

ಬೆಂಗಳೂರು: ಕನ್ನಡಿಗರು ಬಹುಶಃ ಒಂದು ದಿನ ಸೂರ್ಯನೇ ಹುಟ್ಟದ ನೋಡಬಹುದೇನೋ, ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ ಇಲ್ಲದ ದಿನವನ್ನ ನೋಡಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಕುರಿತು ಬಿಜೆಪಿ ವ್ಯಂಗ್ಯವಾಡಿದೆ.
ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿಯವರು ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಕನ್ನಡಿಗರು ಬಹುಶಃ ಒಂದು ದಿನ ಸೂರ್ಯನೇ ಹುಟ್ಟದ ನೋಡಬಹುದೇನೋ, ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ ಇಲ್ಲದ ದಿನವನ್ನ ನೋಡಲು ಸಾಧ್ಯವೇ ಇಲ್ಲ. ಇನ್ನು ಎರಡು ವರ್ಷ ನಡೆಯಲಿರುವ ಡಿಕೆ.ಶಿವಕುಮಾರ್ ಸರ್ಕಾರದ ಈ ನಿತ್ಯ ಕಚ್ಚಾಟಕ್ಕೆ ತೇಪೆ ಹೆಚ್ಚಲು ರಾಹುಲ್ ಗಾಂಧಿ ಅವರು, ಕೆ.ಸಿ. ವೇಣುಗೋಪಾಲ್ ಅವರು, ರಣದೀಪ್ ಸೂರ್ಜೆವಾಲ ಅವರು ಬೆಂಗಳೂರಿನಲ್ಲೇ ಒಂದು ಮನೆ ಮಾಡಿಕೊಂಡು ಇಲ್ಲೇ ಇದ್ದುಬಿಟ್ಟರೆ ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಅಧಿಕಾರ ದಾಹವೇ ಕಾಂಗ್ರೆಸ್ ನ ಪರಮೋಚ್ಛ ಉದ್ದೇಶ, ಜನರ ಕಲ್ಯಾಣವಲ್ಲ. ಮೊದಲು ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದ್ದರು, ಈಗ ಸಚಿವ ಸ್ಥಾನಕ್ಕಾಗಿ, ಖಾತೆಗಾಗಿ ಕಿತ್ತಾಡುತ್ತಿದ್ದಾರೆ. ಭ್ರಷ್ಟಾಚಾರ ಅಧಿಕಾರ ಲಾಲಸೆ ಹಾಗೂ ಲಾಭದಾಯಕ ಹುದ್ದೆಗಳಿಗಾಗಿ ಕಿತ್ತಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅತಿ ಶೀಘ್ರದಲ್ಲಿ ಪತನಗೊಳ್ಳಲಿದೆ ಎಂಬ ಬಿಜೆಪಿ ನಿರೀಕ್ಷೆ ನಿಜವಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದು ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿರುವುದು ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮುಂಗಾರು ಹಂಗಾಮು ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ರೈತರಿಗೆ ಬೀಜ ರಸಗೊಬ್ಬರ ಮುಂತಾದ ನೆರವು ನೀಡಬೇಕಾದ ರಾಜ್ಯ ಸರ್ಕಾರ ಹೀಗೆ ಅಧಿಕಾರದ ಕಿತ್ತಾಟದಲ್ಲಿ ತೊಡಗಿರುವುದು ಕರ್ನಾಟಕದ ದುರಂತವೇ ಸರಿ.
ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ತಮ್ಮ ಸರ್ಕಾರದ ಆಂತರಿಕ ಕಚ್ಚಾಟವನ್ನು ಬದಿಗೊತ್ತಿ ರಾಜ್ಯದ ರೈತರ, ಕೃಷಿ ಕಾರ್ಮಿಕರ, ಬಡವರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಒಂದು ಕ್ಷಣವು ಅಧಿಕಾರದಲ್ಲಿ ಉಳಿಯದೆ ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನಾದೇಶ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ನಡುವೆ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪಿಚ್ಚರ್ ಅಭಿ ಬಾಕಿ ಹೈ.. ಎಂದು ಮಾರ್ಮಿಕವಾಗಿ ನುಡಿದಿದೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಸಂಪುಟ ರಚನೆಯಾಗಿ ಎರಡನೇ ದಿನಕ್ಕೆ ಪತನವಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ರಾಮಲಿಂಗಾ ರೆಡ್ಡಿ ಅವರು ಇಂಟರ್‌ವೆಲ್ ಸಿಎಂ ಡಿಕೆ.ಶಿವಕುಮಾ್ ಅವರ ಅವಧಿಯಲ್ಲೂ ಕಿತ್ತಾಟ ಮುಂದುವರಿಯಲಿದೆ ಎಂಬ ದೊಡ್ಡ ಸಂದೇಶ ರವಾನಿಸಿದಂತಿದೆ.
ಆಂತರಿಕ ಕಚ್ಚಾಟಗಳಲ್ಲೇ ಮುಳುಗುವ ಮುನ್ಸೂಚನೆ ಈಗಲೇ ಸಿಕ್ಕಿರುವಾಗ ಇನ್ನು ರಾಜ್ಯದ ಹಳಿತಪ್ಪಿರುವ ಆಡಳಿತ ಸರಿದಾರಿಗೆ ಹೋಗಬಹುದು ಎನ್ನುವುದನ್ನು ಈ ನಾಡಿನ ಜನ ನಿರೀಕ್ಷಿಲು ಸಾಧ್ಯವೇ? "ಈ ಪೆಟ್ಟು ಯಾರ ಒಳ ಏಟು" ಎಂದು ತಿಳಿದುಕೊಳ್ಳುವುದರಲ್ಲೇ ಬಂಡೆ ಜೆಲ್ಲಿಪುಡಿಯಾಗುವ ಎಲ್ಲಾ ಮುನ್ಸೂಚನೆ ಸಿಕ್ಕಂತಿದೆ ಎಂದು ಹೇಳಿದೆ.
ಜೆಡಿಎಸ್ ಪೋಸ್ಟ್ ಮಾಡಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಮೊನ್ನೆವರೆಗೂ ಕುರ್ಚಿ ಕಿತ್ತಾಟ, ಇಂದು ಖಾತೆ ಕಚ್ಚಾಟ. ಡಿಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಮೂರೇ ದಿನಕ್ಕೆ ಕಾಂಗ್ರೆಸ್‌ನ ಅಸಲಿ ಬಣ್ಣ ಬಯಲಾಗಿದೆ. ಖಾತೆ ಹಂಚಿಕೆಯಾದ ಕೆಲವೇ ಗಂಟೆಗಳಲ್ಲಿ ರಾಮಲಿಂಗಾ ರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆಶಿ ಸಂಪುಟದಿಂದ ಹೊರ ನಡೆದಿದ್ದಾರೆ. ಡಿಕೆಶಿ ಸರ್ಕಾರದ ಆಂತರಿಕ ಕಚ್ಚಾಟ ಬೀದಿಗೆ ಬಿದ್ದಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ (GBA) ಖಾತೆ ನೀಡದ್ದಕ್ಕೆ ಬೇಸತ್ತು ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು, ತಮಗೆ ಹಂಚಿಕೆಯಾಗಿದ್ದ ಜಲಸಂಪನ್ಮೂಲ ಖಾತೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಜನರ ಸೇವೆ, ರಾಜ್ಯದ ಅಭಿವೃದ್ಧಿಗಿಂತ 'ಕಲೆಕ್ಷನ್' ಖಾತೆಗಳ ಮೇಲೆಯೇ ಹೆಚ್ಚು ವ್ಯಾಮೋಹ! ಬೆಂಗಳೂರನ್ನು ಎಟಿಎಂ (ATM) ಮಾಡಿಕೊಳ್ಳುವ ಖಾತೆಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಮೂರು ವರ್ಷ ಕುರ್ಚಿ ಕಿತ್ತಾಟದಲ್ಲೇ ಕಳೆದ ಇವರು, ಈಗ ಖಾತೆ ಕಚ್ಚಾಟದಲ್ಲಿ ರಾಜ್ಯವನ್ನು ಅಧೋಗತಿಗೆ ತಳ್ಳುತ್ತಿದ್ದಾರೆ. ಜನಹಿತ ಮರೆತು ಕೇವಲ ಅಧಿಕಾರಕ್ಕಾಗಿ ಬಡಿದಾಡುತ್ತಿರುವ ಅದಕ್ಷ ಕಾಂಗ್ರೆಸ್ ಸರ್ಕಾರಕ್ಕೆ ಮುಂದೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದೆ.
Advertisement