

ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ ಹಾಗೂ ಧರಣಿಗಳಿಗೆ ಕರ್ನಾಟಕ ಸರ್ಕಾರದಿಂದಲೇ ಹಣ ರವಾನೆಯಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೇ ಎಂದು ಹೇಳಿದ್ದಾರೆ. ಏನು ಬೇಕಾದರೂ ಗಲಾಟೆ ಮಾಡಿ, ನಾವು ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ದೂರಿದರು.
ತಮ್ಮ ಪರವಾಗಿ, ತಮಗೆ ಬೇಕಾದಂತೆ ಕಾನೂನನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದರೆ ಸರ್ಕಾರ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಹೇಳುವ ಮೂಲಕ ಹೋರಾಟಗಾರರಿಗೆ ಯಾರೂ ಹೆದರಬೇಡಿ ಎಂದು ಅಭಯ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದನ್ನು ಪ್ರದರ್ಶಿಸಿ, ತಮ್ಮ ಪರವಾಗಿ ಹೋರಾಟ ನಡೆಸುವವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿರುವುದನ್ನು ಕುಮಾರಸ್ವಾಮಿ ಟೀಕಿಸಿದ್ದಾರೆ. ನೀವೇನು ಬೇಕಾದರೂ ಗಲಾಟೆ ಮಾಡಿ, ನಿಮ್ಮ ಮೇಲೆ ನಾವೇನು ಪೊಲೀಸ್ನವರು ಆ್ಯಕ್ಷನ್ ತಗೊಳ್ಳಲ್ಲ ಎಂದು ಸಿಜೆಪಿ ಪರ ಖರ್ಗೆ ಹೇಳಿಕೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅಪ್ಪಾ, ನಮ್ಮ ಗೃಹ ಸಚಿವರೇ, ನಿಮ್ಮ ಹೇಳಿಕೆ ಇದು ಎಂದು ವಿಡಿಯೋ ಪ್ರದರ್ಶಿಸಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಅಲ್ಲದೆ, ಸಿಜೆಪಿ ಚಟುವಟಿಕೆಗಳಿಗೆ ಫಂಡ್ಸ್ ಎಲ್ಲಾ ಇಲ್ಲಿಂದಲೇ ಹೋಗ್ತಾ ಇದೆ. ನಮ್ಮ ರಾಜ್ಯದ ಹಣವನ್ನ ಲೂಟಿ ಮಾಡಿ, ದೇಶದಲ್ಲಿ ಅಭದ್ರತೆ ಉಂಟುಮಾಡಲು ರವಾನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳು ಪದೇ ಪದೇ ಕಾಲವೇ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದು ಹೇಳುತ್ತಿರುತ್ತಾರೆ. ಖಂಡಿತವಾಗಿಯೂ ಕಾಲವೇ ಎಲ್ಲವನ್ನೂ ನಿರ್ಧರಿಸಲಿದ್ದು, ಈ ಎಲ್ಲಾ ಅಕ್ರಮ ಮತ್ತು ಒಳಸಂಚುಗಳು ಸದ್ಯದಲ್ಲೇ ಜನರ ಮುಂದೆ ಬಯಲಾಗಲಿವೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಸಿದ್ದಾರ್ಥ ಟ್ರಸ್ಟ್ ವಿಷಯದಲ್ಲಿ ಮೋದಿ ಹತ್ರ ಮಲ್ಲಿಕಾರ್ಜುನ್ ಖರ್ಗೆ ಯಾಕೆ ಹೋಗಿದ್ರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಗೃಹ ಸಚಿವರ ಈ ಹೇಳಿಕೆಯು ಕಾನೂನು ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಕುಮಾರಸ್ವಾಮಿ ಹೇಳಿದ್ದಾರೆ.