ಅಂಗೈಯಲ್ಲಿ ಆಕಾಶ ತೋರಿಸಿ, ಜೇಬಿಗೆ ಕತ್ತರಿ ಹಾಕುವುದೇ ಈ ಸರ್ಕಾರದ ಗ್ಯಾರಂಟಿ ಮಾದರಿ...!

ನವೆಂಬರ್ 1ರಿಂದ ‘ನೇಗಿಲ ಯೋಗಿ’ ಯೋಜನೆ ಜಾರಿಗೆ ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಲಿಕಾಪ್ಟರ್ ಬಿಟ್ಟು ಹಳ್ಳಿಗಳಿಗೆ ತೆರಳಿ ವಾಸ್ತವ ಪರಿಸ್ಥಿತಿ ನೋಡಬೇಕು.
D.K. Shivakumar
ಸಿಎಂ ಡಿಕೆ.ಶಿವಕುಮಾರ್
Updated on: 

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ವಿವಿಧ ನಿರ್ಧಾರಗಳು ಹಾಗೂ ಯೋಜನೆಗಳನ್ನು ವಿರೋಧಿಸಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸರಣಿ ಪೋಸ್ಟ್‌ಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ.

‘ನೇಗಿಲ ಯೋಗಿ’ ಯೋಜನೆ, ಬಸ್ ಟಿಕೆಟ್ ದರ ಏರಿಕೆ, ಸರ್ಕಾರಿ ಹಾಸ್ಟೆಲ್‌ಗಳಲ್ಲಿನ ನೀರಿನ ಸಮಸ್ಯೆ ಹಾಗೂ ಕಂದಾಯ ಸೇವೆಗಳ ಶುಲ್ಕ ಹೆಚ್ಚಳದ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನವೆಂಬರ್ 1ರಿಂದ ‘ನೇಗಿಲ ಯೋಗಿ’ ಯೋಜನೆ ಜಾರಿಗೆ ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಲಿಕಾಪ್ಟರ್ ಬಿಟ್ಟು ಹಳ್ಳಿಗಳಿಗೆ ತೆರಳಿ ವಾಸ್ತವ ಪರಿಸ್ಥಿತಿ ನೋಡಬೇಕು ಎಂದು ಹೇಳಿದ್ದಾರೆ.

ಬರಗಾಲದಿಂದಾಗಿ ಹಲವು ರೈತರು ಉಳುಮೆ ಮಾಡುವ ಪರಿಸ್ಥಿತಿಯಲ್ಲೇ ಇಲ್ಲ. ಉಳುಮೆ ಮಾಡುತ್ತಿರುವ ರೈತರು ಕೂಡ ಯೋಜನೆ ಜಾರಿಯಾಗುವ ಮುನ್ನವೇ ತಮ್ಮ ಕೆಲಸ ಮುಗಿಸಿಕೊಂಡಿರುತ್ತಾರೆ.

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ಸಮೀಪದ ಹಳೆಯೂರು ಗ್ರಾಮದ ರೈತ ಸುರೇಶ್ ಹಾಗೂ ಅವರ ಕುಟುಂಬ ಬರಗಾಲದಲ್ಲೂ ಕೈಯಿಂದ ಉಳುಮೆ ಮಾಡುತ್ತಿದ್ದಾರೆ. ಅವರ ಎತ್ತುಗಳು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದು, ಟ್ರ್ಯಾಕ್ಟರ್ ಬಾಡಿಗೆ ಪಡೆಯಲು ಹಣವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ರೈತರಿಗೆ ಯೋಜನೆಯ ಲಾಭ ಪಡೆಯಲು ಇನ್ನೂ ಒಂದು ತಿಂಗಳು ಕಾಯಬೇಕೇ ಎಂದು ಪ್ರಶ್ನಿಸಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಕಡಿಮೆ ಮೊತ್ತದ ನೆರವಿನ ಬದಲು ಉತ್ತಮ ಪರಿಹಾರ ನೀಡಿದ್ದರೆ ಅನೇಕ ರೈತರಿಗೆ ಅನುಕೂಲವಾಗುತ್ತಿತ್ತು. ಕೇವಲ ಯೋಜನೆಗಳನ್ನು ಘೋಷಿಸುವುದಷ್ಟೇ ಅಲ್ಲ, ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ನೆರವು ತಲುಪಬೇಕು ಎಂದು ಹೇಳಿದ್ದಾರೆ.

‘ಬಸ್ ದರ ಏರಿಕೆ ಜನರ ಜೇಬಿಗೆ ಕತ್ತರಿ’

ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ನೀಡುತ್ತಿರುವುದರ ಹೊರೆ ಸರಿದೂಗಿಸಲು ಬಸ್ ಟಿಕೆಟ್ ದರ ಹೆಚ್ಚಿಸಲು ಸರ್ಕಾರ ಮುಂದಾಗಿರುವುದು ಯಾವ ರೀತಿಯ ಜನಪರ ಆಡಳಿತ ಎಂದು ಪ್ರಶ್ನಿಸಿದ್ದಾರೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ನಿರಂತರ ನಷ್ಟದಲ್ಲಿವೆ ಎಂದು ಹೇಳಿರುವ ಅವರು, ಸಂಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸುವುದು, ಸೋರಿಕೆ ಮತ್ತು ಅವ್ಯವಸ್ಥೆ ತಡೆಯುವ ಬದಲು ನಷ್ಟದ ಹೊರೆಯನ್ನು ಪ್ರಯಾಣಿಕರ ಮೇಲೆ ಹಾಕುವುದು ಸುಲಭದ ಮಾರ್ಗವಾಗಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎರಡನೇ ಬಾರಿಗೆ ಬಸ್ ಟಿಕೆಟ್ ದರ ಏರಿಸಲು ಮುಂದಾಗಲಾಗಿದೆ. ಕಳೆದ ವರ್ಷವಷ್ಟೇ ಶೇ.15ಕ್ಕೂ ಹೆಚ್ಚು ದರ ಹೆಚ್ಚಿಸಲಾಗಿತ್ತು. ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಹಾಗೂ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಬಂದರೆ ಅದನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.

D.K. Shivakumar
ಹಮಾಸ್‌ ಉಗ್ರರ ಪರ ಧ್ವನಿಯೆತ್ತುವ ಕಾಂಗ್ರೆಸ್‌ಗೆ ಸ್ಮಿತ್‌ ಮಚ್ಚಾರ್‌ ಶೌರ್ಯ ಕಣ್ಣಿಗೆ ಕಾಣಿಸಲಿಲ್ಲವೇ..?

‘ಸರ್ಕಾರಿ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ನಾನಕ್ಕೂ ನೀರಿಲ್ಲ’

ಇದೇ ವೇಳೆ ಕಲಬುರಗಿಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂದು ಆರ್. ಅಶೋಕ್ ಅವರು ಆರೋಪಿಸಿದ್ದಾರೆ.

ಬೋರ್‌ವೆಲ್‌ಗಳು ಬತ್ತಿಹೋಗಿದ್ದು, ವಿದ್ಯಾರ್ಥಿನಿಯರಿಗೆ ಕುಡಿಯಲು, ಶೌಚಾಲಯ ಬಳಸಲು, ಬಟ್ಟೆ ತೊಳೆಯಲು ಮಾತ್ರವಲ್ಲದೆ ಸ್ನಾನಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

120 ವಿದ್ಯಾರ್ಥಿಗಳ ಸಾಮರ್ಥ್ಯದ ಹಾಸ್ಟೆಲ್‌ಗಳಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಇರಿಸಲಾಗಿದೆ. ಇದು ಕೇವಲ ನೀರಿನ ಸಮಸ್ಯೆಯಲ್ಲ, ವಿದ್ಯಾರ್ಥಿನಿಯರ ಗೌರವ, ಘನತೆ ಮತ್ತು ಆರೋಗ್ಯದ ವಿಚಾರ ಎಂದು ಹೇಳಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಮೊದಲು ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಮತ್ತು ನೀರಿನ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿರೋಧಕ್ಕೆ ಮಣಿದು ‘ಯೂ-ಟರ್ನ್’

ಇದೇ ವೇಳೆ ಕಂದಾಯ ಸೇವೆ, ಭೂಮಾಪನ ಮತ್ತು ದಾಖಲೆಗಳ ಶುಲ್ಕವನ್ನು ಹೆಚ್ಚಿಸಿದ್ದ ರಾಜ್ಯ ಸರ್ಕಾರ, ವಿರೋಧ ವ್ಯಕ್ತವಾದ ಬಳಿಕ ಪರಿಷ್ಕೃತ ಶುಲ್ಕಕ್ಕೆ ತಡೆ ನೀಡಿ ಹಳೆಯ ಶುಲ್ಕ ಮುಂದುವರಿಸಲು ಆದೇಶಿಸಿರುವುದನ್ನೂ ಆರ್. ಅಶೋಕ್ ಅವರು ಟೀಕಿಸಿದ್ದಾರೆ.

ಬರಗಾಲದ ಸಂದರ್ಭದಲ್ಲಿ ರೈತರು ಹಾಗೂ ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಹಾಕುವ ರೀತಿಯಲ್ಲಿ ಶುಲ್ಕ ಹೆಚ್ಚಿಸುವ ಮೊದಲು ಸರ್ಕಾರ ಮುಂದಾಲೋಚನೆ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ. ಶುಲ್ಕ ಹೆಚ್ಚಳವನ್ನು ತಾವೂ ವಿರೋಧಿಸಿ ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದಾಗಿ ತಿಳಿಸಿದ್ದಾರೆ.

ಜನರಿಂದ ಹಾಗೂ ಪ್ರತಿಪಕ್ಷದಿಂದ ವಿರೋಧ ವ್ಯಕ್ತವಾದ ಬಳಿಕ ಸರ್ಕಾರ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಆರೋಪಿಸಿರುವ ಅವರು, ದಿನಕ್ಕೊಂದು ನಿರ್ಧಾರ ಕೈಗೊಂಡು ಜನರ ವಿರೋಧ ಬಂದಾಗ ಯೂ-ಟರ್ನ್ ತೆಗೆದುಕೊಳ್ಳುವ ಬದಲು ಜನರ ಪರಿಸ್ಥಿತಿ ಅರಿತುಕೊಂಡು ತೀರ್ಮಾನ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com