

ಬೆಂಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ನನ್ನ ಮಧ್ಯೆ ಮುಖ್ಯಮಂತ್ರಿ ರೇಸ್ ಸೃಷ್ಟಿಸಬೇಡಿ. ಮುಖ್ಯಮಂತ್ರಿ ಯಾರು ಅನ್ನೋದನ್ನ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಶನಿವಾರ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.
ಇಂದು ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ, ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಅಕ್ಟೋಬರ್ 23 ರಂದು ನಡೆಯಲಿರುವ ಚುನಾವಣೆ ಕುರಿತು ಚರ್ಚಿಸಲು ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಕರೆಯಲಾಗಿತ್ತು.
ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಮುಂಬರುವ ಬಿಜೆಪಿ-ಜೆಡಿಎಸ್ ಸರ್ಕಾರ ರಚಿಸುವ ಚರ್ಚೆಯ ಜೊತೆಗೆ ಮುಂದಿನ ಸಿಎಂ ಬಗ್ಗೆಯೂ ಚರ್ಚಿಸಲಾಗಿದೆ. ಮುಂದಿನ ಸಿಎಂ ಯಾರು ಅಂತ ಹೈಕಮಾಂಡ್ ನಿರ್ಧಾರ ಮಾಡಲಿದೆ. ಇದರ ಬಗ್ಗೆ ಮುಖಂಡರು, ಕಾರ್ಯಕರ್ತರು ಬಹಿರಂಗ ಚರ್ಚೆ ನಡೆಸಬಾರದು. ಕುಮಾರಸ್ವಾಮಿ-ವಿಜಯೇಂದ್ರ ಪರ ರೇಸ್ ಸೃಷ್ಟಿಸಬಾರದು. ಯಾವುದೇ, ಘೋಷಣೆ ಮಾಡಬಾರದು ಎಂದು ಸೂಚಿಸಿದರು.
ಕಾರ್ಯಕರ್ತರಿಗೆ ಇದರ ಬಗ್ಗೆ ಗೊಂದಲ ಬೇಡ. ಎನ್‌ಡಿಎ ಸರ್ಕಾರ (NDA Govt) ಅಧಿಕಾರಕ್ಕೆ ಬರೋದು ನಿಶ್ಚಿತ. ಸಿಎಂ ಯಾರಾಗಬೇಕು ಅಂತ ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದರು.
ಇದೇ ವೇಳೆ ಮಾತವಾಡಿದ ಕುಮಾರಸ್ವಾಮಿ ಅವರು, ಮುಂದಿನ ಎಲ್ಲ ಚುನಾವಣೆಗಳನ್ನೂ ಎನ್‌ಡಿಎ ಮೈತ್ರಿಯಡಿ ಒಗ್ಗಟ್ಟಿನಿಂದ ಎದುರಿಸಬೇಕು. ಬಿಹಾರ ಮಾದರಿಯಲ್ಲಿ ಮುಂದಿನ ಚುನಾವಣೆ ನಡೆಸಬೇಕು. ರಾಜ್ಯದಲ್ಲಿ ನಾವು 180 ಸ್ಥಾನ ಗೆಲ್ಲಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟಾರ್ಗೆಟ್ ಫಿಕ್ಸ್ ಮಾಡಿದರು.
ಕುಮಾರಸ್ವಾಮಿ ಅಭಿಪ್ರಾಯವನ್ನು ಬಿಜೆಪಿ ನಾಯಕರು ಸ್ವಾಗತಿಸಿದರು. ಸ್ಥಳೀಯ ಕಾರ್ಯಕರ್ತರು, ನಾಯಕರಿಗೆ ಈ ಟಾರ್ಗೆಟ್ ರೀಚ್ ಮಾಡಬೇಕು ಎಂದ ನಿರ್ಣಯಿಸಿದ ದೋಸ್ತಿ ನಾಯಕರು ಬಿಹಾರ ಮಾದರಿಯಲ್ಲಿ ಚುನಾವಣೆ, ಟಾರ್ಗೆಟ್ 180 ಅಂತ ಸಭೆಯಲ್ಲಿ ಘೋಷಣೆ ಮೊಳಗಿಸಿದ್ರು.