ಲೇಖಕಿ ಚೈತ್ರಾ ಅರ್ಜುನಪುರಿ, ಮಂಡ್ಯ ಜಿಲ್ಲೆ ಮದ್ದೂರು ಮೂಲದದವರು. ಸದ್ಯ ದೋಹಾ, ಕತಾರ್, ನಿವಾಸಿ. ವಿಜಯ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್ ದಿನಪತ್ರಿಕೆಗಳು, ಮತ್ತು ಕತಾರಿನ ಅಲ್ ಜಜೀರಾ ಟಿವಿ ಚಾನೆಲ್ ನಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿರುವ ಅನುಭವ ಬೆನ್ನಿಗಿದೆ. ನೈಟ್ ಫೋಟೋಗ್ರಫಿ ಇವರ ಹವ್ಯಾಸ, ಗೀಳು. ಸಿಂಪಲ್ ಸಂಗತಿಗಳು ಇವರಿಗೆ ಖುಷಿ ಕೊಡುತ್ತವೆ. ಇವರ ಫೋಟೋಗಳು ನ್ಯಾಷನಲ್ ಜಿಯೋಗ್ರಾಫಿಕ್ ಮತ್ತಿತರ ಜಾಲತಾಣಗಳಲ್ಲಿ ಪ್ರಕಟಿತವಾಗಿವೆ. ಪುಸ್ತಕ ವಿಮರ್ಶೆ, ಕಥೆ, ಲೇಖನ ಮತ್ತು ಪ್ರವಾಸ ಕಥನ ಬರೆಯುವ ಹವ್ಯಾಸವಿದೆ. 'ಚೈತ್ರಗಾನ' ಕವನ ಸಂಕಲನ, 'ಪುಸ್ತಕ ಪ್ರದಕ್ಷಿಣೆ' ಮತ್ತು 'ಓದುವ ವೈಭವ' ವಿಮರ್ಶಾ ಸಂಕಲನಗಳು ಪ್ರಕಟಿತ ಪುಸ್ತಕಗಳು.
ಮೊದಲ ಪ್ರೇಮವೆನ್ನುವುದು ಯಾವಾಗ ಯಾರ ಮೇಲೆ ಹುಟ್ಟುತ್ತದೆ ಹೇಳಲಾಗುವುದಿಲ್ಲ. ಮೊದಲ ಸಲ ಹುಟ್ಟುವ ಆ ಭಾವನೆಗಳು ಯಾವಾಗಲೂ ವಿಶೇಷವೇ. ಆಗ ಹುಟ್ಟುವ ಹೊಸದಾದ, ಹಿಂದೆಂದೂ ಕಾಣದ, ಬಾಲಿಶ ಮುಗ್ಧತೆ ಹೊಸದೊಂದೇ ಲೋಕವನ್ನು ಸೃಷ್ಟಿಸಿಬಿಡುತ್ತವೆ. ಮೊದಲ ಪ್ರೀತಿ ದಕ್ಕುತ್ತದೋ ಬಿಡುತ್ತದೋ ಅದು ಅನಂತರದ ವಿಚಾರ ಆದರೆ ಆ ನೆನಪುಗಳು ಮನಸ್ಸಿನಲ್ಲಿ ಬಹಳ ಆಳವಾಗಿಯೂ, ಸ್ಪಷ್ಟವಾಗಿಯೂ ಬೇರೂರಿ, ಮನಸ್ಸು ಭಾರವಾದ ದಿನಗಳಲ್ಲಿ ಕದ ತಟ್ಟಿಬಿಡುತ್ತವೆ.
ಇದು ನನ್ನ ಮೊದಲ ಪ್ರೇಮದ ಸಂಗತಿಯಲ್ಲ, ಪ್ರಾಯಶಃ ಅವನ ಮೊದಲ ಪ್ರೇಮವಿದ್ದರೂ ಇರಬಹುದು. ಅದು ಮೊದಲೋ, ಕೊನೆಯೋ ಅವನನ್ನೇ ನೇರವಾಗಿ ಕೇಳಲು ಇದುವರೆಗೂ ನನಗೆ ಧೈರ್ಯವಾಗಿಲ್ಲ. ಮಲಯಾಳಿ ಹುಡುಗನ ಪ್ರೇಮದಲ್ಲಿ ಬಿದ್ದಿದ್ದ ನನ್ನನ್ನು ನನಗೇ ಅರಿವಿಲ್ಲದ ಹಾಗೆ ನಾಲ್ಕೈದು ವರ್ಷ ತನ್ನ ಮನಸ್ಸಿನಲ್ಲೇ ಪ್ರೀತಿಸುತ್ತಿದ್ದ ಹುಡುಗನೊಬ್ಬನ ಕಥೆಯಿದು.
ಅವನು ಹೆಚ್ಚು ಮಾತನಾಡುತ್ತಿರಲಿಲ್ಲ, ನನ್ನ ಸ್ವಭಾವಕ್ಕೆ ಸಂಪೂರ್ಣ ತದ್ವಿರುದ್ಧ. ಆದರೆ ಎದುರಿಗೆ ಸಿಕ್ಕಾಗಲೆಲ್ಲಾ ಮುಗುಳ್ನಗುತ್ತಿದ್ದ. ವಿಚಿತ್ರವೆಂದರೆ, ನನಗೆ ಮೊದಲ ಸಲ ಬೇರೊಬ್ಬ ಹುಡುಗನಿಂದ ಬಂದಿದ್ದ ವ್ಯಾಲೆಂಟೈನ್ಸ್ ದಿನದ ಉಡುಗೊರೆಯನ್ನೂ ಜೋಪಾನವಾಗಿರಿಸಿ ನನಗೆ ತಲುಪಿಸಿದ್ದವನು ಅವನೇ. ಯಾವ ಸಮಯದಲ್ಲಿ ನೆರವು ಬೇಕಾಗಿದ್ದರೂ ಅವನು ಹಾಜರಾಗುತ್ತಿದ್ದ. ಕೆಲವೇ ತಿಂಗಳುಗಳಲ್ಲಿ ಮಲಯಾಳಿ ಹುಡುಗನೊಂದಿಗಿನ ನನ್ನ ಪ್ರೇಮಕಥೆಯನ್ನೂ ಹೇಳಿಕೊಳ್ಳುವಷ್ಟು ಆತ್ಮೀಯ ಗೆಳೆಯನಾದ. ಈ ಮಧ್ಯೆ ಅವನ ಮನದಲ್ಲಿ ನನ್ನ ಮೇಲೆ ಪ್ರೀತಿ ಹುಟ್ಟಿದ್ದರ ಬಗ್ಗೆ ಕಿಂಚಿತ್ತೂ ಸುಳಿವೇ ಸಿಕ್ಕಿರಲಿಲ್ಲ, ಅಥವಾ ಅದಾಗಲೇ ಪ್ರೀತಿಯಲ್ಲಿ ಬಿದ್ದಿದ್ದ ನನಗೆ ಬೇರೆ ಲೋಕವೇ ಕಾಣುತ್ತಿರಲಿಲ್ಲವೇನೋ!
ಆ ದಿನ ಈಗಲೂ ಚೆನ್ನಾಗಿ ನೆನಪಿದೆ, ನನ್ನ ಮದುವೆಗೆ ತಿಂಗಳೂ ಬಾಕಿಯಿರಲಿಲ್ಲ. ಮದುವೆಯ ಎರಡನೆಯ ಆಹ್ವಾನ ಪತ್ರಿಕೆಯನ್ನು (ಮೊದಲನೆಯದು ಮದುವೆ ಗಂಡಿಗೆ) ಕೊಡಲೆಂದು ಅವನಿಗೆ ಫೋನಾಯಿಸಿದೆ. ಬಂದು ಎದುರು ಕೂತವನ ಕೈಗೆ ಆಹ್ವಾನ ಪತ್ರಿಕೆಯನ್ನು ಕೊಟ್ಟೆ. ಅವನ ಕಣ್ಣು ತುಂಬಿ ಬಂದವು, 'ನಿನ್ನ ಕಂಡರೆ ನನಗೆ ಬಹಳ ಇಷ್ಟವಿತ್ತು, ಇಷ್ಟು ವರ್ಷ ಹೇಳೋಕೆ ಧೈರ್ಯ ಬರ್ಲಿಲ್ಲ!' ಅವನು ತನ್ನ ಮನದಾಳದ ಮಾತುಗಳನ್ನು ಹೇಳುತ್ತಾ ಹೋದಂತೆ ನಾನು ಪೆಚ್ಚಾದೆ. ನನಗೇ ಅರಿವಿಲ್ಲದೆ ಅವನಲ್ಲಿ ಅಂಥಾ ಭಾವನೆಗಳನ್ನು ಹುಟ್ಟಿಸಿಬಿಟ್ಟೆನಾ ಎಂಬ ತಪ್ಪಿತಸ್ಥ ಮನೋಭಾವ ಕಾಡಿತು. ನಾನು ಅವನನ್ನು ಒಳ್ಳೆಯ ಗೆಳೆಯನನ್ನಾಗಿ ನೋಡಿದೆ, ಬೇರೆ ಭಾವ ಒಮ್ಮೆಯೂ ಸುಳಿದಿಲ್ಲ ಎಂದು ನೋವಿನಲ್ಲೇ ಹೇಳಿದೆ.
ಆ ಬಳಿಕ, ಕಳೆದ ಒಂದೂವರೆ ದಶಕದಲ್ಲಿ ನೂರಾರು ಬಾರಿ ಅವನೊಂದಿಗೆ ಫೋನಿನಲ್ಲಿ ಮಾತನಾಡಿದ್ದೇನೆ, ಆದರೆ ಆ ಘಟನೆಯ ಬಗ್ಗೆ ಮತ್ತೆ ಪ್ರಸ್ತಾಪಿಸಿಲ್ಲ. ಈಗಲೂ ಪ್ರತಿ ಸಲ ವ್ಯಾಲೆಂಟೈನ್ಸ್ ದಿನ ಬಂದಾಗ ನೆನಪಾಗುವುದು ಮೊದಲ ಬಾರಿಗೆ ಉಡುಗೊರೆಯನ್ನು ಕಳುಹಿಸಿ ನನ್ನಿಂದ ದೂರವಾದ ಹುಡುಗ ಮಾತ್ರವಲ್ಲ, ಅದನ್ನು ನನಗೆ ತಲುಪಿಸಿದ ಮೇಲೂ ತನ್ನ ಪ್ರೀತಿಯನ್ನು ಎದೆಯಲ್ಲೇ ಅಡಗಿಸಿಕೊಂಡಿದ್ದ ಆ ಮುಗ್ಧ ಹುಡುಗನೂ!
Advertisement