ರೆಸಾರ್ಟ್‌ನಲ್ಲಿ AEE ಪರೀಕ್ಷೆ ಬರೆಸಿದ ಪ್ರಿಯಾಂಕ್‌: ಮಿಸ್ಟರ್‌ ಖರ್ಗೆ- ನನ್ನ ಹತ್ರ ನಿಮ್ಮ ಆಟ ನಡೆಯಲ್ಲ; ಕುಮಾರಸ್ವಾಮಿ ವಾಗ್ದಾಳಿ

ದೇಶದಲ್ಲಿನ ಎಲ್ಲ ವಿದ್ಯಮಾನಗಳ ಬಗ್ಗೆ ಪ್ರಿಯಾಂಕ್ ಅವರಿಗೆ ಮಾಹಿತಿ ಇರುತ್ತದೆ. ಆದರೆ, ಸ್ವತಃ ತಾವೇ ನಿರ್ವಹಿಸಿದ್ದ ಇಲಾಖೆಯಲ್ಲಿ ಏನೇನು ನಡೆದಿದೆ ಎಂಬುದು ಗೊತ್ತಿಲ್ಲ ಎಂದರೆ ಹೇಗೆ? ಈ ರೀತಿಯಾಗಿ ಅತೀ ಜಾಣತನ ಪ್ರದರ್ಶಿಸುವ ಅಗತ್ಯವಿಲ್ಲ
H D Kumaraswamy and Priyank Kharge
ಹೆಚ್ ಡಿ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸಂಬಂಧ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮತ್ತೊಮ್ಮೆ ಕರ್ನಾಟಕ ಸರ್ಕಾರವನ್ನು ಟೀಕಿಸಿದ್ದು, ಈ ಬಾರಿ ಅವರು ರಾಹುಲ್ ಗಾಂಧಿಯನ್ನು ಎಳೆದು ತಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ ಸಿ ಅಕ್ರಮದ ಸಂತ್ರಸ್ತರನ್ನು ನೀವು ಭೇಟಿ ಯಾಗಲು ಯಾವಾಗ ಬೆಂಗಳೂರಿಗೆ ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಹುದ್ದೆಗಳ ಅಭ್ಯರ್ಥಿಗಳನ್ನು ರೆಸಾರ್ಟ್‌ನಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ. ಈ ಹುದ್ದೆಗಳ ನೇಮಕದಲ್ಲಿ ನಡೆದಿರುವ ಅಕ್ರಮದಿಂದ ಸಚಿವ ಪ್ರಿಯಾಂಕ್‌ ಖರ್ಗೆ ಪಾರಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ದೇಶದಲ್ಲಿನ ಎಲ್ಲ ವಿದ್ಯಮಾನಗಳ ಬಗ್ಗೆ ಪ್ರಿಯಾಂಕ್ ಅವರಿಗೆ ಮಾಹಿತಿ ಇರುತ್ತದೆ. ಆದರೆ, ಸ್ವತಃ ತಾವೇ ನಿರ್ವಹಿಸಿದ್ದ ಇಲಾಖೆಯಲ್ಲಿ ಏನೇನು ನಡೆದಿದೆ ಎಂಬುದು ಗೊತ್ತಿಲ್ಲ ಎಂದರೆ ಹೇಗೆ? ಈ ರೀತಿಯಾಗಿ ಅತೀ ಜಾಣತನ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು. ಸಾಮಾನ್ಯವಾಗಿ ಪರೀಕ್ಷೆಗಳು ಶಾಲಾ-ಕಾಲೇಜುಗಳಲ್ಲಿ ನಡೆಯುತ್ತವೆ.

ಆದರೆ, ಪ್ರಿಯಾಂಕ್‌ ಸಚಿವರಾಗಿದ್ದ ಇಲಾಖೆಯಲ್ಲಿ ಅಭ್ಯರ್ಥಿಗಳಿಗೆ ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಲಾಗಿದೆ. ದೇಶದಲ್ಲಿಯೇ ಇದು ಮೊತ್ತ ಮೊದಲ ಪ್ರಯೋಗ. ದುಡ್ಡು ಕೊಟ್ಟ ವಿದ್ಯಾರ್ಥಿಗಳಿಗೆ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಉತ್ತರ ಬರೆಸಲಾಗಿದೆ. ರಾಜ್ಯ ಸರ್ಕಾರದ ನಿಷ್ಕ್ರಿಯತೆ ಹಾಗೂ ಭ್ರಷ್ಟಾಚಾರ ಇಲ್ಲಿ ಎದ್ದು ಕಾಣುತ್ತದೆ ಎಂದು ಅವರು ಟೀಕಿಸಿದರು.

H D Kumaraswamy and Priyank Kharge
KPSC ಅಕ್ರಮದ ಜಾತಕ ಜಾಲಾಡಿದರೆ ಎಲ್ಲೆಲ್ಲೂ ನಿಮ್ಮ ಕುಂಡಲಿ, ನಕ್ಷತ್ರಗಳೇ; ನೇಮಕಾತಿ ಆದೇಶ ನೀಡಲು CM ಗೆ ದೇವೇಗೌಡರು ಪತ್ರ ಬರೆದಿದ್ದು ಏಕೆ?

ಎಇಇ ನೇಮಕಾತಿ ಪ್ರಕ್ರಿಯೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಚಿವರು ಸಮಜಾಯಿಷಿ ನೀಡಿದ್ದಾರೆ. ಇಲಾಖೆಯ ಪರೀಕ್ಷಾ ಪ್ರಕ್ರಿಯೆ ಬಗ್ಗೆ ಗೊತ್ತಿಲ್ಲ ಎಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದೇ ಅರ್ಥ. ಅವರ ಮಾತುಗಳಲ್ಲಿ ಪ್ರಾಮಾಣಿಕತೆ ಕಾಣುತ್ತಿಲ್ಲ. ಹಗರಣ ಮುಚ್ಚಿ ಹಾಕಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಎಎಇ ಪರೀಕ್ಷಾ ಅಕ್ರಮದ ತನಿಖೆಗೆ ಮೂವರು ಸದಸ್ಯರ ಸಮಿತಿಯನ್ನು ಕೆಪಿಎಸ್‌ಸಿ ರಚಿಸಿತ್ತು. ಈ ಸಮಿತಿಗೆ ಕೆಪಿಎಸ್‌ಸಿ ಕಾರ್ಯದರ್ಶಿ ಯಾವುದೇ ಸಹಕಾರ ನೀಡಲಿಲ್ಲ. ಹೀಗಾಗಿ, ಈ ಸಮಿತಿ ವರದಿ ಕೊಡಲಿಲ್ಲ. ಬಳಿಕ, ಐವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಈ ಸಮಿತಿ 40 ಸಭೆಗಳನ್ನು ನಡೆಸಿ ವರದಿ ಕೊಟ್ಟಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಗೊತ್ತಿದ್ದರೂ ಕೆಪಿಎಸ್‌ಸಿ ಕಾರ್ಯದರ್ಶಿಯವರು ಸರ್ಕಾರಕ್ಕೆ ಅಂತಿಮ ಆಯ್ಕೆ ಪಟ್ಟಿ ಕಳುಹಿಸಿದ್ದರು.

ಇದಕ್ಕೆ ಆಕ್ಷೇಪಿಸಿ ಕೆಪಿಎಸ್‌ಸಿ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಾಗಿ ನಾಲ್ಕು ತಿಂಗಳ ಬಳಿಕ ಅಭ್ಯರ್ಥಿಗಳಿಗೆ ಷರತ್ತುಬದ್ಧ ನೇಮಕಾತಿ ಪತ್ರ ನೀಡಲಾಗಿತ್ತು. ಸಚಿವರ ನೇತೃತ್ವದಲ್ಲೇ ತರಾತುರಿಯಲ್ಲಿ ನೇಮಕಾತಿ ಪತ್ರ ನೀಡುವ ಅಗತ್ಯ ಏನಿತ್ತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ED ಭಾಗಿಯಾಗಿರುವುದು ರಾಜಕೀಯ ಪ್ರೇರಿತವಾಗಿದೆ ಎಂಬ ಪ್ರಿಯಾಂಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಅಮಿತ್ ಶಾ ಇಡಿಯನ್ನು ಕಳುಹಿಸಿದ್ದಾರೆಯೇ? ಎಂದು ತಿರುಗೇಟು ನೀಡಿದ್ದಾರೆ.

H D Kumaraswamy and Priyank Kharge
KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌: ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ ಮಧ್ಯವರ್ತಿ, BJP ಮುಖಂಡನ ಬಂಧನ!

ಕೆಪಿಎಸ್‌ಸಿ ಅಕ್ರಮದ ಬಗ್ಗೆ ಪ್ರಿಯಾಂಕ್ ಸೇರಿ ಎಲ್ಲ ಸಚಿವರಿಗೂ ಮಾಹಿತಿ ಇತ್ತು. ಅಕ್ರಮದ ತನಿಖೆಗೆ ಜಾರಿ ನಿರ್ದೇಶನಾಲಯ ರಂಗ ಪ್ರವೇಶ ಮಾಡಿದ ಕೂಡಲೇ ಎಲ್ಲರಿಗೂ ಭಯ ಶುರುವಾಯಿತು. ಇ.ಡಿ.ಯನ್ನು ಅಮಿತ್ ಶಾ ಅವರೇನೂ ಕಳುಹಿಸಿಲ್ಲ. ನಿಮ್ಮ ಹೇಳಿಕೆಗಳನ್ನು ನೋಡಿದರೆ ಇಡೀ ಹಗರಣದಲ್ಲಿ ನೀವು ಭಾಗಿಯಾಗಿರುವ ಅನುಮಾನ ಗಟ್ಟಿಯಾಗುತ್ತಿದೆ ಎಂದರು.

ಪರೀಕ್ಷಾ ನಿಯಂತ್ರಣ ಅಧಿಕಾರಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ದೆಹಲಿಗೆ ಹೋಗಿ ಅಲ್ಲೆಲ್ಲೋ ರೆಸಾರ್ಟಿಗೆ ಹೋಗಿದ್ದು, ಆ ರೆಸಾರ್ಟ್‌ನಲ್ಲಿ ಯಾರೊಂದಿಗೋ ಗಲಾಟೆ ಮಾಡಿಕೊಂಡಿದ್ದು, ನಂತರ ಮತ್ತೆಲ್ಲಿಗೋ ಹೋಗಿದ್ದು, ಅಲ್ಲಿಂದ ಚೆನ್ನೈಗೆ ಬಂದಿದ್ದು, ಚೆನ್ನೈನಿಂದ ದೇವನಹಳ್ಳಿಯ ರೆಸಾರ್ಟಿಗೆ ಬಂದು ಮೂರು ದಿನ ಉಳಿದುಕೊಂಡಿದ್ದು.... ಇವೆಲ್ಲವೂ ಯಾವುದೋ ಸಿನಿಮಾ ಕಥೆಯಂತಿದೆ. ಅಧಿಕಾರಿಯ ಹಿಂದೆ ಯಾರಿದ್ದಾರೆ ಎಂಬುದು ಈಗ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ’ ಎಂದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ರೀಡೂ ಮಾಡಿದ್ದ ಶ್ಯಾಮ್‌ ಭಟ್‌ ಅವರನ್ನು 2016-17ರಲ್ಲಿ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಕೆಪಿಎಸ್‌ಸಿಯಲ್ಲಿ ಅವರು ನಡೆಸಿದ್ದ ಅಕ್ರಮಗಳ ಬಗ್ಗೆ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ. ಯಾವ ಮಾನದಂಡದ ಆಧಾರದಲ್ಲಿ ಭಟ್‌ ಅವರನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಎಂಬ ಬಗ್ಗೆ ಪ್ರಿಯಾಂಕ್‌ ಖರ್ಗೆ ವಿವರಣೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.

24 ಮಂದಿಗೆ ಕೆಲಸ ಕೊಟ್ಟಿದ್ದೀರಲ್ಲ, ಅವರು ಯಾರ್ಯಾರ ಸಂಬಂಧಿಕರು ಎಂಬುದನ್ನು ಹೇಳಿ. ಅದರ ಬಗ್ಗೆ ಸಚಿವರು ಉತ್ತರಿಸಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ತಮ್ಮ ಬಗ್ಗೆ ಮಾತನಾಡುವ ಮುನ್ನ ಸರಿಯಾದ ಮಾಹಿತಿ ಪಡೆದು ಮಾತನಾಡುವಂತೆ ಪ್ರಿಯಾಂಕ್‌ ಖರ್ಗೆ ಅವರಿಗೆ ತಿರುಗೇಟು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com