

ಬೆಂಗಳೂರು: ಆರ್‌ಎಸ್‌ಎಸ್ ಮತ್ತು ಹಿಂದೂ ಧರ್ಮದ ವಿಚಾರ ಬಂದಾಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಲರ್ಜಿ ಶುರುವಾಗುತ್ತದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಾಗ್ದಾಳಿ ನಡೆಸಿದ್ದಾರೆ.
ಆರ್ ಎಸ್ಎಸ್ ಅನುಮತಿ ಪಡೆಯಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಯತ್ನಾಳ್, ಗೃಹ ಸಚಿವರು ತಮ್ಮ ವ್ಯಾಪ್ತಿಯನ್ನು ಮೀರಿ ಮಾತನಾಡುತ್ತಿದ್ದಾರೆ ಎಂದರು.
ಮಾಹಿತಿ ಕೊಟ್ರೆ ಅಷ್ಟೇ ಅಲ್ಲ, ಅನುಮತಿ ಕೇಳಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳ್ತಾರೆ. ಆದರೆ ಮೊನ್ನೆ ಈದ್ ಮಿಲಾದ್ ಆಯಿತು. ಆಗ ಪರ್ಮಿಷನ್ ತೆಗೆದುಕೊಂಡ್ರಾ? ಆರ್‌ಎಸ್‌ಎಸ್ ಮತ್ತು ಹಿಂದೂ ಅಂದ್ರೆ ಖರ್ಗೆ ಅವರಿಗೆ ಅಲರ್ಜಿ ಎಂದು ಕಿಡಿ ಕಾರಿದರು.
ಖರ್ಗೆ ಅವರ ಬಳಿ ಸಾಕಷ್ಟು ಹಣ ಇದೆ. ಅಧಿಕಾರ ಸಹ ಇದೆ. ವ್ಯಾಪಕವಾಗಿ ಮಾದಕ ದ್ರವ್ಯದ ಬಗ್ಗೆ ಚರ್ಚೆ ಆಗುತ್ತಿದೆ. ಮೊನ್ನೆ ಕಲಬುರಗಿಯಲ್ಲೇ ಉಗ್ರರ ಚರ್ಚೆ ಆಗಿದೆ. ಇದೆಲ್ಲಾ ಬಿಟ್ಟು ಆರ್‌ಎಸ್‌ಎಸ್ ಬಗ್ಗೆ ಚರ್ಚೆ ಮಾಡುತ್ತಾರೆ. ಆರ್‌ಎಸ್‌ಎಸ್‌ನ ಯಾವುದೇ ಕಾರ್ಯಕ್ರಮದಲ್ಲಿ ಗಲಾಟೆ, ಗಲಭೆ ಆಗಿಲ್ಲ ಎಂದು ನೀವೇ ಉತ್ತರ ಕೊಟ್ಟಿದ್ದೀರಿ. ಆದ್ರೆ ಯಾವ ಕಾರ್ಯಕ್ರಮದಲ್ಲಿ ಗಲಾಟೆ, ಗಲಭೆ ಆಗಿದೆ, ಅದರ ಬಗ್ಗೆ ಮಾತ್ರ ಕಾನೂನು ಮಾಡಲಿ, ಅದಕ್ಕೆ ನಮ್ಮ ತಕರಾರು ಇಲ್ಲ. ಬರೀ ಆರ್‌ಎಸ್‌ಎಸ್ ಅಂದ್ರೆ ಹೇಗೆ? ಆರ್‌ಎಸ್‌ಎಸ್ ಪಥಸಂಚಲನ ಮಾಡುತ್ತೆ? ನಾವೂ ಟ್ಯಾಕ್ಸ್ ತುಂಬುತ್ತೇವೆ. ತಮ್ಮ ವ್ಯಾಪ್ತಿ ಬಿಟ್ಟು ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
ಪ್ರಿಯಾಂಕ ಖರ್ಗೆ ತನ್ನ ಅಮೂಲ್ಯ ಸಮಯವನ್ನು ಆರ್‌ಎಸ್‌ಎಸ್ ವಿಷಯದಲ್ಲಿ ವ್ಯರ್ಥ ಮಾಡುತ್ತಿದ್ದಾರೆ. ಅವರು ಇನ್ನೂ ಯುವಕರು. ದೇಶದ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಅವರದು ಕೂಡ ಒಂದು. ಕಲಬುರ್ಗಿಯಯಲ್ಲಿ ಭಯೋತ್ಪಾದಕ ಕೃತ್ಯ ನಡೆಯುತ್ತಿದೆ. ಗಾಂಜಾ ಚರಸ್ ವ್ಯಾಪಕವಾಗಿದೆ. ಇವರು ಅತಿಯಾಗಿ ಮಾತನಾಡುತ್ತಿದ್ದಾರೆ. ಅತಿಯಾಗಿ ಮಾತನಾಡಿದರೆ ಬೆಲೆ ತೆರಬೇಕಾಗುತ್ತದೆ ಎಂದು ಯತ್ನಾಳ್ ಎಚ್ಚರಿಸಿದರು.