

ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆಗಳು ಜೋರಾಗಿರುವ ನಡುವೆಯೇ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಶುಕ್ರವಾರ ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಸತೀಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳಲು ಸಜ್ಜಾಗಿದ್ದರು. ಇದಕ್ಕೂ ಮುನ್ನ ರಾಜಣ್ಣ ಅವರು ಭೇಟಿ ಮಾಡಿರುವುದು ಕುತೂಹಲ ಮೂಡುವಂತೆ ಮಾಡಿದೆ.
ಇಬ್ಬರೂ ನಾಯಕರು ಕೆಲಕಾಲ ಚರ್ಚೆ ನಡೆಸಿದ್ದು, ಇದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳು ಶುರುವಾಗುವಂತೆ ಮಾಡಿದೆ.
ಆದರೆ, ಈ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಶಾಸಕರು ಒಬ್ಬರನ್ನೊಬ್ಬರು ಭೇಟಿ ಮಾಡುವುದು ಸಹಜ. ಇದಕ್ಕೆ ಬೇರೆ ಅರ್ಥ ನೀಡಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ದೆಹಲಿ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಇದು ಸಂಪೂರ್ಣ ವೈಯಕ್ತಿಕ ಕಾರಣಕ್ಕೆ ಸಂಬಂಧಿಸಿದ್ದು, ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದರು.
ದೆಹಲಿಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದನ್ನು ಪರಿಶೀಲಿಸಲು ಹೋಗುತ್ತಿದ್ದೇನೆ. ರಾಜಕೀಯ ಉದ್ದೇಶ ಇಲ್ಲ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರ ಹೊಸದೇನಲ್ಲ ಎಂದರು.
ಈ ಬಗ್ಗೆ ಚರ್ಚೆಯಾಗುತ್ತಿದೆ ಅಷ್ಟೇ, ಆದರೆ ಯಾವಾಗ ಬದಲಾವಣೆ ಎಂಬುವುದು ಗೊತ್ತಿಲ್ಲ. ನಾಯಕತ್ವ ಬದಲಾವಣೆ ಚರ್ಚೆ ಇವತ್ತಿನಿಂದ ನಡೆಯುತ್ತಿಲ್ಲ. ಆದರೆ, ಬದಲಾವಣೆ ನಾಳೆಯೂ ಇಲ್ಲ, ಮುಂದೆಯೂ ಇಲ್ಲ. ನಮ್ಮ ಹಂತದಲ್ಲಿ ಯಾವುದೂ ಆಗಲ್ಲ. ನಾಯಕತ್ವ ಬದಲಾವಣೆಯನ್ನು ಹೈಕಮಾಂಡ್ ನವರು ತೀರ್ಮಾನಿಸಬೇಕು ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಅಸ್ಸಾಂ ವೀಕ್ಷಕರನ್ನಾಗಿ ನೇಮಕ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆ.ಶಿವಕುಮಾರ್ ಅವರನ್ನು ಅಸ್ಸಾಂ ರಾಜ್ಯದ ಚುನಾವಣಾ ವೀಕ್ಷರನ್ನಾಗಿ ಮಾಡಿದ್ದಾರೆ. ಬೇರೆಯವರನ್ನೂ ಉಸ್ತುವಾರಿ ಮಾಡಿದ್ದಾರೆ. ಎಲೆಕ್ಷನ್ ಮುಗಿಯೋವರೆಗೆ ಅಲ್ಲೇ ಇರಬೇಕಲ್ಲ ಎಂದು ಹೇಳಿದರು.
ಗೃಹ ಇಲಾಖೆಯಲ್ಲಿ ಡಿಕೆಶಿ ಹಸ್ತಕ್ಷೇಪದ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆರೋಪಕ್ಕೆ, “ಜಿಲ್ಲೆಗೆ ಹೋದಾಗ ಸಭೆ ಮಾಡಿರುತ್ತಾರೆ. ಸಚಿವರಾಗಿ ಸಂಬಂಧ ಇಲ್ಲದಿದ್ರೂ ಮಾಡಿರಬಹುದು. ಅದನ್ನು ತಪ್ಪು ಅಂತ ಹೇಗೆ ಹೇಳುತ್ತೀರಿ? ಅವರ ಜಾಗದಲ್ಲಿ ಬೇರೆಯವರು ಇದ್ದರೂ ಮಾಡುತ್ತಿದ್ದರು ಎಂದರು.
ಡಿಕೆಶಿ ನಡೆಯನ್ನ ತಪ್ಪು ಎಂದು ಹೇಳೋಕೆ ಬರುವುದಿಲ್ಲ. ಕುಮಾರಸ್ವಾಮಿ ವ್ಯಾಖ್ಯಾನ ಬೇರೆ ಇರಬಹುದು. ಎಲ್ಲೋ ಒಂದು ಅಪಘಾತ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವನಾಗಿ ಸಭೆ ಮಾಡಬಾರದು ಅಂತ ಏನಿಲ್ಲ ಎಂದು ಸಮರ್ಥಿಸಿಕೊಂಡರು.
Advertisement