದರು, ತಮ್ಮ ರಾಜಕೀಯಕ್ಕಾಗಿ ಸಮುದಾಯಗಳನ್ನು ಬಳಸಿಕೊಂಡು ಮೇಲಕ್ಕೇರಲಿಲ್ಲ. ಅವರೆಂದೂ ಯಾವ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಲಿಲ್ಲ. ಅಹಿಂದ ವರ್ಗಗಳನ್ನು ಬಳಸಿಕೊಂಡು ಮೇಲಕ್ಕೆ ಬರುವುದಕ್ಕೂ, ಆ ವರ್ಗಗಳನ್ನು ಮೇಲೆಕ್ಕೆ ತರುವುದಕ್ಕೂ ವ್ಯತ್ಯಾಸವಿದೆಯಲ್ಲವೇ?
ಅರಸು ಅವರು ಅಂದು ಪ್ರಧಾನಿ ಶ್ರೀಮಂತಿ ಇಂದಿರಾ ಗಾಂಧಿಯವರ ಹೈಕಮಾಂಡ್ ಎದುರು ರಾಜ್ಯದ ಹಿತಕ್ಕಾಗಿ ಎದೆಯುಬ್ಬಿಸಿ ನಿಂತರು. ಅವರೆಂದೂ, ಪ್ರತಿ ನಿರ್ಧಾರಕ್ಕೂ, ದೆಹಲಿಯ ಹಸಿರು ನಿಶಾನೆಗಾಗಿ ಕಾಯುತ್ತಿರಲಿಲ್ಲ. ಅವರೆಂದೂ 'ರಾಜ್ಯಕ್ಕೆ ಮಾರಿ, ಪರರಾಜ್ಯಕ್ಕೆ ಉಪಕಾರಿ' ಆಗಲಿಲ್ಲ, ಹೈಕಮಾಂಡ್ ಹೇಳಿತು ಅಂತ ಅಕ್ರಮ ನಿವಾಸಿಗಳಿಗೆ ಭೂಮಿ ಕೊಡಲು ಮುಂದಾಗಲಿಲ್ಲ. ಕುರ್ಚಿಗಾಗಿ ಯಾರೊಂದಿಗೂ ಒಳ ಒಪ್ಪಂದವನ್ನಾಗಲಿ, ಅದಕ್ಕಾಗಿ ತಂತ್ರಗಾರಿಕೆಯನ್ನಾಗಲಿ ಮಾಡಲಿಲ್ಲ. ‘ಸ್ವಾಭಿಮಾನ’ಕ್ಕೂ ‘ಶರಣಾಗತಿ’ಗೂ ಹೋಲಿಕೆ ಮಾಡಲು ಸಾಧ್ಯವೇ?
ಅರಸು ಅವರು ಶಾಶ್ವತವಾದ ಭೂ ಸುಧಾರಣೆ ತಂದರು. ಚುನಾವಣೆ ಗೆಲ್ಲಲು ಯಾವ ‘ಗ್ಯಾರಂಟಿ’ ಘೋಷಿಸಲಿಲ್ಲ. ರಾಜ್ಯದ ಬೊಕ್ಕಸ ಬರಿದು ಮಾಡಲಿಲ್ಲ. ‘ದೂರದೃಷ್ಟಿ’ಗೂ, ‘ಮತ ದೃಷ್ಟಿ’ಗೂ ದೊಡ್ಡ ಅಂತರವಿದೆ ಅಲ್ಲವೇ? ಅರಸು ಅವರು ಹೊಸ ತಲೆಮಾರಿನ ಹಲವು ನಾಯಕರನ್ನು ಬೆಳೆಸಿದರು. ಅವರೆಂದಿಗೂ ಯಾರನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತಾ, ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಾ ಕಾಲ ಕಳೆಯಲಿಲ್ಲ. 'ಅವರಷ್ಟು' ದಿನಗಳು ಅಧಿಕಾರದಲ್ಲಿರುವುದಕ್ಕೂ, 'ಅವರಂತೆ' ಅಧಿಕಾರ ನಡೆಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇದೇವೇಳೆ ದಾಖಲೆ ಸರಿಗಟ್ಟಿದವರೆಲ್ಲ ಇತಿಹಾಸ ಬರೆಯುವುದಿಲ್ಲ, ಇತಿಹಾಸ ಅವರನ್ನು ನೆನಪಿಟ್ಟುಕೊಳ್ಳುವುದೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
Advertisement