ಇಬ್ಬಗೆ ನೀತಿ: SIR ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಅನುಮಾನ; ಸರ್ಕಾರದಿಂದ ಇಲ್ಲ ವಿರೋಧ !

ಕಳೆದ ಆರರಿಂದ ಏಳು ಸಚಿವ ಸಂಪುಟ ಸಭೆಗಳಲ್ಲಿ ಎಸ್‌ಐಆರ್ ಪೂರ್ವ ಸಿದ್ಧತೆ ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚಿಸಲಾಗಿದೆ. ಆದರೆ, ಪ್ರಸ್ತಾವಿತ ಪರಿಷ್ಕರಣೆಯನ್ನು ವಿರೋಧಿಸಿಲ್ಲ
Siddaramaiah
ಸಿದ್ದರಾಮಯ್ಯ
Updated on

ಕರ್ನಾಟಕ ಕಾಂಗ್ರೆಸ್ ನಾಯಕರು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸೋಲಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ( SIR) ವೇಳೆ ನಡೆದ ಭಾರಿ ಪ್ರಮಾಣದ ಮತದಾರರ ಹೆಸರಿನ ಅಳಿಸುವಿಕೆಯನ್ನು ಕಾರಣವೆಂದು ಪದೇ ಪದೇ ಉಲ್ಲೇಖಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಈ ವಿವಾದಾತ್ಮಕ ಪ್ರಕ್ರಿಯೆಗೆ ಅಧಿಕೃತವಾಗಿ ವಿರೋಧ ವ್ಯಕ್ತಪಡಿಸುತ್ತಿಲ್ಲ.

ಕಳೆದ ಆರರಿಂದ ಏಳು ಸಚಿವ ಸಂಪುಟ ಸಭೆಗಳಲ್ಲಿ ಎಸ್‌ಐಆರ್ ಪೂರ್ವ ಸಿದ್ಧತೆ ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚಿಸಲಾಗಿದೆ. ಆದರೆ, ಪ್ರಸ್ತಾವಿತ ಪರಿಷ್ಕರಣೆಯನ್ನು ವಿರೋಧಿಸುವುದಾಗಲಿ ಅಥವಾ ಕೆಲ ನಾಗರಿಕ ಸಂಘಟನೆಗಳು ಬೇಡಿಕೆಯಿಟ್ಟಿರುವಂತೆ ಸಂಪೂರ್ಣ ಪ್ರಕ್ರಿಯೆಯನ್ನು ಮರುಪರಿಶೀಲಿಸುವುದಾಗಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.

ಸಾಮಾಜಿಕ ಹೋರಾಟಗಾರರು ಮತ್ತು ಸಂಘಟನೆಗಳ ಒಕ್ಕೂಟವು ಮತದಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಬೇಕು, ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಬೇಕು ಮತ್ತು ಪರಿಷ್ಕರಣೆ ಹಾಗೂ ಮೇಲ್ಮನವಿ ಸಲ್ಲಿಸುವ ಅವಧಿಯನ್ನು ಮೂರರಿಂದ ಆರು ತಿಂಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದೆ. ಜೊತೆಗೆ, ಈ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಎಂಸಿ ಸೋಲಿಗೆ ಆಡಳಿತ ವಿರೋಧಿ ಅಲೆ ಕಾರಣವಾಗಿರಬಹುದು ಅಥವಾ ಎಸ್‌ಐಆರ್ ವೇಳೆ ಮತದಾರರ ಹೆಸರುಗಳನ್ನು ಅಳಿಸಿರುವುದೂ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ನಿಜವಾದ ಮತದಾರರನ್ನು ಗುರಿಯಾಗಿಸಲು ನನ್ನ ಸರ್ಕಾರ ಅವಕಾಶ ನೀಡುವುದಿಲ್ಲ. ಯಾವುದೇ ಪರಿಷ್ಕರಣೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಬಂಗಾಳದಲ್ಲಿ “ಲಾಜಿಕಲ್ ಡಿಸ್ಕ್ರೆಪೆನ್ಸಿ” ಎಂಬ ವರ್ಗವನ್ನು ಬಳಸಿಕೊಂಡು 27 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು. ಬಂಗಾಳದ 50 ಕ್ಷೇತ್ರಗಳಲ್ಲಿ ಎಸ್‌ಐಆರ್ ಅಳಿಸುವಿಕೆ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿತ್ತು. ಆ ಕ್ಷೇತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬಿಜೆಪಿ ಗೆದ್ದಿದೆ. ಎಸ್‌ಐಆರ್ ಕೇವಲ ಒಂದು ಭಾಗ ಮಾತ್ರ; ದೊಡ್ಡ ಮಟ್ಟದ ತಂತ್ರವೇ ಗಮನಿಸಬೇಕಾದ ವಿಷಯ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್, ನಕಲಿ ಮತದಾರರನ್ನು ತಡೆಯಲು ಅನುಮಾನಾಸ್ಪದ ಪ್ರಕ್ರಿಯೆ ನಡೆಸುವುದಕ್ಕಿಂತ ಆಧಾರ್ ಕಾರ್ಡ್ ನ್ನು ಮತದಾರರ ಗುರುತಿನ ಚೀಟಿಗೆ ಜೋಡಿಸಲು ಕೇಂದ್ರ ಸರ್ಕಾರ ಮುಂದಾಗಲಿ ಎಂದು ಸವಾಲು ಹಾಕಿದರು.

ಮುಖ್ಯ ಚುನಾವಣಾಧಿಕಾರಿ, ಎಸ್‌ಐಆರ್ ಪೂರ್ವ ಮತದಾರರ ಮ್ಯಾಪಿಂಗ್ ಮತ್ತು ವೇಳಾಪಟ್ಟಿ ಕುರಿತು ಸಚಿವ ಸಂಪುಟಕ್ಕೆ ಮಾಹಿತಿ ನೀಡುತ್ತಿದ್ದಾರೆ. 2002ರ ಮತದಾರರ ಪಟ್ಟಿಯಲ್ಲಿ ಕರ್ನಾಟಕದಲ್ಲಿ 3.55 ಕೋಟಿ ಮತದಾರರಿದ್ದರೆ, 2025ರ ವೇಳೆಗೆ ಅದು 5.57 ಕೋಟಿಗೆ ಏರಿಕೆಯಾಗಿದೆ.

ಎಸ್‌ಐಆರ್ ಘೋಷಣೆಯಾದ ನಂತರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಯಲಿದೆ. ದಾವೆಗಳು ಮತ್ತು ಆಕ್ಷೇಪಣೆಗಳ ಕುರಿತು ಮಾಹಿತಿ ಇಸಿಐನೆಟ್ ಮೂಲಕ ಪ್ರಕಟವಾಗಲಿದೆ. ಫಾರ್ಮ್ 6, 6ಎ, 7 ಮತ್ತು 8ಗಳೊಂದಿಗೆ ಕರಡು ಹಾಗೂ ಅಂತಿಮ ಮತದಾರರ ಪಟ್ಟಿಯನ್ನೂ ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುತ್ತದೆ.

ಎಸ್‌ಐಆರ್ ಯಾವುದೇ ಸಮಯದಲ್ಲಿ ಜಾರಿಗೆ ಬರಬಹುದು ಎಂಬುದನ್ನು ಸರ್ಕಾರ ಒಪ್ಪಿಕೊಂಡಿದ್ದರೂ, ಕಾಂಗ್ರೆಸ್ ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಸ್ವತಂತ್ರ ಮ್ಯಾಪಿಂಗ್ ಕಾರ್ಯವನ್ನು ಆರಂಭಿಸಿದೆ. ಇದಕ್ಕಾಗಿ ಬ್ಲಾಕ್ ಮಟ್ಟದ ಏಜೆಂಟ್‌ಗಳು ಮತ್ತು ದೊಡ್ಡ ಪ್ರಮಾಣದ ಸ್ವಯಂಸೇವಕರನ್ನು ನೇಮಿಸಿ, ಎಸ್‌ಐಆರ್ ಜಾರಿಯಾದ ಬಳಿಕ ಮತದಾರರಿಗೆ ನೆರವು ನೀಡಲು ಸಿದ್ಧತೆ ನಡೆಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com