ಬಿಂದಿಗೆ ಹಿಡಿದು ಬಂದವಳ ಜೊತೆ ಮೋರಿ ಮೇಲೆ ಕೂತವನ ಪ್ರೀತಿ ವಿನಿಮಯ: ಹಳ್ಳಿಗಳಲೂ ವ್ಯಾಲೆಂಟೈನ್ಸ್ ಡೇ

ನಗರದ ಪ್ರೀತಿಗೆ ಬಂಧುಗಳು ಜಾಸ್ತಿ. ಹಳ್ಳಿ ಪ್ರೀತಿಗೆ ಶತ್ರುಗಳೇ ಹೆಚ್ಚು. ಹಳ್ಳಿಯ ಒಲವುಗಳು ಬೆಚ್ಚಗಿರಲಿ. ಪ್ರೀತಿಸುವ ನಮ್ಮ ಹಳ್ಳಿ ಮನಸ್ಸುಗಳಿಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
<strong>ಸದಾಶಿವ್ ಸೊರಟೂರು</strong>
ಸದಾಶಿವ್ ಸೊರಟೂರು


ಲೇಖಕ ಸದಾಶಿವ್ ಸೊರಟೂರು ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ. 


ಅವಳು ನೀರಿಗೆ ಅಂತ ಬಿಂದಿಗೆ ಹಿಡಿದು ನಲ್ಲಿ ಹತ್ತಿರ ಬರ್ತಿದ್ಲು. ಇವನು ಅಲ್ಲೆ ಮೋರಿಯ ಕಟ್ಟೆ ಮೇಲೆ ಕೂತು ಕಾಯ್ತಿದ್ದ. ಎರಡ್ಮೂರು ತುಂಡು ನೋಟಗಳು ವಿನಿಮಯ. ಜಗತ್ತಿಗೆ ಕಾಣದ ಸಣ್ಣ ನಗುವಿಗೆ ಒಂದು ವರ್ಷದ ಕಂದಾಯ. ಅದೇ ಇಬ್ಬರು ಗೆಲುವು. 

ಮಾತು ಹುಟ್ಟಿ ಹುಟ್ಟಿ ಅಲ್ಲೆ ಸಾಯುತ್ತಿದ್ದವು. ಅವನು ಬರೆದ ಅರೆಬರೆ ಅಕ್ಷರದ ಪ್ರೇಮಪತ್ರ ಅಂಗೈ ಬೆವರಿನಲ್ಲೆ ಕರಗಿ ಹೋಗುತ್ತಿತ್ತು. ಅವಳ ನೋಟ, ಅವಳ ನಗು, ಅವಳ ಕಣ್ಣುಬ್ಬಿನ ಚಲನೆ ಸಿಕ್ಕ ಪ್ರತಿ ಕ್ಷಣವೂ ಅವರ ಪಾಲಿನ ವ್ಯಾಲಂಟೈನ್ಸ್ ಡೇ. 

ನೋಟಕೆ, ಸಣ್ಣ ನಗುವಿಗೆ ಮೂರಾಲ್ಕು ವರ್ಷದ ಬೇಡಿದ ಪ್ರೀತಿ ಒಂದಿನ ಮುರಿದು ಹೋಗುತ್ತಿತ್ತು. ಅವಳು ಅಪ್ಪ ತೋರಿಸಿದ ಹುಡುಗನನ್ನು ಮದುವೆ ಆಗಿ ಹೊರಟು ಹೋಗುತ್ತಿದ್ಲು. ಇವನು ಗೆಳೆಯರ ಮುಂದೆ ಗೊಳೊ ಅನ್ನುತ್ತಿದ್ದ. ಇದು ನಮ್ಮ ಹಳ್ಳಿಯಲ್ಲಿ ನಡೆದು ಹೋದ ಎಲ್ಲಾ ಪ್ರೀತಿಗಳ ಅಸಲಿ ಕಥೆ. 

ನಿಲ್ಲದ ಚಡಪಡಿಕೆ

ವ್ಯಾಲೆಂಟೈನ್ಸ್ ಡೇ ಗೆ ಜಾತಕ ಪಕ್ಷಿಯಂತೆ ಕಾದು ಕೂರುವ ದೊಡ್ಡ ಹಿಂಡೆ ಇದೆ. ಏನು‌ ಕೊಡಬಹುದು? ಕೊಡುವ ಗಿಪ್ಟ್ ತನ್ನ ಪ್ರೀತಿಯನ್ನು ಹೇಗೆ ಸಮರ್ಥವಾಗಿ ಹೇಳೀತು? ನೇರವಾಗಿಯೇ ಎದುರು ನಿಂತು ಐ ಲವ್ ಯೂ ಅಂದು ಬಿಡಲಾ? ವಾಟ್ಸಪ್ ಲ್ಲಿ ಒಂದು ಹೃದಯದ ಮಾರ್ಕ್ ಕಳ್ಸಿ ರಾತ್ರಿಯಿಡೀ ಕಾಯಲಾ? ಗೆಳೆಯನ ಬಳಿ ಪ್ರೇಮ ಸಂದೇಶವನ್ನು ಕಳುಹಿಸಲಾ? ಹಸಿರು ಅಂಗಿ‌ ಹಾಕಿಕೊಂಡು ಹೋಗಿ ಗ್ರೀನ್ ಸಿಗ್ನಲ್ ಕೊಡ್ಲಾ? ಹೀಗೆ ಚಡಪಡಿಸುತ್ತಾರೆ. 


ಮಂಡಿಯೂರುವ ಸಿನಿ ಪ್ರೀತಿ

ಎಂದೊ ಚೆಂದ ಕಾಣದ ಕಾಲೇಜು ಅವತ್ತು ಸುಂದರವಾಗಿದೆ ಅನ್ಸುತ್ತೆ. ಬಸ್ಸಿನಲ್ಲಿ‌ ಅವಳಿಗಾಗಿ ಹಿಡಿದು ಸೀಟು ತುಂಬಾ ಪವಿತ್ರವಾದ್ದು ಅನ್ಸುತ್ತೆ. ಸಿನಿಮಾ ನೋಡಿ ನೋಡಿ ಅಭ್ಯಾಸವಾಗಿ ಅವನು ಗುಲಾಬಿ ಹಿಡಿದು ಮಂಡಿಯೂರುತ್ತಾನೆ, ಆಕೆ ನಾಚಿ ಗುಲಾಬಿ‌ ಸ್ವೀಕರಿಸುತ್ತಾಳೆ. ಬಸ್ಸಿನಲ್ಲಿ ಪಕ್ಕ ಕೂತಿದ್ದವಳಿಗೆ ಅಲ್ಲೇ ಪ್ರೇಮದ ಸಂದೇಶದ ಕಳಿಸುತ್ತಾ ಪ್ರತಿಕ್ರಿಯೆಗಾಗಿ ಕಾಯುತ್ತಾನೆ. 

ಕಾಲೇಜಿನ ಕ್ಯಾಂಟೀನಲ್ಲಿ ಅವಳು ಅವನಿಗೆ ಓಕೆ ಅನ್ನುತ್ತಾಳೆ. ಅವನು ಅಲ್ಲೇ ಓ ಅಂತಾ ಕೂಗಿ‌ ಸಂಭ್ರಮಿಸುತ್ತಾನೆ. ಯಾರಿಗೂ ಗೊತ್ತಾಗಬಾರದು ಅಂತ ಕರಾರು ಹಾಕುತ್ತಾಳೆ. ಅವನು ಆಜ್ಞಾಧಾರಿಯಾಗುತ್ತಾನೆ. 

ಕೆನ್ನೆಗೆ ಬಾರಿಸಿದವಳ ಇಬ್ಬಂದಿತನ

ಇನ್ನೊಬ್ಬ ಕಳುಹಿಸಿದ ಪ್ರೇಮಸಂದೇಶಕ್ಕೆ ಅವನ ಹುಡುಗಿ ಕಾರಿಡಾರಲ್ಲಿ ಕೆನ್ನೆಗೆ ಪಳಾರನೆ ಬಾರಿಸುತ್ತಾಳೆ. ಆಮೇಲೆ ಆಕೆ ತನ್ನ ಗೆಳತಿಯರ ಮೂಲಕ ಆ ಹುಡುಗನ ಪ್ರೀತಿ ನಿಜ ಎನ್ನುವುದನ್ನು ಖಚಿತ ಪಡಿಸಿಕೊಳ್ಳುತ್ತಾಳೆ. ಪಾರ್ಕ್ ಗಳು ತುಂಬುತ್ತವೆ, ಥಿಯೇಟರ್ ಹೌಸ್ ಫುಲ್, ಐಸ್ ಕ್ರೀಂ ಖಾಲಿ ಅಂತ ಅಂಗಡಿಯ ಬೋರ್ಡ್ ಹಾಕುತ್ತಾನೆ. ಗಿಫ್ಟ್ ಖರೀದಿಗೆ ಅಂಗಡಿಯೊಳಗೆ ರಶ್ಯೋ ರಶ್ಶೊ. 

ನಗರದ ಪ್ರೀತಿಗೆ ಬಂಧುಗಳು ಜಾಸ್ತಿ. ಹಳ್ಳಿ ಪ್ರೀತಿಗೆ ಶತ್ರುಗಳೇ ಹೆಚ್ಚು. ಹಳ್ಳಿಯ ಒಲವುಗಳು ಬೆಚ್ಚಗಿರಲಿ. ಪ್ರೀತಿಸುವ ನಮ್ಮ ಹಳ್ಳಿ ಮನಸ್ಸುಗಳಿಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com