ಶಾಪಿಂಗ್, ಡೇಟಿಂಗ್ ನಿಜವಾದ ಪ್ರೀತಿಯಲ್ಲ, ಟೈಮ್ ಪಾಸ್ ವ್ಯವಹಾರ: ವ್ಯಾಲೆಂಟೈನ್ ಡೇ ಸ್ಪೆಷಲ್
ಹುಡುಗರು ಚಡಪಡಿಸುತ್ತಾ ಕ್ಯಾಂಪಸ್ ಆವರಣದಲ್ಲಿ ಓಡಾಡುತ್ತಿದ್ದರೆ. ಹುಡುಗೀರು, ತಮಗೆ ಯಾರ್ ಯಾರು ಪ್ರೊಪೋಸ್ ಮಾಡ್ತಾರೆ ನೋಡೋಣ ಎಂಬ ಕಳ್ಳ ಭಾವನೆಗಳನ್ನು ಹೊತ್ತು ಓಡಾಡುತ್ತಿದ್ದರು.
Published: 14th February 2022 12:27 PM | Last Updated: 14th February 2022 01:57 PM | A+A A-

ಸಾಂದರ್ಭಿಕ ಚಿತ್ರ

ಲೇಖಕ ಧನಂಜಯ ಗೌಡ ಅರಕಲಗೂಡು ತಾಲ್ಲೂಕಿನ, ಬಸವಾಪಟ್ಟಣ ಗ್ರಾಮದವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲೇಖಕರು ಈ ಹಿಂದೆ ಮುದ್ರಣ ಮಾಧ್ಯಮದಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಹಾಸನ ಜಿಲ್ಲಾ ಪಂಚಾಯತಿಯಲ್ಲಿ ಜಿಲ್ಲಾ ಐಇಸಿ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬರಹಗಳು, ಕಥೆಗಳು ಪತ್ರಿಕೆ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.
'ಲೇ...ಹುಡ್ಗಿ, ನಿನ್ನ ಮೀನ ಕಣ್ಗಳಿಗೆ ನನ್ನ ಕಾದ ತುಟಿಯ ಬಿಸಿ ಮುತ್ತನಿಟ್ಟು, ನಿಧಾನವಾಗಿ ಮುಂಗುರುಳ ಸರಿಸಿ, ಕಿವಿಯಲ್ಲಿ ಪುಟ್ಟ ಪಿಸುಮಾತನ್ನು ಉಸುರಿ, ಗೆಜ್ಜೆ ತಬ್ಬಿದ ನಿನ್ನ ಕಾಲುಗಳನ್ನು ಸೋಕಿ, ಆ ನಿನ್ನ ಬೆಳ್ಳನೇಯ ಪಾದಗಳಿಗೆ ಚುಂಬಿಸುವ ಉಪಾಯದೊಂದಿಗೆ ಹೊರಡುತ್ತಿದ್ದೇನೆ. Love you ಚಿನ್ನ, Happy Valentine's day' ಎಂದು ಅವನು ಮಾಡುವ ಮೆಸೇಜಿಗೆ. ಆಕೆ 'ನಿನ್ನ ಕಾಲರ್ ಹಿಡಿದೆಳೆದು ಕೆನ್ನೆಗೆ ಮುತ್ತಿನ ಮುದ್ರೆ ಹಾಕಿ, ಬಿಸಿಯಾದ ಕಾಫಿ ಹೀರುತ್ತಾ, ನಿನ್ನ ಭುಜಕಾತು ಪ್ರೀತಿಯ ಸೊಲ್ಲಾಡುವ ಯೋಚನೆಯಲ್ಲಿ ಹೊರಡುತ್ತಿದ್ದೇನೆ. Love you too ಕಣೋ' ಎಂದು ಪ್ರತಿಕ್ರಿಯಿಸುತ್ತಾಳೆ.
ಹೀಗೆ ತಮ್ಮ ತಮ್ಮ ಆಸೆಗಳೊಂದಿಗೆ, ಪ್ರೇಮದ ಭಾವನೆಗಳನ್ನು ಪರಸ್ಪರ ನಿವೇದಿಸಿಕೊಳ್ಳಲು ಭೇಟಿಯಾಗುವ ಇಂತಹ ಪ್ರತೀ ಜೋಡಿಗಳಿಗೆ ಇದು ವಿಶೇಷ ದಿನ 'ಫೆ.14 ಪ್ರೇಮಿಗಳ ದಿನ' ಪ್ರೀತಿಸುವ ಪ್ರತೀ ಹೃದಯಕ್ಕೂ ಈ ದಿನವೆಂದರೆ ಅದೇನೋ ಸಡಗರ, ಹುರುಪು, ಆತಂಕ, ಚಡಪಡಿಕೆ.
ಇದನ್ನೂ ಓದಿ: ಅವನು ನನಗೆ ಹೃದಯ ಕೊಟ್ಟಿದ್ದ: ನಾನು ನನ್ನ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟೆ: ವ್ಯಾಲೆಂಟೈನ್ಸ್ ಡೇ ಸ್ಪೆಷಲ್
ಹುಡುಗೀರ ಕಳ್ಳ ನೋಟ
ಇನ್ನು ನಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಳ್ಳುವುದಾದರೆ. ಪ್ರಪಂಚವೆಲ್ಲ ರಂಗಾಗಿ ಕಾಣುವ ಆ ವಯಸ್ಸಿನಲ್ಲಿ ಸ್ನೇಹ, ಸೆಳೆತ, ಆಕರ್ಷಣೆಗಳಿಗೆ ಹೊಸ ಅರ್ಥ ಹುಡುಕುವ ತಯಾರಿಯಲ್ಲಿಯೇ ಪ್ರೇಮಿಗಳ ದಿನದ ಆಚರಣೆ ನಡೆಯುತ್ತಿದ್ದವು. ಯುವ ಮನಸ್ಸುಗಳು ಕಣ್ಣುಗಳಿಗೆ ಈ ದಿನ ಇಡೀ ಕ್ಯಾಂಪಸ್ ಅವರಣವೇ ರಂಗಾಗಿ ಕಾಣುತ್ತಿತ್ತು.
ಹುಡುಗರು, ಗೊಂದಲ, ಆತಂಕದ ನಡುವೆಯೂ ತನ್ನ ಮನದಿ ಹುಟ್ಟಿದ ಭಾವನೆಯನ್ನು ಹುಡುಗಿಯರ ಮುಂದೆ ನಿವೇದಿಸಿಕೊಳ್ಳಲು ಚಡಪಡಿಸುತ್ತಾ ಕ್ಯಾಂಪಸ್ ಆವರಣದಲ್ಲಿ ಓಡಾಡುತ್ತಿದ್ದರೆ. ಹುಡುಗೀರು, ತಮಗೆ ಯಾರ್ ಯಾರು ಪ್ರೊಪೋಸ್ ಮಾಡ್ತಾರೆ ನೋಡೋಣ ಎಂಬ ಕಳ್ಳ ಭಾವನೆಗಳನ್ನು ಹೊತ್ತು ಓಡಾಡುತ್ತಿದ್ದರು.
ಕ್ಯಾಂಟೀನ್ ವೇದಿಕೆ
ಇನ್ನು ಈಗಾಗಲೇ ಪ್ರೀತಿ ಫಲಿಸಿದ ಪ್ರೇಮಿಗಳಿಗೊಂತು ಈ ದಿನದ ಪ್ರತಿ ನಿಮಿಷವೂ ಹಬ್ಬ. ಈ ಎಲ್ಲದರ ನಡುವೆಯೂ ಪ್ರೀತಿ ಉಸಾಬರಿಯೇ ಬೇಡ ಹೇಳುತ್ತಾ. ಕಾಲೇಜು ಕ್ಯಾಂಟೀನಲ್ಲಿ ಕೂತು, ಟೀ ಹೀರುತ್ತಾ ಪ್ರೇಮಿಗಳ ಮತ್ತು ಪ್ರೀತಿಯ ಕುರಿತು ವ್ಯಾಖ್ಯಾನಗಳನ್ನು ಮಾಡುತ್ತಾ ಚರ್ಚೆ ತೊಡಗುವ ಗುಂಪುಗಳು ಇರುತ್ತಿದ್ದವು. ಪ್ರೇಮಿಗಳಿಗೂ, ಸಿಂಗಲ್ ಗಳಿಗೂ ಕಾಲೇಜು ಕ್ಯಾಂಟೀನೇ ವೇದಿಕೆ.
ಇದನ್ನೂ ಓದಿ: ಮನೆ ತಾರಸಿ ಮೇಲೆ ಪ್ರೇಮ ನಿವೇದನೆಗೆ ಸ್ಕೆಚ್!: ವ್ಯಾಲೆಂಟೈನ್ಸ್ ಡೇ ಸ್ಪೆಷಲ್
ಆತ್ಮವಿಮರ್ಶೆ ಮುಖ್ಯ
ಸಾಮಾಜಿಕ ಜಾಲತಾಣದ ಮೂಲಕ ಆಗುವ ಫ್ಲರ್ಟ್ ಗಳು, ದೈಹಿಕ ಆಕರ್ಷಣೆ, ಶಾಪಿಂಗ್, ಡೇಟಿಂಗ್ ನಿಂದಾಗಿ ತೆಳೆಯವ ಭಾವಗಳು ನಿಜವಾಗಿಯೂ ಪ್ರೀತಿಯಾಗಿರುವುದಿಲ್ಲ. ಟೈಮ್ ಪಾಸ್ ವ್ಯವಹಾರಗಳಾಗಿರುತ್ತವೆ. ಪ್ರೀತಿಯ ಭಾವನೆ ಬಲವಾಗಲು ಆತ್ಮವಿಮರ್ಶೆ ಮುಖ್ಯವಾಗುತ್ತದೆ. ನಾವು ನಮ್ಮನ್ನು ಆತ್ಮವಿಮರ್ಶೆ ಮಾಡಿಕೊಂಡು ಮತ್ತೊಬ್ಬರನ್ನು ಪ್ರೀತಿಸಿದಾಗ ಮಾತ್ರ, ಅವರಿಂದ ಪ್ರೀತಿ ಪಡೆಯಲು ಸಾಧ್ಯ.
ಸ್ಪಷ್ಟತೆ ಇರಬೇಕು
ಯಾವುದು ಸ್ನೇಹ?, ಯಾವುದು ಆಕರ್ಷಣೆ?, ಯಾವುದು ಪ್ರೀತಿ? ಎಂಬ ಸ್ಪಷ್ಟತೆಯೊಂದಿಗೆ ಮುನ್ನಡೆಯಬೇಕು. ಪ್ರೀತಿಯಲ್ಲಿ ಪರಸ್ಪರ ನಂಬಿಕೆ ಮತ್ತು ನಿಷ್ಠೆ ಬಲವಾದಾಗ ಮಾತ್ರ ಪರಸ್ಪರ ಭವಿಷ್ಯ ರೂಪಿಸಿಕೊಳ್ಳಲು ಸುಲಭ. ಪ್ರೇಮಿಗಳ ದಿನದಂದು ಒಂದಷ್ಟು ಹೊತ್ತು ಪ್ರೀತಿಯ ಸೂಕ್ಷ್ಮತೆಯನ್ನು ಎಲ್ಲ ಪ್ರೇಮಿಗಳು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುವುದು ಸೂಕ್ತ.