ತಾಕತ್ತಿದ್ದರೆ ಯಡಿಯೂರಪ್ಪ-ವಿಜಯೇಂದ್ರರನ್ನು ಪಕ್ಷದಿಂದ ಹೊರ ಹಾಕಿ: ಸ್ವಪಕ್ಷದ ನಾಯಕರಿಗೇ ರೇಣುಕಾಚಾರ್ಯ ಸವಾಲು..!

ತಾಕತ್ತಿದ್ದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಪಕ್ಷದಿಂದ ಹೊರಹಾಕಲಿ. ಈ ಸವಾಲು ಪಕ್ಷದ ಹೈಕಮಾಂಡ್‌ಗೆ ಅಲ್ಲ, ವಿಜಯೇಂದ್ರ ವಿರುದ್ಧ ಮಾತನಾಡುತ್ತಿರುವವರಿಗೆ.
ಎಂಪಿ ರೇಣುಕಾಚಾರ್ಯ
ಎಂಪಿ ರೇಣುಕಾಚಾರ್ಯ
Updated on

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಮತ್ತೊಮ್ಮೆ ಬಹಿರಂಗವಾಗಿದ್ದು, ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನ (ಕ್ರಾಸ್‌ ವೋಟಿಂಗ್‌)ದ ಬಳಿಕ ಪಕ್ಷದೊಳಗಿನ ಬಣ ರಾಜಕೀಯ ತೀವ್ರಗೊಂಡಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೇ ಗುರಿಯಾಗಿಸಿಕೊಂಡು ಕೆಲ ನಾಯಕರು ಹೊಲಸು ರಾಜಕೀಯ ಮಾಡುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತರಾದ ಎಂ.ಪಿ. ರೇಣುಕಾಚಾರ್ಯ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಇದೇ ವೇಳೆ ವಿಜಯೇಂದ್ರ ವಿರುದ್ಧ ಆರೋಪ ಮಾಡುತ್ತಿರುವ ನಾಯಕರಿಗೆ ಸವಾಲು ಹಾಕಿದ ಅವರು, "ತಾಕತ್ತಿದ್ದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಪಕ್ಷದಿಂದ ಹೊರಹಾಕಲಿ. ಈ ಸವಾಲು ಪಕ್ಷದ ಹೈಕಮಾಂಡ್‌ಗೆ ಅಲ್ಲ, ವಿಜಯೇಂದ್ರ ವಿರುದ್ಧ ಮಾತನಾಡುತ್ತಿರುವವರಿಗೆ ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನದ ಹೊಣೆಯನ್ನು ವಿಜಯೇಂದ್ರ ಅವರ ಮೇಲೆ ಹೊರಿಸುವ ಪ್ರಯತ್ನ ನಡೆಯುತ್ತಿದೆ. ಅವರನ್ನು ಬಲಿಪಶು ಮಾಡುವ ಉದ್ದೇಶದಿಂದಲೇ ಕೆಲವರು ವ್ಯವಸ್ಥಿತವಾಗಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಹಿರಿಯ ನಾಯಕರೊಬ್ಬರು ಮಾತನಾಡಿ, ಪಕ್ಷದ ಮುಖ್ಯ ವಕ್ತಾರರಾಗಿದ್ದ ಎಂ.ಜಿ. ಮಹೇಶ್ ಅವರನ್ನು ಇತ್ತೀಚೆಗೆ ವಜಾಗೊಳಿಸಿದ ಸಮಯವೇ ಅನುಮಾನ ಹುಟ್ಟಿಸುವಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಂಪಿ ರೇಣುಕಾಚಾರ್ಯ
ಹಳೇ ಮೈಸೂರು ಭಾಗದವರನ್ನೇ ಒಕ್ಕಲಿಗರು ಅನ್ನೋದು, 'ಮಂಗಳೂರು ಕಡೆಯವರು ದೊಡ್ಡ ಗೌಡರಲ್ಲ': ಸದಾನಂದ ಗೌಡ ವಿರುದ್ಧ ಶಾಸಕ ಎಸ್.ಆರ್ ವಿಶ್ವನಾಥ್ ವಾಗ್ದಾಳಿ

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ವಿಜಯೇಂದ್ರ ವಿರುದ್ಧ ಮಾತನಾಡಿರುವ ಆಡಿಯೋ ಸೋರಿಕೆಯಾಗಿರುವುದನ್ನೂ ಉಲ್ಲೇಖಿಸಿದ ಅವರು, ಅದರಲ್ಲಿರುವ ಕೆಲವು ಅಂಶಗಳು "ದೆಹಲಿ ಮಟ್ಟದ ಪ್ರಭಾವಿ ನಾಯಕರ ಪಾತ್ರವಿರುವ ಬಗ್ಗೆ ಅನುಮಾನ ಮೂಡಿಸುತ್ತವೆ ಎಂದು ಹೇಳಿದ್ದಾರೆ.

ಟಿಕೆಟ್ ಹಂಚಿಕೆ, ರಾಜ್ಯ ಘಟಕದ ಮೇಲಿನ ನಿಯಂತ್ರಣ ಹಾಗೂ ನಾಯಕತ್ವದ ಪ್ರಶ್ನೆಯಲ್ಲಿ ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಬಣ ಸಂಘರ್ಷ ನಡೆಯುತ್ತಿದೆ. ಯಡಿಯೂರಪ್ಪ ಬಣವನ್ನು ಕಡೆಗಣಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿದ್ದು, ಅಡ್ಡಮತದಾನ ವಿವಾದದಿಂದ ಆ ಭಿನ್ನಾಭಿಪ್ರಾಯಗಳು ಮತ್ತೆ ತೀವ್ರಗೊಂಡಂತಾಗಿದೆ.

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. "ಈ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲು ಬಯಸುವುದಿಲ್ಲ" ಎಂದು ಮಾತ್ರ ಹೇಳಿದರು.

ಇದರಿಂದ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಹೆಚ್ಚುತ್ತಿರುವ ಬಣ ರಾಜಕೀಯ ಮತ್ತು ಪರಸ್ಪರ ಆರೋಪ-ಪ್ರತ್ಯಾರೋಪಗಳು ಪಕ್ಷದ ಹೈಕಮಾಂಡ್‌ಗೆ ಹೊಸ ತಲೆನೋವಾಗಿ ಪರಿಣಮಿಸಿರುವುದು ಸ್ಪಷ್ಟವಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com