

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಮರು ಪರಿಶೀಲನೆಗೆ ಪ್ರತಿಪಕ್ಷ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ರಾಜ್ಯ ಸರ್ಕಾರದ ಈ ಕ್ರಮವನ್ನು 'ಗ್ಯಾರಂಟಿ ಮೋಸ' ಎಂದು ಟೀಕಿಸಿದೆ.
ಎಲ್ಲರಿಗೂ ಫ್ರೀ, ಯಾವುದೇ ಷರತ್ತುಗಳಿಲ್ಲ ಎಂದು ಭಾಷಣ ಬಿಗಿದು ಜನರ ಕಿವಿಗೆ ಹೂವಿಟ್ಟು ಅಧಿಕಾರ ಹಿಡಿದ ಕಾಂಗ್ರೆಸ್, ಈಗ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದೆ. ಆರ್ಥಿಕ ದಿವಾಳಿತನವನ್ನು ಮುಚ್ಚಿಕೊಳ್ಳಲು ಜನಸಾಮಾನ್ಯರನ್ನು ‘ಗೃಹಜ್ಯೋತಿ’ ಯೋಜನೆಯಿಂದ ಹೊರಹಾಕಲು ಕುತಂತ್ರ ಹೆಣೆದಿದೆ ಎಂದು ಗಂಭೀರ ಆರೋಪ ಮಾಡಿದೆ.
ಎಸ್ಕಾಂ ಅಧಿಕಾರಿಗಳು ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ವಿವಿಧ ದಾಖಲೆಗಳನ್ನು ಕೇಳಿ ಜನರನ್ನು ಆತಂಕಕ್ಕೆ ದೂಡಲಾಗುತ್ತಿದೆ. ದಾಖಲೆಗಳ ಹೆಸರಿನಲ್ಲಿ ಜನರನ್ನು ಅನಗತ್ಯವಾಗಿ ಅಲೆದಾಡಿಸಲಾಗುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಉಚಿತ ವಿದ್ಯುತ್ ಪಡೆಯಲು ಪಾನ್ ಕಾರ್ಡ್ ಯಾಕೆ ಬೇಕು? ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ? ಕರ್ನಾಟಕದ ನಿವಾಸಿ ಎಂದು ದೃಢೀಕರಿಸಲು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಸಾಕಾಗುವುದಿಲ್ಲವೇ ಎಂದು ಜೆಡಿಎಸ್, ಸರ್ಕಾರಕ್ಕೆ ಪ್ರಶ್ನಿಸಿದೆ.
ನಿಮ್ಮ ಉದ್ದೇಶ ಸ್ಪಷ್ಟವಾಗಿದೆ: ಕಳ್ಳ ಮಾರ್ಗದಲ್ಲಿ ಷರತ್ತುಗಳನ್ನು ವಿಧಿಸಿ, ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸಿ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನಾಮ ಹಾಕುವುದು!
ಬಡವರು, ರೈತರು ಮತ್ತು ಮಧ್ಯಮ ವರ್ಗದವರನ್ನು ದಿನಕ್ಕೊಂದು ದಾಖಲೆ ಕೇಳಿ ಕಚೇರಿಗಳಿಗೆ ಅಲೆದಾಡಿಸಿ, ಸತಾಯಿಸಿ, ಸೌಲಭ್ಯಗಳಿಂದ ವಂಚಿಸುವುದೇ ನಿಮ್ಮ ಸಾಧನೆಯೇ? ಕಾಂಗ್ರೆಸ್ ದುರಾಡಳಿತದಲ್ಲಿ ಕನ್ನಡಿಗರಿಗೆ ದಿನವೂ ಸಂಕಟ ಎಂದು ಕಿಡಿ ಕಾರಿದೆ.