

ಬೆಂಗಳೂರು: ಜೂನ್ 18 ರಂದು ಏಳು ಎಂಎಲ್‌ಸಿ ಸ್ಥಾನಗಳಿಗೆ ನಡೆಯುವ ಚುನಾವಣೆಯ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಭೇಟಿ ನೀಡುವ ಸಾಧ್ಯತೆಗಳಿದ್ದು, ಇದರ ಬೆನ್ನಲ್ಲೇ ಸಚಿವ ಸ್ಥಾನ ಪಡೆಯಲು ನಾಯಕರು ತೀವ್ರ ಲಾಬಿ ನಡೆಸುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತ ರಾಯಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ಮಂಗಳವಾರ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಬಬಲೇಶ್ವರ ಕ್ಷೇತ್ರದ ಶಾಸಕ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ವಿಜಯಪುರ ಜಿಲ್ಲೆಯಿಂದ ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ ಸಿಗುವುದನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಎಂ.ಬಿ. ಪಾಟೀಲ್, ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಈ ನಡುವೆ ಯಶವಂತ ರಾಯಗೌಡ ಪಾಟೀಲ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಲು ಶಿವಕುಮಾರ್ ಒಲವು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರ ನಿವಾಸದ ಎದುರು ಸಹ ಪ್ರತಿಭಟನೆ ನಡೆಯಿತು.
ತುಮಕೂರಿನಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ತಾವೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಘೋಷಿಸಿದ್ದಾರೆ.
ಪ್ರಸ್ತುತ ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅವರ ಅವಕಾಶಗಳು ಕಡಿಮೆ ಎನ್ನಲಾಗುತ್ತಿದ್ದರೂ, ಕುಂಚಿಟಿಗ ಒಕ್ಕಲಿಗ ಸಮುದಾಯದ ಏಕೈಕ ಕಾಂಗ್ರೆಸ್ ಶಾಸಕ ಎಂಬ ಕಾರಣದಿಂದ ಅವರ ಸಮುದಾಯದವರು ಸಚಿವ ಸ್ಥಾನಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ತಿಪಟೂರು ಶಾಸಕ ಕೆ ಷಡಕ್ಷರಿ ಕೂಡ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮುಂದುವರಿಸಿದ್ದಾರೆ. ಇತ್ತೀಚೆಗೆ ದೆಹಲಿ ಭೇಟಿಯ ವೇಳೆ ಅಸ್ವಸ್ಥಗೊಂಡಿದ್ದ ಅವರು ಮಂಗಳವಾರ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಯನ್ನು ಮುಂದಿಟ್ಟರು.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಏಕೈಕ ವೀರಶೈವ-ಲಿಂಗಾಯತ ಶಾಸಕ ತಾವಾಗಿರುವುದರಿಂದ ಸಚಿವ ಸ್ಥಾನಕ್ಕೆ ಅರ್ಹತೆ ಹೊಂದಿದ್ದೇನೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಮಾಜಿ ಸಚಿವ ಮಧು ಬಂಗಾರಪ್ಪ ಅವರು ಈಡಿಗ ಸಮುದಾಯದ ಕೋಟಾದಡಿ ಸಚಿವ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಮತ್ತೊಂದೆಡೆ ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಾಗರ ಕ್ಷೇತ್ರದ ಶಾಸಕ ಬೇಲೂರು ಗೋಪಾಲಕೃಷ್ಣ ಅವರಿಗೆ ಬೆಂಬಲ ನೀಡಿದ್ದಾರೆ.
ಹೊಸ ಮುಖಗಳಿಗೂ ಅವಕಾಶ ಸಿಗುವ ಸಾಧ್ಯತೆಗಳಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲ ಹೊಂದಿರುವ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಿದ್ದರಾಮಯ್ಯ ಆಪ್ತರೆಂದು ಗುರುತಿಸಿಕೊಂಡಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಚಿವ ಸಂಪುಟ ಪ್ರವೇಶಿಸುವ ಸಾಧ್ಯತೆಗಳ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಜೂನ್ 21ರಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಿ.ಕೆ. ಹರಿಪ್ರಸಾದ್ ಅವರು ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆ ಇದೆ.
ಆದರೆ ಸಚಿವ ಸ್ಥಾನಕ್ಕಾಗಿ ಸುಮಾರು 60ಕ್ಕೂ ಹೆಚ್ಚು ಆಕಾಂಕ್ಷಿಗಳು ಪೈಪೋಟಿಯಲ್ಲಿರುವುದರಿಂದ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಜೂನ್ 23ರಿಂದ ಕಾಂಗ್ರೆಸ್ ಆರಂಭಿಸಲಿರುವ ಎಸ್‌ಐಆರ್ ಜಾಗೃತಿ ಅಭಿಯಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಪ್ರತಿ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಿಸುವ ಉದ್ದೇಶದಿಂದ ಅದರ ಮೊದಲು ಸಚಿವ ಸಂಪುಟ ವಿಸ್ತರಣೆ ನಡೆಯುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
Advertisement