

ಚಿತ್ರದುರ್ಗ: ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾರ್ಚ್ 22ರಿಂದ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧರಿಸಿದೆ.
ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಪಿ. ರಾಜೀವ್ ಅವರು, ಪಾದಯಾತ್ರೆ ಕುರಿತು ಮಾಹಿತಿ ನೀಡಿದರು.
ಮಾರ್ಚ್ 22ರಂದು ಚಿತ್ರದುರ್ಗದಿಂದ ಹೋರಾಟ ಆರಂಭವಾಗಲಿದೆ. ಮಾರ್ಚ್ 27ರಂದು ಪಾದಯಾತ್ರೆ ವಿಧಾನಸೌಧ ತಲುಪಲಿದ್ದು, ಆ ದಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಹೇಳಿದರು. ಆರಂಭದ ದಿನವೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಮೊದಲ ದಿನವೇ ಸರ್ಕಾರ ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ನ್ಯಾಯ ಒದಗಿಸಿದರೆ ಉತ್ತಮ. ಇಲ್ಲವಾದರೆ ಹೋರಾಟವನ್ನು ದಿನದಿಂದ ದಿನಕ್ಕೆ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.
ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಅವರು ಮಾತನಾಡಿ, ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಮೂರು ದಶಕಗಳ ಹೋರಾಟವನ್ನು ಗುರುತಿಸಿ ಬಿಜೆಪಿ ಸರ್ಕಾರವೇ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿತ್ತು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ಅವರು, ಮೀಸಲಾತಿ ಹೆಚ್ಚಳವು ಅಂಬೇಡ್ಕರ್ ಅವರ ತತ್ವದ ಫಲ, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆ ಅಲ್ಲ ಎಂದು ಟೀಕಿಸಿದರು.
ಮಾಜಿ ಸಚಿವ ಶಿವನಗೌಡ ನಾಯಕ್ ಮಾತನಾಡಿ, ಒಳ ಮೀಸಲಾತಿ ದೊರಕುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಗುರಿ ಸಾಧಿಸಿದ ಬಳಿಕವೇ ಮನೆಗೆ ಹಿಂದಿರುಗುತ್ತೇವೆ ಎಂದು ಹೇಳಿದರು.
ಈ ಸಭೆಯಲ್ಲಿ ಸಂಸದ ಗೋವಿಂದ್ ಎಂ. ಕಾರಜೋಳ, ಮಾಜಿ ಸಂಸದ ಎ. ನಾರಾಯಣಸ್ವಾಮಿ, ಮಾಜಿ ಸಚಿವ ಎನ್. ಮಹೇಶ್, ಬಂಗಾರು ಹನುಮಂತು, ಸಿಮೆಂಟ್ ಮಂಜು, ಬಸವರಾಜ್ ದಡೇಸುಗುರು, ಮಾಜಿ ಸಂಸದ ಉಮೇಶ್ ಜಾಧವ್, ಪ್ರತಾಪ್ ಗೌಡ, ಕೆ.ಟಿ. ಕುಮಾರಸ್ವಾಮಿ, ಉಮೇಶ್ ಕಾರಜೋಳ, ಮಾದಿಗ ದಂಡೋರದ ನರಸಪ್ಪ, ವೈ. ಸಂಪಂಗಿ ಮತ್ತು ಇತರರು ಉಪಸ್ಥಿತರಿದ್ದರು.
Advertisement