

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಇದೀಗ ಎಲ್ಲಿಲ್ಲದ ಪ್ರೀತಿ, ಗೌರವ ಮತ್ತು ಮಮಕಾರ ಉಕ್ಕಿ ಹರಿಯುತ್ತಿರುವುದನ್ನು ಕಂಡು ನನಗೆ ಬಹಳ ಖುಷಿಯಾಗಿದೆ ಎಂದು ಸಚಿವ ಎಚ್‌ಸಿ ಬಾಲಕೃಷ್ಣ ಶನಿವಾರ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅಂದು ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿದ್ದಾಗ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿ, ಪಕ್ಷದಿಂದ ಹೊರಹಾಕುವ ಮುನ್ನ ಅವರ ಬಗ್ಗೆ ಇಷ್ಟೇ ಕಾಳಜಿ ವಹಿಸಿದ್ದರೆ, ಜಾತ್ಯಾತೀತ ಜನತಾದಳ (ಜೆಡಿಎಎಸ್) ಪಕ್ಷ ಇಂದು ರಾಜ್ಯದಲ್ಲಿ ಇನ್ನಷ್ಟು ಬಲಿಷ್ಟವಾಗಿ ನೆಲೆಗೊಳ್ಳುತ್ತಿತ್ತು. ಆರ್‌ಎಸ್ಎಸ್ ಮತ್ತು ಬಿಜೆಪಿಯೆದುರು ಕೈಕಟ್ಟಿ ನಿಲ್ಲುವ ದುಸ್ಥಿತಿ ನಿಮಗೆ ಬರುತ್ತಿರಲಿಲ್ಲ' ಎಂದರು.
ತಾವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಾಯಕತ್ವದ ಸ್ಥಾನವನ್ನು ಪಡೆದುಕೊಂಡಿದ್ದೀರಿ. ಅದಕ್ಕೆ ಗೌರವ ಬರುವಂತೆ ನಿಮ್ಮ ನಡವಳಿಕೆ ಇರಲಿ. ದಯವಿಟ್ಟು ಜನರು ದಡ್ಡರಲ್ಲ ಎಂಬುದನ್ನು ಅರಿತುಕೊಳ್ಳಿ. ಗೋಸುಂಬೆ ರಾಜಕಾರಣ ಬಿಟ್ಟು, ನೈಜವಾದ ರಾಜಕಾರಣವನ್ನು ಮಾಡಿ ಎಂದಿದ್ದಾರೆ.
ಸಿದ್ದರಾಮಯ್ಯ ಮುಗಿಸಲು ಸ್ಟಿಂಗ್ ಆಪರೇಷನ್: ಎಚ್.ಡಿ ಕುಮಾರಸ್ವಾಮಿ
ಈ ಸ್ಟಿಂಗ್ ಕಾರ್ಯಾಚರಣೆ ಮಾಡಿಸಿದ್ದು ಕಾಂಗ್ರೆಸ್‌ನ ಮಹಿಳಾ ನಾಯಕಿ. ಅವರಿಗೆ 2015ರ ಜೂನ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದರಲ್ಲಿ ಮೂರನೇ ಮಹಿಳೆ ಹಾಗೂ ಖಾಸಗಿ ಚಾನೆಲ್‌ನ ವ್ಯಕ್ತಿಯ ಪಾತ್ರವೇನು? ತಾನೇ ಸ್ಟಿಂಗ್ ಮಾಡಿದ್ದೇನೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವ ವ್ಯಕ್ತಿಯ ವಿರುದ್ಧ ಸರ್ಕಾರ ಇದುವರೆಗೆ ಯಾವ ಕ್ರಮ ಕೈಗೊಂಡಿದೆ? ಅವನಿಗೆ ಪೊಲೀಸ್ ಭದ್ರತೆ ಕೊಟ್ಟಿದ್ದು ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.
ಈ ಷಡ್ಯಂತ್ರ ನಡೆದಿರುವುದು ನನ್ನ ವಿರುದ್ಧವಲ್ಲ, ಬದಲಾಗಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ನಾಶಪಡಿಸಲು. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗುವುದನ್ನು ಸಿದ್ದರಾಮಯ್ಯ ತಪ್ಪಿಸಿದ್ದರು ಎಂಬ ಆಕ್ರೋಶದಿಂದಲೇ ಅವರ ಆಪ್ತರೇ ಈ ಕೃತ್ಯ ಎಸಗಿದ್ದಾರೆ. 2023ರಲ್ಲೇ ಸಿದ್ಧಪಡಿಸಿದ ವಿಡಿಯೋವನ್ನು ಈಗ ಯಾಕೆ ತರಲಾಯಿತು? ಈ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.