
ನ್ಯೂಯಾರ್ಕ್: ದಶಕಗಳಿಂದ ವಿಜ್ಞಾನಿಗಳ ಪಾಲಿಗೆ ವಿಸ್ಮಯವಾಗಿ ಕಾಣುತ್ತಿದ್ದ ಪ್ಲೂಟೋ ಗ್ರಹದ ಹೊಸ ಚಿತ್ರಗಳು ನಿಜಕ್ಕೂ ದಂಗುಬಡಿಸಿವೆ.
ಒಂಬತ್ತು ವರ್ಷಗಳ ಹಿಂದೆ ಪ್ಲೂಟೋ ಮೇಲಿನ ಸಂಶೋಧನೆಗಾಗಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹಾರಿಬಿಟ್ಟಿದ್ದ ಸಂಶೋಧನಾ ನೌಕೆ "ನ್ಯೂ ಹೊರೈಜನ್" ತನ್ನ ಕಾರ್ಯ ಮುಂದುವರೆಸಿದ್ದು, ಪ್ಲೂಟೋ ಗ್ರಹದ ಹೊಸ ಚಿತ್ರಗಳನ್ನು ಭೂಮಿಗೆ ರವಾನಿಸಿದೆ. "ನ್ಯೂ ಹೊರೈಜನ್" ರವಾನಿಸಿರುವ ಹೊಸ ಚಿತ್ರಗಳನ್ನು ನಿಜಕ್ಕೂ ವಿಜ್ಞಾನಿಗಳು ಹೌಹಾರುವಂತೆ ಮಾಡಿದ್ದು, ಭೂಮಿಯ ಮೇಲ್ಮೈಯನ್ನೇ ಹೋಲುವ ಮಂಜಿನ ಬೆಟ್ಟ-ಗುಡ್ಡಗಳು ಪ್ಲೂಟೋ ಗ್ರಹದ ಮೇಲ್ಮೈನಲ್ಲಿ ಗೋಚರವಾಗುತ್ತಿವೆ.
ಅಲ್ಲದೆ "ನ್ಯೂ ಹೊರೈಜನ್" ನೌಕೆ ಪ್ಲೂಟೋ ಗ್ರಹ ಸಂಪೂರ್ಣ ಸೂರ್ಯಾಸ್ತದ ಅಪರೂಪದ ಕ್ಷಣಗಳನ್ನು ಕೂಡ ಸೆರೆ ಹಿಡಿದಿದ್ದು, ಅದನ್ನು ಭೂಮಿಗೆ ರವಾನಿಸಿದೆ. ಇನ್ನು "ನ್ಯೂ ಹೊರೈಜನ್" ನೌಕೆ ರವಾನಿಸಿರುವ ಚಿತ್ರಗಳ ಕುರಿತು ಮಾತನಾಡಿರುವ "ನ್ಯೂ ಹೊರೈಜನ್" ಯೋಜನೆಯ ಮುಖ್ಯ ಪರೀಕ್ಷಕರಾದ ವಿಜ್ಞಾನಿ ಅಲನ್ ಸ್ಟರ್ನ್ ಅವರು, ನೌಕೆ ರವಾನಿಸಿರುವ ಚಿತ್ರಗಳು ಪ್ಲೂಟೋ ಗ್ರಹದ ಕುರಿತು ನಮಗಿದ್ದ ನಂಬಿಕೆಗಳಿಗೆ ಜೀವ ತುಂಬುತ್ತಿದೆ. ಸ್ವತಃ ನಾವೇ ಪ್ಲೂಟೋ ಗ್ರಹಕ್ಕೆ ತೆರಳಿ ಅಲ್ಲಿನ ವಾತಾವರಣಗಳನ್ನು ವೀಕ್ಷಿಸಿದ ಅನುವಭ ಈ ಚಿತ್ರಗಳಿಂದ ವ್ಯಕ್ತವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೌಕೆ ರವಾನಿಸಿರುವ ಚಿತ್ರಗಳಿಂದ ಪ್ಲೂಟೋ ಗ್ರಹದ ಮೇಲ್ಮೈ ವಾತಾವರಣ, ಬೃಹದಾಕಾರದ ಪರ್ವತಗಳು, ಹಿಮನದಿಗಳು ಮತ್ತು ಬಯಲು ಪ್ರದೇಶಗಳ ಕುರಿತು ಸ್ಪಷ್ಟ ಮಾಹಿತಿಗಳು ಲಭ್ಯವಾಗಿವೆ ಎಂದು ಅವರು ಹೇಳಿದ್ದಾರೆ.
Advertisement