NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ: ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಶಾಸಕರು ಯಾರೂ ಆತಂಕ ಪಡಬೇಡಿ. ಎಲ್ಲೆಲ್ಲಿ ಬರ ಇದೆ ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು. ಉಪಮುಖ್ಯಮಂತ್ರಿ ವರದಿಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ್ದೇವೆ.
CM DK Shivakumar slams HD Deve Gowda over NICE land allotment
ದೇವೇಗೌಡ - ಡಿಕೆ ಶಿವಕುಮಾರ್
Updated on

ಬೆಂಗಳೂರು: "ನೈಸ್ ಯೋಜನೆ ಕುರಿತಂತೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಕಾನೂನು ಚೌಕಟ್ಟಿನಲ್ಲೇ ಕೈಗೊಳ್ಳಲಿದೆ" ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಇಂದು ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೈಸ್ ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರ ಕಾನೂನು ಉಲ್ಲಂಘಿಸಿ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಬಹಿರಂಗ ಪತ್ರ ಬರೆದಿರುವ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಶಿವಕುಮಾರ್, "ನಾವು ಏನು ಮಾಡಿದರೂ ಕಾನೂನು ಚೌಕಟ್ಟಿನಲ್ಲೇ ಮಾಡುತ್ತೇವೆ. ಕಾನೂನು ಅಭಿಪ್ರಾಯ ಪಡೆದುಕೊಳ್ಳುತ್ತೇವೆ. ಎಲ್ಲವನ್ನೂ ಮರುಪರಿಶೀಲನೆ ಮಾಡುತ್ತಿದ್ದೇವೆ. ಕಾನೂನು ಬಿಟ್ಟು ಏನನ್ನೂ ಮಾಡುವುದಿಲ್ಲ. ಒಂದು ವೇಳೆ ಕಾನೂನು ಉಲ್ಲಂಘನೆಯಾಗಿದ್ದರೆ ಅವರು ಕೋರ್ಟ್ ಗೆ ಹೋಗಲಿ, ಹೋರಾಟ ಮಾಡಲಿ, ಉಪವಾಸ ಮಾಡಲಿ" ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು.

ಆಸ್ತಿ ಕಳೆದುಕೊಂಡ ರೈತರ ರಕ್ಷಣೆ

"ರೈತರು ಆಸ್ತಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಹಿಂದಿನ ಸರ್ಕಾರಗಳು ಒಪ್ಪಂದಗಳಿಗೆ ಸಹಿ ಮಾಡಿ ಕೊಟ್ಟಿವೆ. ರೈತರು ಆಸ್ತಿ ಕಳೆದುಕೊಂಡಿದ್ದಾರೆ, ಅವರನ್ನು ರಕ್ಷಣೆ ಮಾಡಬೇಕು. ನನಗೂ ಪ್ರಜ್ಞೆ ಇದೆ. ಮನುಷ್ಯ ವಿದ್ಯಾವಂತನಾಗಿರದಿದ್ದರೂ ಬುದ್ಧಿವಂತನಾಗಿರಬೇಕು, ಸಾಮಾನ್ಯ ಪ್ರಜ್ಞೆ ಇರಬೇಕು” ಎಂದು ಡಿಕೆ ಶಿವಕುಮಾರ್ ಅವರು, ಮಾಜಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

CM DK Shivakumar slams HD Deve Gowda over NICE land allotment
ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧ; ನಿಜವಾದ ಫಲಾನುಭವಿಗಳು ಯಾರು?: CMಗೆ ದೇವೇಗೌಡ ಪತ್ರ!

ಇನ್ನಷ್ಟು ತಾಲ್ಲೂಕುಗಳಲ್ಲಿ ಬರ ಘೋಷಣೆ

ಇನ್ನು ಬರ ವೀಕ್ಷಣೆಯ ಬಗ್ಗೆ ಕೇಳಿದಾಗ, "ರಾಜ್ಯದಲ್ಲಿ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬರ ಘೋಷಣೆ ವಿಚಾರದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ವರದಿಗಳನ್ನು ಆಧರಿಸಿ 2–3 ಹಂತಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಹಾಗೂ ಇನ್ನೂ ಹಲವು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು" ಎಂದು ಸಿಎಂ ಹೇಳಿದರು.

"ಹಲವು ತಾಲ್ಲೂಕಿನಿಂದ ಬರದ ವರದಿಗಳು ಬರುತ್ತಿವೆ. ಇನ್ನೂ ಬಹಳ ತಾಲೂಕುಗಳಲ್ಲಿ ಬರ ಘೋಷಣೆಯಾಗುತ್ತದೆ. ಬಹಳ ಕಡೆ ಭೀಕರ ಬರ ಇದೆ. 21 ದಿನ ಮಳೆಯಾಗದ ಸ್ಥಳಗಳನ್ನು ಗುರುತಿಸಿ ತಾಂತ್ರಿಕ ವರದಿ ಆಧರಿಸಿ ತೀರ್ಮಾನ ಮಾಡಲಾಗುವುದು” ಎಂದರು.

ಶಾಸಕರು ಆತಂಕಪಡುವ ಅಗತ್ಯ ಇಲ್ಲ

“ಶಾಸಕರು ಯಾರೂ ಆತಂಕ ಪಡಬೇಡಿ. ಎಲ್ಲೆಲ್ಲಿ ಬರ ಇದೆ ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು. ಉಪಮುಖ್ಯಮಂತ್ರಿ ವರದಿಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ್ದೇವೆ. ಒಂದೇ ಸಲ ಎಲ್ಲವನ್ನೂ ಮಾಡಲು ಆಗುವುದಿಲ್ಲ” ಎಂದು ಹೇಳಿದರು.

ರೈತರ ಸಮಸ್ಯೆ ಬಗ್ಗೆ ಚರ್ಚೆಗೆ ವಿಶೇಷ ಅಧಿವೇಶನ

"ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ವಿಧಾನಸಭೆ ಅಧಿವೇಶನ ಕರೆದಿದ್ದೇವೆ. ಬರಪೀಡಿತ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ರೈತರಿಗೆ ಅಗತ್ಯ ನೆರವು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com