ರಾಜ್ಯದ ಮುಂದಿನ CM ಆಗಲು ಕಾಂಗ್ರೆಸ್ ಟ್ರಬಲ್ ಶೂಟರ್ ರೆಡಿ: ಯಾರಿದು ಡಿಕೆ ಶಿವಕುಮಾರ್? ರಾಜಕೀಯವಾಗಿ ಬೆಳೆದುಬಂದದ್ದು ಹೇಗೆ?

ವಿದ್ಯಾರ್ಥಿ ನಾಯಕನಾಗಿ ಪಕ್ಷಕ್ಕೆ ಸೇರ್ಪಡೆಯಾಗಿ, ದಶಕಗಳ ಕಾಲ ನಿಷ್ಠೆಯಿಂದ ದುಡಿದಿರುವ ಡಿಕೆ ಶಿವಕುಮಾರ್, ದಕ್ಷಿಣ ಭಾರತದ ಪ್ರಬಲ ನಾಯಕರಾಗಿದ್ದು, ಅವರಿಗೆ ಈಗ ಪಕ್ಷ ಅತ್ಯುನ್ನತ ಜವಾಬ್ದಾರಿಯನ್ನು ನೀಡುತ್ತಿದೆ.
DK Shivakumar
ಡಿಕೆ ಶಿವಕುಮಾರ್
Updated on

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದು, ಡಿಕೆ ಶಿವಕುಮಾರ್ ಅಥವಾ DKS ಎಂದೇ ಜನಪ್ರಿಯರಾಗಿರುವ ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.

ವಿದ್ಯಾರ್ಥಿ ನಾಯಕನಾಗಿ ಪಕ್ಷಕ್ಕೆ ಸೇರ್ಪಡೆಯಾಗಿ, ದಶಕಗಳ ಕಾಲ ನಿಷ್ಠೆಯಿಂದ ದುಡಿದಿರುವ ಡಿಕೆ ಶಿವಕುಮಾರ್, ದಕ್ಷಿಣ ಭಾರತದ ಪ್ರಬಲ ನಾಯಕರಾಗಿದ್ದು, ಅವರಿಗೆ ಈಗ ಪಕ್ಷ ಅತ್ಯುನ್ನತ ಜವಾಬ್ದಾರಿಯನ್ನು ನೀಡುತ್ತಿದೆ.

ಯಾರಿದು ಡಿಕೆ ಶಿವಕುಮಾರ್? ಮೇ 15, 1962 ರಂದು ಬೆಂಗಳೂರು ಬಳಿಯ ಕನಕಪುರದಲ್ಲಿ ಜನಿಸಿದ ಶಿವಕುಮಾರ್ ಪ್ರಭಾವಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಹಲವು ವರ್ಷಗಳ ಕಾಲ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ಪ್ರಮುಖ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ. ವರಿಷ್ಠರಲ್ಲಿಯೂ ನಂಬಿಕೆ, ವಿಶ್ವಾಸ ಉಳಿಸಿಕೊಂಡಿದ್ದಾರೆ.1980 ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶಿಸಿದ ಶಿವಕುಮಾರ್, ಹಂತ ಹಂತವಾಗಿ ಉನ್ನತ ಹುದ್ದೆಗೇರುವ ಮೂಲಕ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ಬಂದು ನಿಂತಿದ್ದಾರೆ.

ಕೇವಲ 27 ವರ್ಷ ವಯಸ್ಸಿನಲ್ಲಿ 1989 ರಲ್ಲಿ ಸಾತನೂರು ಕ್ಷೇತ್ರದಿಂದ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಡಿಕೆ ಶಿವಕುಮಾರ್, ಕ್ಷೇತ್ರ ಪುನರ್ ವಿಂಗಡಣೆ ಬಳಿಕ 2008 ರಿಂದ ನಿರಂತರವಾಗಿ ಕನಕಪುರವನ್ನು ಪ್ರತಿನಿಧಿಸುತ್ತಿದ್ದಾರೆ.

ಶಿವಕುಮಾರ್ ಅವರ ರಾಜಕೀಯ ಜೀವನದುದ್ದಕ್ಕೂ, ನಗರಾಭಿವೃದ್ಧಿ, ಇಂಧನ, ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸೇರಿದಂತೆ ಹಲವಾರು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಅವರ ಆಡಳಿತಾತ್ಮಕ ಅನುಭವ ಮತ್ತು ಅತ್ಯುತ್ತಮ ಸಂಘಟನೆ ಅವರನ್ನು ಕರ್ನಾಟಕ ಕಾಂಗ್ರೆಸ್‌ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರನ್ನಾಗಿ ಮಾಡಿತು.

ಟ್ರಬಲ್ ಶೂಟರ್ ಎಂದೇ ಖ್ಯಾತರಾದ ಡಿಕೆಶಿ: ಜುಲೈ 2020 ರಲ್ಲಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಬಳಿಕ 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರ ನೇತೃತ್ವದಲ್ಲಿ ಪಕ್ಷ ಭರ್ಜರಿ ಗೆಲುವು ಸಾಧಿಸಿತು. ಬಳಿಕ ಅವರು ಉಪ ಮುಖ್ಯಮಂತ್ರಿಯಾದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ರಾಜಕೀಯ ಬಿಕ್ಕಟ್ಟುಗಳನ್ನು ನಿರ್ವಹಿಸುವಲ್ಲಿ ಮತ್ತು ಅಸ್ಥಿರತೆಯ ಅವಧಿಯಲ್ಲಿ ಶಾಸಕರನ್ನು ರಕ್ಷಿಸುವಲ್ಲಿ ವಹಿಸಿದ ಪ್ರಮುಖ ಪಾತ್ರದಿಂದ ಡಿಕೆ ಶಿವಕುಮಾರ್ ಅವರನ್ನು ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿದ್ದಾರೆ.

2017 ರ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಗುಜರಾತಿನ ಶಾಸಕರನ್ನು ಬೆಂಗಳೂರಿಗೆ ಕರೆತರುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಗೆಲುವು ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದರು. ಇದು ಡಿಕೆಶಿವಕುಮಾರ್ ಗೆ ರಾಷ್ಟ್ರಮಟ್ಟದಲ್ಲಿ ವರ್ಚಸ್ಸು ವೃದ್ಧಿಯಾಗಲು ಕಾರಣವಾಯಿತು.

2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿ (ಎಸ್) ಶಾಸಕರ ರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗಿನ ಅವರ ನಿಕಟ ಸಂಬಂಧ ಅವರನ್ನು ಪಕ್ಷದಲ್ಲಿ ಪ್ರಮುಖ ನಾಯಕರನ್ನಾಗಿಸಿತು.

DK Shivakumar
Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ಸಂಪತ್ತು, ವಿವಾದಗಳು ಮತ್ತು ರಾಜಕೀಯ ಪ್ರಭಾವ: ಶಿವಕುಮಾರ್ ಅವರನ್ನು ಭಾರತದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. 2018 ರಲ್ಲಿ ಸಲ್ಲಿಸಿದ ಚುನಾವಣಾ ಅಫಿಡವಿಟ್‌ನಲ್ಲಿ ಅವರು ಸುಮಾರು ₹840 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಅವರು ರಾಜಕೀಯವಾಗಿ ಬೆಳೆಯುತ್ತಿದ್ದಂತೆಯೇ ಕೇಂದ್ರೀಯ ತನಿಖಾ ತಂಡಗಳಿಂದ ದಾಳಿಗೂ ಗುರಿಯಾಗಿದ್ದರು. 2017 ರಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯವು ಅವರ ಮನೆ ಮತ್ತು ಸಹಚರರ ಮನೆ ಮೇಲೆ ದಾಳಿ ನಡೆಸಿತು. ಆ ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಗಳು ಮುಂದುವರೆದಿವೆ. ವಿವಾದಗಳ ಹೊರತಾಗಿಯೂ, ಶಿವಕುಮಾರ್ ಉತ್ತಮ ಸಂಘಟಕರಾಗಿದ್ದು, ಕರ್ನಾಟಕದ ಪ್ರಭಾವಶಾಲಿ ಒಕ್ಕಲಿಗ ಸಮುದಾಯದಲ್ಲಿ ಗಮನಾರ್ಹ ಬೆಂಬಲವನ್ನು ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com