ಪರದೇಸಿಗಳಾಗಿ ಪರದಾಡುತ್ತಿರುವ ಗಡಿನಾಡ ಕನ್ನಡಿಗರು

ರಾಜ್ಯಗಳ ರಚನೆಯ ವೇಳೆ ಕೆಲವು ಕನ್ನಡದ ಪ್ರದೇಶಗಳು ನಮ್ಮ ನೆರೆಮನೆಯ ರಾಜ್ಯಗಳಲ್ಲಿ ಉಳಿದುಹೋದವು. ಅಲ್ಲಿ ಅವರು ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಇಚ್ಛಿಸಿದರೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ...
ಗಡಿನಾಡ ಕನ್ನಡಿಗರ ಸಮಸ್ಯೆ (ಸಂಗ್ರಹ ಚಿತ್ರ)
ಗಡಿನಾಡ ಕನ್ನಡಿಗರ ಸಮಸ್ಯೆ (ಸಂಗ್ರಹ ಚಿತ್ರ)

ಹೊರನಾಡ ಕನ್ನಡಿಗರಲ್ಲೇ ಮತ್ತೊಂದು ಪ್ರಭೇದವಿದೆ. ಅದು ಗಡಿನಾಡ ಕನ್ನಡಿಗರು. ರಾಜ್ಯಗಳ ರಚನೆಯ ವೇಳೆ ಕೆಲವು ಕನ್ನಡದ ಪ್ರದೇಶಗಳು ನಮ್ಮ ನೆರೆಮನೆಯ ರಾಜ್ಯಗಳಲ್ಲಿ  ಉಳಿದುಹೋದವು. ಅಲ್ಲಿ ಅವರು ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಇಚ್ಛಿಸಿದರೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗಳಿದ್ದರೆ ಶಿಕ್ಷಕರಿಲ್ಲ, ಶಿಕ್ಷಕರಿದ್ದರೆ  ಪಠ್ಯಗಳಿಲ್ಲ ಎಂಬಂಥಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗಡಿನಾಡ ಕನ್ನಡಪರ ಸಂಘಟನೆಗಳು ಈ ಬಗ್ಗೆ ಹೋರಾಟ ಮಾಡುತ್ತಾ ಬಂದಿವೆಯಾದರೂ, ಆ ಸಂಘಟನೆಗಳಿಗೆ ಮತ್ತು ಕೆಲ ಸಮಾಜಪರ ಕಾರ್ಯಗಳನ್ನು ಮಾಡುತ್ತಿರುವ ಸಂಘಟನೆಗಳಿಗೆ  ಸರ್ಕಾರ ನೀಡುತ್ತಿರುವ ನೆರವು ಸಾಲುತ್ತಿಲ್ಲ. 2010ರ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿತ್ತು. ಚಂದ್ರಕಾಂತ ಬೆಲ್ಲದ ಅವರು ಇದಕ್ಕೆ  ಅಧ್ಯಕ್ಷರಾದರು. ಪ್ರಾಧಿಕಾರ ಗಡಿ ಪ್ರದೇಶದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಗಡಿಯ ಒಳಗೂ ಹೊರಗೂ ಇರುವ ಕನ್ನಡಿಗರ ಸ್ಥಿತಿ ಸುಧಾರಣೆ, ಗಡಿಯಾಚೆ ಕನ್ನಡ  ಮಾಧ್ಯಮಗಳ ಶಾಲೆಗಳ ಸ್ಥಾಪನೆ, ಗ್ರಂಥಾಲಯಗಳ ಸ್ಥಾಪನೆ ಮತ್ತು ಕನ್ನಡ ಪರ ಸಂಘಟನೆಗಳಿಗೆ, ಭಾಷಾ ಚಟುವಟಿಕೆಗಳಿಗೆ ಅನುದಾನ ನೀಡುವುದು, ಉಪನ್ಯಾಸ ಮಾಲಿಕೆಗಳನ್ನು ನಡೆಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ, ಗಡಿಯಲ್ಲಿರುವ ಕಲೆ, ಸಂಸ್ಕೃತಿ ಉಳಿಸುವಿಕೆ. ಅಭಿವೃದ್ಧಿ ಕಾರ್ಯಕ್ರಮ ಹಾಕಿಕೊಳ್ಳುವುದು, ಜನರ ಸಾಂಸ್ಕೃತಿಕ ಆರ್ಥಿಕ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮ ವಹಿಸುವುದು ಮತ್ತು ಸಾಂಸ್ಕೃತಿಕ ಭವನಗಳ ನಿರ್ಮಾಣ ಇತ್ಯಾದಿ ಚಟುವಟಿಕೆಗಳನ್ನು ನಡೆಸುವುದು ಈ ಪ್ರಾಧಿಕಾರದ ಕರ್ತವ್ಯವಾಗಿದೆ.

ಗಡಿಭಾಗದಲ್ಲಿರುವ ಗ್ರಾಮಗಳ ಜನರು ಹೊರ ರಾಜ್ಯಗಳ ಜನರಿಗೆ ಸಿಗುತ್ತಿರುವ ಸೌಲಭ್ಯ ನೋಡಿ ನಿರಾಶರಾಗುತ್ತಿದ್ದಾರೆ. ಆಂಧ್ರ ಸರ್ಕಾರ ಗಡಿ ಭಾಗದ ಕೃಷಿಕರಿಗೆ ಹೆಚ್ಚಿನ ಸೌಲಭ್ಯ ನೀಡುತ್ತಿದೆ.  ವಸತಿ ಸೌಲಭ್ಯ, ನೀರಾವರಿ, ಗ್ಯಾಸ್, ರಸ್ತೆ ಅಭಿವೃದ್ಧಿಯಂತಹ ಪ್ರಮುಖ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಅವರ ಅಭಿವೃದ್ಧಿಗೆ ಅಲ್ಲಿನ ಸರ್ಕಾರಗಳು ಶ್ರಮಿಸುತ್ತಿದೆ. ಒಂದೇ  ಹಳ್ಳಿಯಲ್ಲಿ ಅರ್ಧದಷ್ಟು ಜನ ಆಂಧ್ರಕ್ಕೂ ಇನ್ನರ್ಧ ಜನ ಕರ್ನಾಟಕಕ್ಕೂ ಸೇರಿದ ಉದಾಹರಣೆಗಳಿವೆ. ಹೀಗಾಗಿ ಇಲ್ಲಿ ಆಗುವ ತಾರತಮ್ಯ ನಿವಾರಣೆಯಾಗಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರ  ಸಫಲವಾಗಬೇಕು. ಗಡಿಯ ಜನರ ಬದುಕನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾರುಕಟ್ಟೆ, ಸಾರಿಗೆ-ಸಂಪರ್ಕ ರಸ್ತೆ, ಶಿಕ್ಷಣ, ವಸತಿ, ಆರೋಗ್ಯ ಮೂಲಭೂತ ಅವಶ್ಯಕತೆಗಳು ಪೂರೈಕೆಯಾಗಬೇಕು.  ಕನ್ನಡ ಓದಿದ ಮಕ್ಕಳು ಶಿಕ್ಷಣ ಮುಂದುವರಿಸಲು ಅವರಿರುವ ರಾಜ್ಯ ಸಹಾಯ ಮಾಡುವುದಿಲ್ಲ. ಅವರತ್ತ ಕರ್ನಾಟಕ ಸರ್ಕಾರ ಕೂಡ ಗಮನ ಕೊಡುವುದಿಲ್ಲ. ಉದ್ಯೋಗದ ವಿಚಾರದಲ್ಲಿ ಗಡಿನಾಡ ಮಕ್ಕಳು ಯಾರಿಗೂ ಬೇಡವಾಗಿದ್ದಾರೆ. ಹೀಗಾಗಿ ಗಡಿನಾಡ ಕನ್ನಡಿಗರು ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ.

ರಾಜ್ಯ ಸರ್ಕಾರದ ಹೊಣೆ ಏನು?
ಗಡಿನಾಡ ಕನ್ನಡಿಗರ ಮತ್ತು ಕನ್ನಡ ಓದುವ ಮಕ್ಕಳಿಗೆ ಅಗತ್ಯವಾದ ಸೌಲಭ್ಯ ಕೊಡಲು ಸರ್ಕಾರ ಮುಂದಾಗಬೇಕಿದ್ದು, ಗಡಿನಾಡು ಶಿಕ್ಷಣ ನಿರ್ದೇಶನಾಲಯ ಸ್ಥಾಪನೆ ಆಗಬೇಕು. ಗಡಿ ತಾಲೂಕುಗಳಲ್ಲಿ ಕನಿಷ್ಠ ಹೋಬಳಿಗೆ ಒಂದರಂತೆ ಕನ್ನಡ ಮಾಧ್ಯಮ ವಸತಿ ಶಾಲೆ ಸ್ಥಾಪನೆ ಆಗಬೇಕು. ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ, ಅಲ್ಪ ಸಂಖ್ಯಾತರಿಗೆ ಉಚಿತ ವಿದ್ಯಾರ್ಥಿ ನಿಲಯಗಳು ಸ್ಥಾಪನೆಯಾಗಬೇಕು. ಸಂಸದರು ಅಥವಾ ಶಾಸಕರು ತಮ್ಮ ನಿಧಿಯಿಂದ ಗಡಿನಾಡಿನ ಅಭಿವೃದ್ಧಿಗೆ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ಮೀಸಲಿಡಬೇಕು. ಗಡಿನಾಡು ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಬೇಕು. ಕನ್ನಡದ ಆಸಕ್ತಿ ಇರುವ ಅಧಿಕಾರಿಗಳನ್ನು ನೇಮಿಸಬೇಕು ಅಥವಾ ವರ್ಗಾಯಿಸಬೇಕು. ಎಲ್ಲ ವರ್ಗದ ಸರ್ಕಾರಿ ನೌಕರರು ಮೂರು ವರ್ಷ ಕಡ್ಡಾಯವಾಗಿ ಗಡಿಭಾಗದಲ್ಲಿ ಸೇವೆಯನ್ನು ಸಲ್ಲಿಸಬೇಕು. ಗಡಿಭಾಗದಲ್ಲಿ ಉತ್ತಮ ಸಾರಿಗೆ ಸಂಪರ್ಕ ಆರೋಗ್ಯ ಕಲ್ಪಿಸಬೇಕು.

ಅಲ್ಲಿಯ ನೈಸರ್ಗಿಕ ಸಂಪತ್ತುಗಳನ್ನು ಆಧರಿಸಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಗಿರಿಜನರ ಅಭಿವೃದ್ಧಿಗೆ ಚಾಮರಾಜನಗರದಲ್ಲಿ ಅಭಿವೃದ್ಧಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಪ್ರತಿ  ತಾಲೂಕಿನಲ್ಲಿ "ಕನ್ನಡ ಸಂಸ್ಕೃತಿ ಭವನ" ಸ್ಥಾಪಿಸಬೇಕು. ಕನ್ನಡ-ಕರ್ನಾಟಕ ಸಂಸ್ಕೃತಿಗೆ ದುಡಿದ ಗಡಿನಾಡ ಪ್ರತಿಭೆಗಳಿಗೆ ಅಕಾಡೆಮಿ, ಪ್ರಾಧಿಕಾರ ಪ್ರಶಸ್ತಿ ಕೊಡಬೇಕು. ಪ್ರೇಕ್ಷಣೀಯ ಸ್ಥಳಗಳ  ಅಭಿವೃದ್ಧಿ ಮಾಡಬೇಕು. ಕರ್ನಾಟಕ ಗಡಿನಾಡು ಚಲನಚಿತ್ರ ಕಲಾ ಕೇಂದ್ರ ಸ್ಥಾಪನೆ ಆಗಬೇಕು. ಕೋಲಾರದಲ್ಲಿ, ಬೆಳಗಾವಿಯಲ್ಲಿ ಸಾಮಾಜಿಕ ಅಭಿವೃದ್ಧಿ ಸಂಶೋಧನಾ ಕನ್ನಡ ಕೇಂದ್ರ ಸ್ಥಾಪನೆ  ಆಗಬೇಕು. ಗುಡಿ ಕೈಗಾರಿಕೆ, ಹೈನುಗಾರಿಕೆ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ಕೊಡಬೇಕು. ಸರ್ಕಾರಗಳು ಗಡಿ ಕನ್ನಡಿಗರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಖಂಡ ಕರ್ನಾಟಕದ ಪರಿಕಲ್ಪನೆ  ಬರಿಯ ಕಲ್ಪನೆಯಾಗಿಯೇ ಉಳಿದುಬಿಡುತ್ತದೆ ಎಂಬುದನ್ನು ಮರೆಯಬಾರದು.

ಬೈನಾ ಬೀಚಿನಲ್ಲಿ ಪರದೇಸಿಗಳಾದ ಕನ್ನಡಿಗರು
ಗೋವಾದಲ್ಲಿರುವ ಬೈನಾ ಬೀಚಿನಲ್ಲಿಯೂ ಕನ್ನಡಿಗರು ನೆಲೆಸಿದ್ದು, ಇವರಲ್ಲಿ ಇದೀಗ ಅನಾಥ ಪ್ರಜ್ಞೆ ಕಾಡುತ್ತಿದೆ. ಹಲವು ವರ್ಷಗಳಿಂದ ಬೈನಾ ಬೀಚಿನಲ್ಲಿ ಕನ್ನಡಿಗರು ನೆಲೆಸಿದ್ದು, ಅವರಿಗೆ  ಸರ್ಕಾರವೇ ನೀಡಿರುವ ರೇಷನ್ ಕಾರ್ಡುಗಳಿವೆ, ವಿದ್ಯುತ್ ಸಂಪರ್ಕವಿದೆ, ನೀರಿನ ಸಂಪರ್ಕವಿದೆ. ಇಷ್ಟಿದ್ದೂ ಅವರ ವಸತಿಗಳನ್ನು ಸ್ಥಳೀಯ ಜಿಲ್ಲಾಡಳಿತ ನೆಲಸಮ ಮಾಡಿ ಆ ಕುಟುಂಬಗಳನ್ನು  ನಿರ್ವಸತಿಕರನ್ನಾಗಿ ಮಾಡಿದೆ.

ವಸತಿಗಳನ್ನು ಪೂರ್ಣವಾಗಿ ನೆಲಸಮ ಮಾಡುವವರೆಗೂ ಕರ್ನಾಟಕ ಸರ್ಕಾರವು ಗಡಿಭಾಗದ ಪೋಲಿಸ್ ಠಾಣೆಗಳ ಅಧಿಕಾರಿಗಳನ್ನು ಬೈನಾ ಬೀಚಿಗೆ ಕಳಿಸಿ ವರದಿ ತರಿಸಿಕೊಳ್ಳುವ ಕಣ್ಣೊರೆಸುವ  ಕೆಲಸವನ್ನು ಮಾಡಿತು. ನೆಲಸಮ ಮಾಡುವ ಕೆಲಸ ಮುಗಿದ ನಂತರ ಉನ್ನತ ಶಿಕ್ಷಣ ಸಚಿವ ಆರ್ ವಿ. ದೇಶಪಾಂಡೆ ನೇತೃತ್ವದ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿ ಬಂದಿತಾದರೂ, ಬಳಿಕ  ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು ಗೋವಾದ ಆಂತರಿಕ ವ್ಯವಹಾರದಲ್ಲಿ ಕರ್ನಾಟಕ ತಲೆಹಾಕುವುದು ಸರಿಯಲ್ಲ ಎಂದರು. ದೇಶಪಾಂಡೆ ಅವರ ಮಾತು ಸತ್ಯವೇ ಆದರೂ, ಪರರಾಜ್ಯದಲ್ಲಿರುವ ನಮ್ಮವರ ರಕ್ಷಣೆ ಕೂಡ ನಮ್ಮದೇ ಹೊಣೆ ಎಂಬುದನ್ನು ಸರ್ಕಾರ ಮರೆಯಬಾರದು. ವಲಸೆಹೋದ ಕುಟುಂಬಗಳು ಈಗಲೂ ಕರ್ನಾಟಕದ ತಮ್ಮ ಮೂಲ ಹಳ್ಳಿಗಳಲ್ಲಿ ಕೃಷಿ ಭೂಮಿ ಹೊಂದಿವೆ. ಅವರ ಸಂಬಂಧಿಗಳು ಇಲ್ಲಿಯೇ ಇದ್ದಾರೆ. ಮಳೆಗಾಲದಲ್ಲಿ ಬಂದು ಇಲ್ಲಿನ ಕೃಷಿ ಭೂಮಿಯಲ್ಲಿ ಕೆಲಸ ಮಾಡಿ ವರ್ಷದ ಉಳಿದ ಭಾಗವನ್ನು ಬೈನಾ ಬೀಚಿನಲ್ಲಿ ಕಳೆಯುತ್ತವೆ. ಅವರ ಮಕ್ಕಳಲ್ಲಿ ಹೆಚ್ಚಿನವರ ವಿದ್ಯಾಭ್ಯಾಸ, ಉದ್ಯೋಗವು ಗೋವಾದಲ್ಲಿಯೇ ನಡೆಯುತ್ತದೆ.

ಅವರಿಗೆ ಉತ್ತಮ ಆದಾಯ ನೀಡಬಲ್ಲ ಸರ್ಕಾರದ ಹಲವಾರು ಯೋಜನೆಗಳು ಉತ್ತರ ಕರ್ನಾಟಕದ ಭಾಗಗಳಲ್ಲಿ ಯಶಸ್ವಿಯಾಗಿಲ್ಲದಿರುವುದೂ ಆ ಕುಟುಂಬಗಳ ತೊಂದರೆಗಳಿಗೆ ಮೂಲಕಾರಣ.  ಅಂದರೆ ವರ್ಷ ಪೂರ್ತಿ ಈ ವಲಸಿಗರಿಗೆ ಕರ್ನಾಟಕದಲ್ಲಿ ಕೆಲಸವಿಲ್ಲದಿರುವುದರಿಂದ ಮತ್ತು ಅವರ ಅಗತ್ಯಕ್ಕೆ ತಕ್ಕ ಆದಾಯವೂ ಇಲ್ಲಿ ಇಲ್ಲದಿರುವುದರಿಂದ ಗೋವಾದ ಬೈನಾ ಬೀಚಿನ ಬದುಕು ಅವರಿಗೆ ಹೆಚ್ಚು ಅಪ್ಯಾಯ ಮಾನವಾಗಿದೆ. ಕರ್ನಾಟಕ ಸರ್ಕಾರವು ಈ ಕುಟುಂಬಗಳ ಕಣ್ಣೊರೆಸುವ ಪ್ರಯತ್ನ ಮಾಡುವ ಬದಲು ಅವರಿಗೆ ಅವರ ಮೂಲ ಸ್ಥಳದಲ್ಲಿಯೇ ಉದ್ಯೋಗ ಮತ್ತು ಆದಾಯದ ಅವಕಾಶ ಒದಗಿಸುವ ಬಗ್ಗೆ ಯೋಚಿಸಿದರೆ ಈ ಅಂತಾರಾಜ್ಯ ಸಮಸ್ಯೆಗೆ ಪರಿಹಾರ ಸಿಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com