

ಬೆಂಗಳೂರು: 2028ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಮತ್ತು ಆರ್‌ಎಸ್‌ಎಸ್ ಈಗಿನಿಂದಲೇ ಭಾರೀ ರಾಜಕೀಯ ತಂತ್ರ ರೂಪಿಸುತ್ತಿವೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತಳಮಟ್ಟದ ಸಂಘಟನಾ ಕಾರ್ಯ, ಸಮುದಾಯ ಆಧಾರಿತ ಸಂಪರ್ಕ ಅಭಿಯಾನ ಮತ್ತು ಬೂತ್‌ಮಟ್ಟದ ಚಟುವಟಿಕೆಗಳ ಮೂಲಕ ಬಿಜೆಪಿ ಸಾಧಿಸಿದ ಯಶಸ್ಸಿನ ಮಾದರಿಯನ್ನು ಇದೀಗ ಕರ್ನಾಟಕದಲ್ಲೂ ಅನುಸರಿಸಲು ಸಂಘ ಪರಿವಾರ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಆಚರಣೆ ಅಂಗವಾಗಿ ರಾಜ್ಯಾದ್ಯಂತ ವ್ಯಾಪಕ ಚಟುವಟಿಕೆಗಳನ್ನು ಆರಂಭಿಸಿದ್ದು, ಗ್ರಾಮೀಣ ಪ್ರದೇಶಗಳಿಂದ ನಗರಗಳವರೆಗೆ ತನ್ನ ನೆಲೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯಕ್ಕೆ ವೇಗ ನೀಡಿದೆ.
ಸಾಮಾಜಿಕ ಸೌಹಾರ್ದತೆ, ಕುಟುಂಬ ಮೌಲ್ಯಗಳು, ಸ್ವದೇಶಿ ಚಿಂತನೆ, ಪರಿಸರ ಜಾಗೃತಿ ಮತ್ತು ನಾಗರಿಕ ಪ್ರಜ್ಞೆ ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ಸಂಘದ ತಳಮಟ್ಟದ ಸಂಪರ್ಕ ಅಭಿಯಾನ ನಡೆಯುತ್ತಿದೆ.
ಇದೇ ವೇಳೆ ಬಿಜೆಪಿ ಕೂಡ ಸಂಘದ ನೆಟ್‌ವರ್ಕ್ ಅನ್ನು ರಾಜಕೀಯವಾಗಿ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಶೇಷವಾಗಿ ದಲಿತ, ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಲ್ಲಿ ಮೂಡಿರುವ ಅಸಮಾಧಾನವನ್ನು ಚುನಾವಣಾ ಅಸ್ತ್ರವನ್ನಾಗಿಸಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ಜಾರಿಗೊಳಿಸಿದ್ದರೂ, ಕೆಲವು ಸಮುದಾಯಗಳಲ್ಲಿ ಇನ್ನೂ ಅಸಮಾಧಾನ ಉಳಿದಿದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ ಸಚಿವ ಸಂಪುಟ ಪುನರ್‌ರಚನೆ ವೇಳೆ ಬಿ.ನಾಗೇಂದ್ರ ಮತ್ತು ಕೆ.ಎನ್.ರಾಜಣ್ಣ ಅವರನ್ನು ಕೈಬಿಟ್ಟಿರುವುದು ಕೆಲವು ಎಸ್‌ಟಿ ಸಮುದಾಯಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೇ ಅವಕಾಶವನ್ನಾಗಿ ಬಳಸಿಕೊಳ್ಳಲು ಬಿಜೆಪಿ ಈಗಾಗಲೇ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಭೆಗಳನ್ನು ನಡೆಸುತ್ತಿದೆ ಎನ್ನಲಾಗುತ್ತಿದೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಕೂಡ ಎಸ್‌ಸಿ-ಬಲ ಸಮುದಾಯಗಳನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ನಿರಂತರ ಕರ್ನಾಟಕ ಭೇಟಿಗಳು ಕೂಡ ರಾಜಕೀಯ ಮಹತ್ವ ಪಡೆದುಕೊಂಡಿವೆ.
ಇತ್ತೀಚೆಗೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸ್ವಯಂಸೇವಕರ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಭಾಗವತ್, ಬಳಿಕ ಮೈಸೂರಿನ ಸುತ್ತೂರು ಮಠ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು. ಆದರೆ, ಸಂಘದ ಮೂಲಗಳು ಇದನ್ನು ರಾಜಕೀಯಕ್ಕೆ ಸಂಬಂಧಿಸಿದದ್ದು ಅಲ್ಲ ಎಂದು ಸ್ಪಷ್ಟಪಡಿಸಿವೆ.
ಇನ್ನೊಂದೆಡೆ, ಅಸ್ಸಾಂ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಪರ ರಾಜಕೀಯ ಮಾಡುತ್ತಿದೆ ಎಂಬ ಆರೋಪವನ್ನು ಮುಂದುವರಿಸಿದೆ. ಏಕೆಂದರೆ ಗೆದ್ದ 19 ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ 18 ಮಂದಿ ಮುಸ್ಲಿಮರಾಗಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರವನ್ನು “ಮುಸ್ಲಿಂ ಪರ” ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
ಒಟ್ಟಾರೆ, 2028ರ ಚುನಾವಣೆಗೆ ಇನ್ನೂ ಸಮಯ ಇದ್ದರೂ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಈಗಿನಿಂದಲೇ ತಳಮಟ್ಟದ ಸಂಘಟನಾ ಬಲವರ್ಧನೆಗೆ ಒತ್ತು ನೀಡುತ್ತಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಶುರುವಾಗುವಂತೆ ಮಾಡಿದೆ.
Advertisement