

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಬಕಾರಿ ಇಲಾಖೆಯಿಂದ ಲೂಟಿ ಮಾಡಿದ ಹಣವನ್ನು ಅಸ್ಸಾಂ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗ ವರ್ಗಾವಣೆ ಮಾಡುತ್ತಿದೆ ಎಂದು ಬಿಜೆಪಿ ಶುಕ್ರವಾರ ಗಂಭೀರ ಆರೋಪಮಾಡಿದೆ.
ಶುಕ್ರವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಬಿಜೆಪಿ ಸದಸ್ಯರು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಒತ್ತಾಯಿಸಿದರು.
ಸದನದಲ್ಲಿ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಅಬಕಾರಿ ಇಲಾಖೆಯ ಹಗರಣದ ಹಣ ಚುನಾವಣೆಗೆ ಹೋಗುತ್ತಿರುವುದು ನಿಜ. ಅದನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ತಿಮ್ಮಾಪುರ ಮತ್ತು ಅವರ ಪುತ್ರ ಭಾಗಿಯಾಗಿದ್ದಾರೆ ಎನ್ನಲಾದ ಮದ್ಯ ಹಗರಣದ ಕುರಿತು ಚರ್ಚೆಗೆ ಸ್ಪೀಕರ್ ಯು.ಟಿ. ಖಾದರ್ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಸಚಿವರ ವಿರುದ್ಧ ಲೋಕಾಯುಕ್ತದಲ್ಲಿ ಮತ್ತು ಸಾಕ್ಷಿಗಳೊಂದಿಗೆ ದೂರು ದಾಖಲಾಗಿದೆ. ಅಧಿಕಾರಿಗಳೊಂದಿಗೆ ಮಾತನಾಡಿರುವ ಸಾಕ್ಷಿ (ಪೆನ್ ಡ್ರೈವ್) ನನ್ನ ಬಳಿ ಇದೆ ಎಂದು ತೋರಿಸಿದರು. ಇದೇ ರೀತಿಯ ಆರೋಪ ಕೇಳಿ ಬಂದಾಗದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತನಿಖೆಗೂ ಮುಂಚಿತವಾಗಿ ರಾಜೀನಾಮೆ ನೀಡಿದ್ದರು ಎಂದು ಹೇಳಿದರು.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರು ಮಾತನಾಡಿ, "ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಸದನಕ್ಕೆ ಬರುವ ಮೊದಲು ಸಚಿವರ ರಾಜೀನಾಮೆಯನ್ನು ಕೋರಬೇಕು ಎಂದು ತಿಳಿಸಿದರು.
ಬಳಿಕ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಶಾಸಕರು ಈ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು, ಆದರೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ನಂತರ ಅದನ್ನು ಅನುಮತಿಸಲಾಗುವುದು ಎಂದು ಖಾದರ್ ಹೇಳಿದರು. ಇದೇ ವೇಳೆ ಸಚಿವ ತಿಮ್ಮಾಪುರ ಕೂಡ ಚರ್ಚೆಗೆ ಸಿದ್ಧ ಎಂದು ಹೇಳಿದರು.
ಆದರೆ, ಸ್ಪೀಕರ್ ಅವರ ಹೇಳಿಕೆಗೆ ಸಮಾಧಾನಗೊಳ್ಳದ ವಿರೋಧ ಪಕ್ಷದ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದರು. ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಸದನದಲ್ಲಿ ತೀವ್ರ ಗದ್ದಲವುಂಟಾಯಿತು
ಏತನ್ಮಧ್ಯೆ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತಮ್ಮ ಭಾಷಣವನ್ನು ಪೂರ್ಣವಾಗಿ ಓದದಿದ್ದಕ್ಕಾಗಿ ವಿರಾಜಪೇಟೆಯ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಅವರು ಟೀಕಿಸಿದರು. ಬಳಿಕ ಸ್ಪೀಕರ್ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.
Advertisement