

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಹಂಚಿಕೆಯಾಗಬೇಕಿದ್ದ ಸುಮಾರು 5,000 ಕೋಟಿ ರೂಪಾಯಿ ಹಣವನ್ನು ಅರ್ಹ ಮಹಿಳೆಯರ ಖಾತೆಗೆ ಜಮೆ ಮಾಡದೆ ವಂಚಿಸಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಣದ ಸಂಪೂರ್ಣ ವಿವರವನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
2024-25ನೇ ಸಾಲಿನಲ್ಲಿ ಮನೆಯ ಯಜಮಾನಿಯರಿಗೆ ಕೇವಲ 10 ತಿಂಗಳ ಹಣವನ್ನು ಮಾತ್ರ ನೀಡಲಾಗಿದ್ದು, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಇನ್ನುವರೆಗೂ ಪಾವತಿಸಿಲ್ಲ. ಈ ಎರಡು ತಿಂಗಳಿಗಾಗಿ ಬರೋಬ್ಬರಿ 5,000 ಕೋಟಿ ರೂಪಾಯಿ ಹಣ ಮೀಸಲಿಟ್ಟಿದ್ದರೂ, ಅದು ಫಲಾನುಭವಿಗಳಿಗೆ ತಲುಪಿಲ್ಲ ಎಂದು ದೂರಿದ್ದಾರೆ.
2024-25ರ ಆರ್ಥಿಕ ವರ್ಷದಲ್ಲಿ ಒಟ್ಟು 1,28,80,594 ಫಲಾನುಭವಿಗಳಿದ್ದರು. ಇವರಿಗಾಗಿ ಬಜೆಟ್‌ನಲ್ಲಿ 28,608.4 ಕೋಟಿ ರೂಪಾಯಿಯನ್ನು ಸರ್ಕಾರ ಮೀಸಲಿಟ್ಟಿತ್ತು. ಆದರೆ, ವಾಸ್ತವದಲ್ಲಿ ಕೇವಲ 23,608 ಕೋಟಿ ರೂಪಾಯಿಯನ್ನು ಮಾತ್ರ 10 ತಿಂಗಳ ಅವಧಿಗೆ ಬಿಡುಗಡೆ ಮಾಡಲಾಗಿದೆ.
ಬಜೆಟ್‌ನಲ್ಲಿ ಹಣ ನಿಗದಿಯಾಗಿದ್ದರೂ, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡದೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರ, ಅರ್ಹ ಫಲಾನುಭವಿಗಳಿಗೆ ತಲುಪಬೇಕಾದ ಹಣವನ್ನು ಸರಿಯಾದ ಸಮಯಕ್ಕೆ ನೀಡದೆ ಸತಾಯಿಸುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement