ತಿರುಪತಿ 'ಆರತಿ' ರಾಜಕೀಯವಲ್ಲ-ಕರ್ನಾಟಕದ ಗೌರವ', ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ: TTD ಆಕ್ಷೇಪದ ಬೆನ್ನಲ್ಲೇ ಡಿಕೆ ಶಿವಕುಮಾರ್ ಸ್ಪಷ್ಟನೆ- Video

ಈ ವಿಚಾರದಲ್ಲಿ ಯಾರೇ ಟೀಕೆ ಮಾಡಿದರೂ ಅದನ್ನು ನಾನು ಸ್ವಾಗತಿಸುತ್ತೇನೆ. ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುವುದಿಲ್ಲ. ದೇವರು ಎಲ್ಲರಿಗೂ ಸೇರಿದ್ದಾನೆ.
DK Shivakumar
ಡಿಕೆ ಶಿವಕುಮಾರ್
Updated on

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಕರ್ನಾಟಕದ ಜನಪ್ರತಿನಿಧಿಗಳಿಗೆ ಮೊದಲ 'ಆರತಿ'ಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುವ ಪ್ರಸ್ತಾವಕ್ಕೆ ಟಿಟಿಡಿ (TTD) ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕೀಯ ವಿಚಾರವಲ್ಲ, ಕರ್ನಾಟಕದ ಗೌರವಕ್ಕೆ ಸಂಬಂಧಿಸಿದ ಪರಂಪರೆಯ ವಿಷಯ ಎಂದು ಹೇಳಿರುವ ಅವರು, ಟೀಕೆಗಳನ್ನು ಸ್ವಾಗತಿಸುತ್ತೇನೆ. ದೇವಸ್ಥಾನದ ನಿಯಮ ಹಾಗೂ ಪ್ರೋಟೋಕಾಲ್‌ಗೆ ಅನುಗುಣವಾಗಿಯೇ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ತಿರುಪತಿ ದೇವಸ್ಥಾನದ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೊದಲ ಆರತಿ ಕರ್ನಾಟಕಕ್ಕೆ ಸಂಬಂಧಿಸಿದ ಪರಂಪರೆಯಾಗಿದ್ದು, ಇದುವರೆಗೆ ನಮ್ಮ ರಾಜ್ಯದ ಅಧಿಕಾರಿಯೊಬ್ಬರು ಅದರಲ್ಲಿ ಭಾಗವಹಿಸುತ್ತಿದ್ದರು. ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವ ಅವಕಾಶವನ್ನು ನಮ್ಮ ರಾಜ್ಯದ ಗಣ್ಯರಿಗೂ ನೀಡುವ ಉದ್ದೇಶವಿದೆ.

ಈ ವಿಚಾರದಲ್ಲಿ ಯಾರೇ ಟೀಕೆ ಮಾಡಿದರೂ ಅದನ್ನು ನಾನು ಸ್ವಾಗತಿಸುತ್ತೇನೆ. ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುವುದಿಲ್ಲ. ದೇವರು ಎಲ್ಲರಿಗೂ ಸೇರಿದ್ದಾನೆ. ಯಾವುದೇ ರಾಜಕೀಯ ಪಕ್ಷದ ಭೇದವಿಲ್ಲದೆ ಸಂಸದರು, ಶಾಸಕರು, ಮೇಯರ್‌ಗಳು, ಜನಪ್ರತಿನಿಧಿಗಳು ಸೇರಿದಂತೆ ರಾಜ್ಯದ ಪ್ರತಿನಿಧಿಗಳು ಈ ಅವಕಾಶ ಪಡೆಯಬಹುದು ಎಂದು ತಿಳಿಸಿದರು.

DK Shivakumar
ತಿರುಪತಿಯನ್ನು ರಾಜಕೀಯ ಅಖಾಡವಾಗಿಸಬೇಡಿ, ಆ ಹಕ್ಕು ಕೇವಲ ಮೈಸೂರು ಮಹಾರಾಜರಿಗೆ ಮಾತ್ರ: ಡಿಕೆ ಶಿವಕುಮಾರ್ ‘ಆರತಿ’ ಪ್ರಸ್ತಾವನೆಗೆ TTD ಗರಂ..!

ಇದೇ ವೇಳೆ ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ವಿವಾದಕ್ಕೂ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ರೈತರ ಬಗ್ಗೆ ಸರ್ಕಾರಕ್ಕೆ ಗೌರವವಿದ್ದು, ಅವರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲ ಎಂದು ಹೇಳಿದರು.

ನಾವು ಕಾನೂನಿಗೆ ಗೌರವ ಕೊಡುತ್ತೇವೆ. ಜೆಡಿಎಸ್ ಹಾಗೂ ಬಿಜೆಪಿ ಈ ವಿಚಾರವನ್ನು ರಾಜಕೀಯಗೊಳಿಸುತ್ತಿವೆ. ರೈತರಿಗೆ ಅವಮಾನ ಮಾಡುವ ಯಾವುದೇ ಉದ್ದೇಶ ನಮ್ಮದಲ್ಲ. ಕಾನೂನು ಪ್ರಕ್ರಿಯೆಯಲ್ಲಿರುವ ಯೋಜನೆಯನ್ನು ಮುಖ್ಯಮಂತ್ರಿ ಎಂಬ ಕಾರಣಕ್ಕೆ ನಾನು ಏಕಪಕ್ಷೀಯವಾಗಿ ರದ್ದುಪಡಿಸಲು ಸಾಧ್ಯವಿಲ್ಲ. ಆದರೆ, ರೈತರ ಹಿತಾಸಕ್ತಿಯನ್ನು ಖಂಡಿತವಾಗಿ ಕಾಪಾಡುತ್ತೇವೆ" ಎಂದು ಭರವಸೆ ನೀಡಿದರು.

ಬಳಿಕ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಇಚ್ಛೆಯಿದ್ದರೆ ಆಗಲೇ ಈ ಯೋಜನೆಯನ್ನು ಕೈಬಿಡಬಹುದಿತ್ತು. ಈಗ ಬಿಜೆಪಿ ಮತ್ತು ಕುಮಾರಸ್ವಾಮಿ ಅಭಿವೃದ್ಧಿಗಿಂತ ರಾಜಕೀಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಬಿಡದಿ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com