

ಬೆಂಗಳೂರು: ಸಚಿವ ಶಿವರಾಜ ತಂಗಡಗಿ ಮತ್ತು ಜನಾರ್ದನ ರೆಡ್ಡಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ತಂಗಡಗಿ ಮಾತನಾಡಿರುವ ಹಳೇಯ ವಿಡಿಯೋವೊಂದನ್ನು ಹರಿಬಿಟ್ಟಿರುವ ರೆಡ್ಡಿ ತಿರುಗೇಟು ನೀಡಿದ್ದಾರೆ.
ತಮ್ಮ ಶಿವರಾಜ ತಂಗಡಗಿ... ನಾನ್ ಯಾರಿಗೂ ತಲೆಬಾಗಿಲ್ಲ, ಮತ್ತೆ ಯಾರತ್ರನು ಗಣಿ ಹಣ ಪಡೆದಿಲ್ಲ ಅಂದೆ ಅಲ್ವಾ? ಕಳೆದ ಜುಲೈನಲ್ಲಿ ಖಾಸಗಿ ಕಾಲೇಜಿನ ಸಮಾರಂಭದಲ್ಲಿ ಸ್ವತಃ ನಿನ್ನ ಬಾಯಿಂದಲೇ ಯಾರ ಆಶೀರ್ವಾದದಿಂದ, ಯಾರ ಹಣದಿಂದ ನೀನು ಮೊದಲ ಸಲ ಶಾಸಕನಾದೆ, ಮಂತ್ರಿಯಾದೆ ಅಂತ ಒಪ್ಕೊಂಡಿರೋ ವಿಡಿಯೋ ನೋಡು ಎಂದಿದ್ದಾರೆ.
ಗಣಿ ದುಡ್ಡಲ್ಲೇ ನೀನು ಶಾಸಕನಾಗಿದ್ದು ಹಾಗೂ ಮಂತ್ರಿಯಾಗಿದ್ದು ಅಂತ ನಾನು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದು, ಹಾಗೆಯೇ, ಲೇ ತಮ್ಮ ಎನ್ನುವುದು ಉತ್ತರ ಕರ್ನಾಟಕ ಭಾಷೆಯಲ್ಲಿ ಸಾಮಾನ್ಯ ಪದವಾಗಿದೆ. ನೀನು ಹೇಳಿರುವುದು ನೆನಪಿಲ್ಲ ಅಂದ್ರೆ, ಕಿವಿಗೆ ಹೆಡ್‌ಫೋನ್ ಹಾಕ್ಕೊಂಡು ಇನ್ನೊಂದು ಸಲ ಕ್ಲಿಯರ್ ಆಗಿ ಕೇಳಿಸ್ಕೋ! ಎಂದು ಟಾಂಗ್ ನೀಡಿದ್ದಾರೆ.
ಹೇ ತಂಗಡಗಿ, ವಿಧಾನಸೌಧಕ್ಕೆ ನಿನ್ನ ಕಾರಿನಲ್ಲೇ ಜೊತೆಯಲ್ಲೇ ಬರ್ತೀನಿ! ನೀನು ಮಂತ್ರಿ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ, ಜೊತೆಗೆ ಆ ನಾಗೇಂದ್ರ ಹಾಗೂ ಇಡೀ ಬಳ್ಳಾರಿ ಕಾಂಗ್ರೆಸ್ ಶಾಸಕರನ್ನು ಕರ್ಕೊಂಡು ಬಂದು, ನಾನು ನಿನ್ನ ಮುಂದೆ ಇರುತ್ತೇನೆ.
ರಾಜೀನಾಮೆ ಕೊಡಿಸು, ನಿಮ್ಮ ರಾಜೀನಾಮೆಗಳು ಸ್ವೀಕಾರ ಆಗಿದ್ದ ತಕ್ಷಣ ನಾನು ಕೂಡ ರಾಜೀನಾಮೆ ಕೊಡುತ್ತೇನೆ. ಜೊತೆಗೆ ಚುನಾವಣಾ ಅಖಾಡಕ್ಕೆ ಧುಮುಕೋಣ! ಯಾರು ಜನನಾಯಕರು, ಯಾರಿಗೆ ಜನ ಠೇವಣಿ ಕಸಿದು ಮನೆಗೆ ಕಳಿಸ್ತಾರೆ ಅಂತ ನೇರವಾಗಿಯೇ ಗಂಗಾವತಿ ಹಾಗೂ ಕನಕಗಿರಿಯಲ್ಲಿ ತೀರ್ಮಾನ ಆಗಿಹೋಗಲಿ ಎಂದು ರೆಡ್ಡಿ ಗುಡುಗಿದ್ದಾರೆ.
ಇನ್ನೂ ಜನಾರ್ದನ ರೆಡ್ಡಿ ಶೇರ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಶಿವರಾಜ ತಂಗಡಗಿ, ನಾನು ಪಕ್ಷೇತರ ಶಾಸಕನಾಗಿದ್ದಾಗ ನನಗೆ ಹಣಕಾಸಿನ ಸಹಾಯ ಮಾಡಿದ್ದು ಜನಾರ್ಧನ ರೆಡ್ಡಿ. ನಾನು ಕಷ್ಟದಲ್ಲಿದ್ದಾಗ ಅವರು ಸಹಾಯ ಮಾಡಿದ್ದಾರೆ. ಅವರನ್ನು ನಾನು ಎಂದಿಗೂ ಮರೆಯಲ್ಲಿ ಎಂದು ತಂಗಡಗಿ ಹೇಳಿದ್ದಾರೆ.