

ಬೆಂಗಳೂರು: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ಭುಗಿಲೆದ್ದಿದ್ದು ರಾಜಕೀಯವಾಗಿ ನಾಯಕರ ಮಧ್ಯೆ ವಾಕ್ಸಮರ ಮುಂದುವರೆದಿದೆ. ಈ ಮಧ್ಯೆ ಈ ದೇಶದಲ್ಲಿ ಸ್ಟಿಂಗ್ ಆಪರೇಷನ್ 'ಪಿತಾಮಹ' ಅಂತ ಯಾರಾದ್ರೂ ಇದ್ರೆ ಅದು ನರೇಂದ್ರ ಮೋದಿ ಎಂದು ಕಾಂಗ್ರೆಸ್ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಗುಜರಾತ್ ನಲ್ಲಿ ನರೇಂದ್ರ ಮೋದಿಗೆ ಪ್ರತಿಸ್ಪರ್ಧಿಯಾಗಿ ಸಂಜಯ್ ಜೋಶಿ ಇದ್ದರು. ಸಂಜಯ್ ಜೋಶಿ ಗುಜರಾತ್ ನ ಬಿಜೆಪಿಗೆ ಉಸ್ತುವಾರಿ ವಹಿಸಿದ್ದಾಗ ನಾನು ಕಾಂಗ್ರೆಸ್ ನಿಂದ ಉಸ್ತುವಾರಿ ವಹಿಸಿದ್ದೆ. ಸ್ಟಿಂಗ್ ಆಪರೇಷನ್ ಮಾಡುವ ಮೂಲಕ ನರೇಂದ್ರ ಮೋದಿ ಅವರು, ಸಂಜಯ್ ಜೋಶಿಯನ್ನು ರಾಜಕೀಯದಿಂದಲೇ ನಿವೃತ್ತಿ ಆಗುವಂತೆ ಮಾಡಿದ್ದರು ಎಂದು ಹರಿಪ್ರಸಾದ್ ಹೇಳಿದ್ದಾರೆ.
ಸಂಜಯ್ ಜೋಶಿ ಮತ್ತು ನರೇಂದ್ರ ಮೋದಿ ನಡುವಿನ ರಾಜಕೀಯ ವೈಷಮ್ಯ ಹಾಗೂ 2005ರ ಆಪಾದಿತ ಸೆಕ್ಸ್ ಸಿಡಿ (ಸ್ಟಿಂಗ್ ಆಪರೇಷನ್) ವಿವಾದವು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇತಿಹಾಸದಲ್ಲಿ ತೀವ್ರ ಸಂಚಲನ ಮೂಡಿಸಿದ ಘಟನೆಯಾಗಿತ್ತು. 1980ರ ದಶಕದಲ್ಲಿ ಇಬ್ಬರೂ ಆರ್ಎಸ್ಎಸ್ (RSS) ಪ್ರಚಾರಕರಾಗಿ ಗುಜರಾತ್ನಲ್ಲಿ ಬಿಜೆಪಿಯನ್ನು ಬಲಪಡಿಸಲು ಒಟ್ಟಿಗೆ ಕೆಲಸ ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಇವರ ನಡುವೆ ತೀವ್ರ ರಾಜಕೀಯ ಭಿನ್ನಾಭಿಪ್ರಾಯಗಳು ಮೂಡಿತ್ತು.
ಸ್ಟಿಂಗ್ ಆಪರೇಷನ್ ವಿವಾದ ತೀವ್ರ ಸ್ವರೂಪ ಪಡೆದುಕೊಂಡ ಕಾರಣ, ಸಂಜಯ್ ಜೋಶಿ ಅವರು ತಕ್ಷಣವೇ ತಮ್ಮ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಸಿಡಿಯನ್ನು ಜೋಶಿ ಅವರ ರಾಜಕೀಯ ಜೀವನವನ್ನು ಮುಗಿಸಲು ಮತ್ತು ಅವರನ್ನು ಬದ್ನಾಮ್ ಮಾಡಲು ಸೃಷ್ಟಿಸಲಾಗಿತ್ತು ಎಂಬ ಆರೋಪಗಳಿವೆ. ಅಂದಿನ ಗುಜರಾತ್ ಪೊಲೀಸ್ನ ಆಂಟಿ-ಟೆರರಿಸ್ಟ್ ಸ್ಕ್ವಾಡ್ (ATS) ನ ಕೆಲವು ಅಧಿಕಾರಿಗಳು ಈ ಸಿಡಿ ಹಂಚಿಕೆಯ ಹಿಂದೆ ಇದ್ದು ಇದು ನರೇಂದ್ರ ಮೋದಿ ಅವರ ಆಪ್ತರ ಸೂಚನೆಯ ಮೇರೆಗೆ ನಡೆದಿರಬಹುದು ಎಂಬ ರಾಜಕೀಯ ಆರೋಪಗಳಿವೆ.
ನಂತರದ ದಿನಗಳಲ್ಲಿ ನಡೆದ ಮಧ್ಯಪ್ರದೇಶ ಪೊಲೀಸರ ತನಿಖೆಯಲ್ಲಿ ಆ ಸಿಡಿ ನಕಲಿ ಎಂದು ಸಾಬೀತಾಗಿದ್ದು ಸಂಜಯ್ ಜೋಶಿಗೆ ಕ್ಲೀನ್ ಚೀಟ್ ಸಿಕ್ಕಿತು. ಕ್ಲೀನ್ ಚೀಟ್ ಸಿಕ್ಕ ನಂತರ ಅಂದಿನ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಜೋಶಿ ಅವರನ್ನು ಮತ್ತೆ ಪಕ್ಷದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರು. ಆದರೆ 2012ರಲ್ಲಿ ಮುಂಬೈನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ನರೇಂದ್ರ ಮೋದಿ ಅವರು ಬರಲು ನಿರಾಕರಿಸಿದರು. ಸಂಜಯ್ ಜೋಶಿ ರಾಜೀನಾಮೆ ನೀಡದಿದ್ದರೆ ತಾವೂ ಸಭೆಗೆ ಬರುವುದಿಲ್ಲ ಎಂದು ಮೋದಿ ಪಟ್ಟು ಹಿಡಿದರು. ಪಕ್ಷದ ಹಿತದೃಷ್ಟಿಯಿಂದ ಸಂಜಯ್ ಜೋಶಿ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಗೆ ರಾಜೀನಾಮೆ ನೀಡಿದರು. ಅವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಮೋದಿ ಸಭೆಗೆ ಹಾಜರಾದರು.
ಸಂಜಯ್ ಜೋಶಿ ಅವರು RSSನ ಬಲವಾದ ಬೆಂಬಲ ಹೊಂದಿದ್ದರೂ, 2012ರ ಘಟನೆಯ ನಂತರ ಬಿಜೆಪಿಯಲ್ಲಿ ಯಾವುದೇ ಪ್ರಮುಖ ಸಕ್ರಿಯ ಜವಾಬ್ದಾರಿ ಅಥವಾ ಹುದ್ದೆಗಳನ್ನು ಹೊಂದಿಲ್ಲ. ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ ಬೆಳೆದರೆ, ಸಂಜಯ್ ಜೋಶಿ ಅವರು ರಾಜಕೀಯದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ.