ಅಣ್ತಮ್ಮಾ ರೆಡ್ಡಿ, ನಾನು ಆಸ್ತಿ ಮಾರಿಕೊಂಡು ಚುನಾವಣೆ ಎದುರಿಸಿದ್ದು: ನನ್ನ ಮಾತನ್ನು ಎಲ್ಲಿಗೊ ಜೋಡಿಸಿ ಮೈಲೇಜ್ ಪಡೆಯಬೇಡ; ತಂಗಡಗಿ

ಸಾಸಿವೆ ಕಾಳಿನಷ್ಟು ಸಹಾಯವನ್ನೂ ಬೆಟ್ಟದಂತೆ ನೆನೆಸುವವನು ನಾನು.‌ ಹೀಗಾಗಿಯೇ ತುರ್ತು ಸಮಯದಲ್ಲಿ ನನ್ನ ಆಸ್ತಿ‌ ನಗದೀಕರಣಕ್ಕೆ ನೆರವಾದ ನಿನಗೆ ತುಂಬು ಸಭೆಯಲ್ಲಿ ಮನ ಬಿಚ್ಚಿ ಧನ್ಯವಾದ ತಿಳಿಸಿದ್ದೇನೆ.
janardhana reddy and shivaraj thangadagi
ಜನಾರ್ದನ ರೆಡ್ಡಿ ಮತ್ತು ಶಿವರಾಜ್ ತಂಗಡಗಿ
Updated on

ಬೆಂಗಳೂರು: ಅಣ್ತಮ್ಮಾ ಜನಾರ್ದನರೆಡ್ಡಿ, ಮತ್ತದೇ ಪೊಳ್ಳು ನುಡಿಗಳ ಮೊರೆ ಹೋಗಿದ್ದೀಯ. ನಾನು ನನ್ನ ಸ್ವಂತ ಆಸ್ತಿ ಮಾರಿಕೊಂಡು ಚುನಾವಣೆ ಎದುರಿಸಿದವನು. ಚುನಾವಣೆಗಾಗಿ ಯಾರ ಮುಂದೆಯೂ ಕೈ ಚಾಚಿದವನಲ್ಲ. ಅದು ನಿನಗೂ ಚೆನ್ನಾಗಿ ಗೊತ್ತಿದೆ ಎಂದು ರೆಡ್ಡಿ ವಿರುದ್ಧ ಶಿವರಾಜ ತಂಗಡಗಿ ಮತ್ತೆ ಹರಿಹಾಯ್ದಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಎರಡು ದಿನ ಹುಡುಕಾಡಿ ತಡಕಾಡಿ ಒಂದು ವಿಡಿಯೋ ಹಾಕಿದ್ದೀಯ. ಸರಿ ಇದೆ. ಆದರೆ, ನಾನು ಮಾತನಾಡಿರುವ ಮಾತಿಗೂ ನೀನು ಹೇಳಿರುವುದಕ್ಕೂ ಸಾಸಿವೆ ಕಾಳಿನಷ್ಟಾದರೂ ಸಂಬಂಧವಿದೆಯೇ? ನನ್ನ ಯಾವ ಮಾತನ್ನು ಎಲ್ಲಿಗೆ ಜೋಡಿಸಿ ಮೈಲೇಜ್ ಪಡೆಯಲು ಯತ್ನಿಸುತ್ತಿದ್ದೀಯಾ? ನಾನು ನಿನ್ನ ಗಣಿ ಹಣದಿಂದ ಗೆದ್ದಿದ್ದೇನೆ. ನಿನ್ನ ಆಶೀರ್ವಾದ ಗೆದ್ದಿದ್ದೇನೆ ಎಂದೆಲ್ಲಾ ಬೊಗಳೆ ಬಿಟ್ಟಿರುವೆ. ಚುನಾವಣೆ ಸಂದರ್ಭದಲ್ಲಿ ನಾನು ಎಷ್ಟು ಆಸ್ತಿ ಮಾರಾಟ ಮಾಡಿ ಚುನಾವಣೆಯನ್ನು ಎದುರಿಸಿದ್ದೇನೆ ಎಂಬುದು ನಿನಗೆ ಗೊತ್ತಿಲ್ಲವೇ? ಎಂದು ಪ್ರಶ್ನಸಿದ್ದಾರೆ.

ನಿನ್ನ ಆಪ್ತ ಸಹಾಯಕನ ಮೂಲಕ ನನ್ನ ಆಸ್ತಿ ನಗದೀಕರಣ ಮಾಡಿಸಿದೆ. ನನ್ನ ಆಸ್ತಿ ನಗದೀಕರಣಕ್ಕೆ ಮಧ್ಯವರ್ತಿಯಾಗಿ ನೆರವಾಗಿದ್ದೆ ಅನ್ನೋದು ಬಿಟ್ಟರೆ ಬೇರೇನಿದೆ? ಸಾಸಿವೆ ಕಾಳಿನಷ್ಟು ಸಹಾಯವನ್ನೂ ಬೆಟ್ಟದಂತೆ ನೆನೆಸುವವನು ನಾನು.‌ ಹೀಗಾಗಿಯೇ ತುರ್ತು ಸಮಯದಲ್ಲಿ ನನ್ನ ಆಸ್ತಿ‌ ನಗದೀಕರಣಕ್ಕೆ ನೆರವಾದ ನಿನಗೆ ತುಂಬು ಸಭೆಯಲ್ಲಿ ಮನ ಬಿಚ್ಚಿ ಧನ್ಯವಾದ ತಿಳಿಸಿದ್ದೇನೆ.

ಆದರೆ ಅದನ್ನೇ ಬೇರೆ ರೀತಿ ಬಿಂಬಿಸಿ ಪೋಸು ಕೊಡುತ್ತಿದ್ದೀಯ. ಪಕ್ಷೇತರ ಶಾಸಕನಾಗಿದ್ದ ನಾನು ನೀನು ಹೇಳಿದ ಪಕ್ಷಕ್ಕೆ ಬೇಷರತ್ ಬೆಂಬಲ ಕೊಟ್ಟೆ. ನನ್ನ ಅಡ್ಡ ಇಟ್ಟುಕೊಂಡು ನೀನು ಮಂತ್ರಿಯಾದೆ. ನಿನ್ನ ಸಹೋದರ, ಸ್ನೇಹಿತ ಎಲ್ಲರೂ ಅಧಿಕಾರದ ಪಡಸಾಲೆಗೆ ಬಂದಿರಿ.

janardhana reddy and shivaraj thangadagi
ತಮ್ಮಾ ತಂಗಡಗಿ, ಕಿವಿಗೆ ಹೆಡ್‌ಫೋನ್ ಹಾಕ್ಕೊಂಡು ಇನ್ನೊಂದು ಸಲ ಕ್ಲಿಯರ್ ಆಗಿ ಕೇಳಿಸ್ಕೋ: ಹಳೇ ವಿಡಿಯೋ ಶೇರ್ ಮಾಡಿ ರೆಡ್ಡಿ ಟಾಂಗ್

ಹಳೆಯ ವಿಚಾರ ಕೆದಕ್ಕಿದ್ದೀಯಲ್ಲಪ್ಪ. ನೀನೇ ನಿನ್ನ ಬಾಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನು ಕಾರಣವಲ್ಲ. ಭೋವಿ ಸಮಾಜದ ಶಿವರಾಜ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ಕಾರಣ ಎಂದಿದ್ದೀಯಲ್ಲ. ಅದು ಮರೆತು ಹೋಯಿತೇ ಅಥವಾ ಮರೆತಂತೆ ನಾಟಕವೇ? ಹಾಗಾದರೆ ನಮ್ಮ ಬೆಂಬಲ ಹಾಗೂ ಕನಕಗಿರಿ ಕ್ಷೇತ್ರದ ಜನತೆಯ ಭಿಕ್ಷೆಯಿಂದಲೇ ನೀನು, ನಿನ್ನ ಸಹೋದರ ಸಚಿವರಾಗಿದ್ದಲ್ಲವೇ? ಅದನ್ನೂ ಹೇಳಿಬಿಡು ಎಂದಿದ್ದಾರೆ.

ಆ ದಿ‌‌ನ ನಿನ್ನ ಕ್ಷೇತ್ರಕ್ಕೆ ನನ್ನನ್ನು ಬಲವಂತವಾಗಿ ಆಹ್ವಾನಿಸಿದ್ದೇ ನೀನು. ಸಾಸಿವೆ ಕಾಳಷ್ಟು ಸಹಾಯವನ್ನೂ ನೆನೆಯಬೇಕಿರುವುದು ಧರ್ಮ ನೆನೆದಿದ್ದೇನೆ. ಅದನ್ನೂ ತಿರುಚಿ ದುರ್ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದೀಯಲ್ಲಾ ನಿನ್ನ ಏನನ್ನಬೇಕು? ಎಂದು ತಂಗಡಗ ಪ್ರಶ್ನಿಸಿದ್ದಾರೆ.

ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನೀನು ಎಷ್ಟು ಬಾರಿ ನನ್ನ ಸಂಪರ್ಕಿಸಿದ್ದೆ? ನಮ್ಮ ಅಭ್ಯರ್ಥಿಗೆ ಬೆಂಬಲ‌ ನೀಡುತ್ತೇನೆ ಎಂದು ಎಷ್ಟು ಬಾರಿ ಗೋಗರೆದೆ. ಎಲ್ಲಿ ಯಾವ ರೀತಿ ಸಹಾಯ ಪಡೆದೆ ಎಂಬುದನ್ನು ಹೇಳಿಬಿಡು. ನಿನಗೆ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ನೆನಪಾಗಲಿಲ್ಲವೇ? ನಿಮ್ಮ ಕ್ಷೇತ್ರಕ್ಕೆ ಹರಿದು ಬಂದ ಅನುದಾನ ಸುಮ್ಮನೆ ಬಂತೇ? ಅನುದಾನಕ್ಕೆ ಅಂಗಾಲಾಚಿದೆಯಲ್ಲ. ನಿನ್ನ ಕ್ಷೇತ್ರಕ್ಕೆ ಬಂದ ಅನುದಾನದಲ್ಲಿ ನನ್ನ ಕೊಡುಗೆ ಇಲ್ಲವೇ? ನೀನು ನನ್ನ ಋಣದಲ್ಲಿದ್ದೀಯೇ ಹೊರತು ನಾನು ಅಲ್ಲ. ಉಪಕಾರ ಸ್ಮರಣೆ ಇಲ್ಲದ ಕೃತಘ್ನ ನೀನು. ರಾಜಕೀಯದಲ್ಲಿ ಕಾಲಕ್ಕೆ ತಕ್ಕಂತೆ ಮಾತು ಬದಲಾಯಿಸುವ ಊಸರವಳ್ಳಿ. ನೀನು ಎಷ್ಟೇ ಸುಳ್ಳು ಹೇಳಿದರು ಜನರಿಗೆ ಸತ್ಯ ತಿಳಿದಿದೆ.

ಮೊದಲು ಸಹಾಯ ಮಾಡಿದವರನ್ನು ನೆನೆಯುವುದು ಕಲಿ. ನಿನ್ನ ಸಚಿವನಾಗಿ ಮೆರೆಸಿದ ಯಡಿಯೂರಪ್ಪ ಅವರಿಗೆ ಬೆನ್ನಿಗೆ ಚೂರಿ ಹಾಕಿದವನು ನೀನು. ಬಿಜೆಪಿಯನ್ನೇ ಮುಗಿಸಲು ಹೊರಟವನು. ಕನಕಗಿರಿಯಲ್ಲಿ ನನ್ನ ವಿರುದ್ಧ ನಿಂತಿದ್ದ ಬಿಜೆಪಿ ಅಭ್ಯರ್ಥಿಗೆ ಬಿಟ್ಟು ನನಗೆ ಆರ್ಥಿಕ ನೆರವಾದೆ ಎಂದು ಬುರುಡೆ ಬಿಡುತ್ತಿದ್ದೀಯ. ಹಾಗಾದರೆ ಸ್ವಂತ ಪಕ್ಷ ಮುಗಿಸುವ ಖಯಾಲಿ ಅಂದಿನಿಂದಲೇ ಇತ್ತು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದೀಯಾ?

ಒಂದು ಸುಳ್ಳು ಹೇಳಿದರೆ ಅದನ್ನು ಮುಚ್ಚಿಕೊಳ್ಳಲು ನೂರು ಹೇಳಬೇಕಾಗುತ್ತದೆ. ನಿನಗೆ ಮಾನ ಮರ್ಯಾದೆ ಇದ್ದರೆ ಜೈಲಿಗೆ ಯಾಕೆ ಹೋದೆ? ಬಿಜೆಪಿ ವಿರುದ್ಧ ಪಕ್ಷ ಯಾಕೆ ಕಟ್ಟಿದೆ? ಶ್ರೀರಾಮುಲು ಮುಗಿಸಲು ಷಡ್ಯಂತ್ರ ಯಾಕೆ ಮಾಡಿದೆ? ಸ್ವಂತ ತಮ್ಮನನ್ನೇ ಯಾಕೆ ಸೋಲಿಸಿದೆ ಹೇಳು. ಇದೆಲ್ಲಾ ಪ್ರಶ್ನೆಗೆ ಉತ್ತರಿಸಿ ನಿನ್ನ ಮೊದಲ ಸವಾಲಿನಂತೆ ನಾಳೆಯೇ ರಾಜೀನಾಮೆ ನೀಡು. ಬೆನ್ನಲ್ಲೇ ನಾನೂ ರಾಜೀನಾಮೆ‌ ನೀಡುತ್ತೇನೆ. ಮುಂದಿನದ್ದು ಉಪ ಚುನಾವಣಾ ಕಣದಲ್ಲೇ ಚರ್ಚೆಯಾಗಲಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com