ವಾಟ್ಸಪ್ ನ ನೂತನ ಗೌಪ್ಯತಾ ನೀತಿಯಿಂದ ವೈಯಕ್ತಿಕ ಮಾಹಿತಿ ಬಹಿರಂಗ?

ಖ್ಯಾತ ಸಾಮಾಜಿಕ ಜಾಲತಾಣ ಆ್ಯಪ್ ವಾಟ್ಸಪ್ ನ ನೂತನ ಗೌಪ್ಯತಾ ನೀತಿ ನಮ್ಮ ವೈಯುಕ್ತಿಕ ಭದ್ರತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು..
ವಾಟ್ಸಪ್ (ಸಂಗ್ರಹ ಚಿತ್ರ)
ವಾಟ್ಸಪ್ (ಸಂಗ್ರಹ ಚಿತ್ರ)

ನವದೆಹಲಿ: ಖ್ಯಾತ ಸಾಮಾಜಿಕ ಜಾಲತಾಣ ಆ್ಯಪ್ ವಾಟ್ಸಪ್ ನ ನೂತನ ಗೌಪ್ಯತಾ ನೀತಿ ನಮ್ಮ ವೈಯುಕ್ತಿಕ ಭದ್ರತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಇದು ಎಷ್ಟರಮಟ್ಟಿಗೆ ಸತ್ಯ..

ಖ್ಯಾತ ಸಾಮಾಜಿಕ ಜಾಲತಾಣ ಆ್ಯಪ್ ವಾಟ್ಸಪ್ ಅನ್ನು ಖರೀದಿ ಮಾಡಿರುವ ಫೇಸ್ ಬುಕ್ ಸಂಸ್ಥೆ ತನ್ನ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಹಾಗು ತನ್ನ ಆದಾಯದ ಮೂಲವನ್ನು  ಹೆಚ್ಚಿಸಿಕೊಳ್ಳಲು ನೂತನ ಗೌಪ್ಯತಾ ನೀತಿಯನ್ನು ಬಿಡುಗಡೆ ಮಾಡಿದ್ದು, ಇತ್ತೀಚೆಗಷ್ಟೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ವಾಟ್ಸಪ್ ಆ್ಯಪ್ ನ ಗೌಪ್ಯತಾ ನೀತಿಯನ್ನು ಬದಲಿಸಿದೆ. ಅದರಂತೆ ಭಾರತದಲ್ಲಿ ಕೋಟ್ಯಂತರ ವಾಟ್ಸಪ್ ಬಳಕೆದಾರರ ಹೆಸರು, ಮೊಬೈಲ್ ಸಂಖ್ಯೆ ಸೇರಿದಂತೆ ನಾವು ವಾಟ್ಸಪ್ ನಲ್ಲಿ ನಮೂದಿಸಿರುವ ವೈಯುಕ್ತಿಕ ಮಾಹಿತಿಗಳು ಫೇಸ್ ಬುಕ್ ನಲ್ಲಿ ಶೇರ್ ಆಗಲಿವೆ.

ವಾಟ್ಸಪ್ ಅನ್ನು ಖರೀದಿ ಮಾಡಿರುವ ಫೇಸ್ ಬುಕ್ ಇದೇ ಮೊದಲ ಬಾರಿಗೆ ಆ್ಯಪ್ ನ ಗೌಪ್ಯತಾ ನೀತಿಯನ್ನು ಬದಲಿಸಿದ್ದು, ಈ ನೂತನ ಗೌಪ್ಯತಾ ನೀತಿಯ ಅನ್ವಯ ನಾವು ನಮ್ಮ ವಾಟ್ಸಪ್  ಖಾತೆಯಲ್ಲಿ ನಮೂದಿಸಿರುವ ವೈಯುಕ್ತಿಕ ಮಾಹಿತಿಗಳನ್ನು ಅದು ಫೇಸ್ ಬುಕ್ ನಲ್ಲಿ ಪ್ರಕಟಿಸಲಿದೆಯಂತೆ. ಫೇಸ್ ಬುಕ್ ನಲ್ಲಿರುವ ನಮ್ಮ ಖಾತೆಯಲ್ಲಿ ನಮ್ಮ ವಾಟ್ಸಪ್ ನಂಬರ್ ಸೇರಿದಂತೆ ಅಲ್ಲಿ  ನಮೂದಿಸಿರುವ ವೈಯುಕ್ತಿಕ ಮಾಹಿತಿಗಳೂ ಕೂಡ ಪ್ರದರ್ಶನಗೊಳ್ಳಲಿದೆ.

ವಾಟ್ಸಪ್ ಖರೀದಿ ಮಾಡಿರುವ ಫೇಸ್ ಬುಕ್ ಸಂಸ್ಥೆ ಇತ್ತೀಚೆಗಷ್ಟೇ ಆ್ಯಪ್ ಗ್ರಾಹಕರಿಂದ ಪಡೆಯುತ್ತಿದ್ದ ವಾರ್ಷಿಕ ಪಾವತಿಯನ್ನು ರದ್ದುಗೊಳಿಸಿತ್ತು. ಅದರ ಬದಲಿಗೆ ಆ್ಯಪ್ ಅನ್ನು ಉಚಿತವಾಗಿ  ನೀಡಿ, ಆದಾಯಕ್ಕಾಗಿ ಬೇರೆ ಮೂಲ ಹುಡುಕುವುದಾಗಿ ಹೇಳಿತ್ತು. ಅದರಂತೆ ತನ್ನ ನೂತನ ಗೌಪ್ಯತಾ ನೀತಿಯನ್ನು ಹೊರ ತಂದಿರುವ ಫೇಸ್ ಬುಕ್ ಸಂಸ್ಥೆ ಗ್ರಾಹಕರ ಫೇಸ್ ಬುಕ್ ಹಾಗೂ  ವಾಟ್ಸಪ್ ಖಾತೆಗಳನ್ನು ಏಕೀಕರಿಸಿ ಫೇಸ್ ಬುಕ್ ನಲ್ಲಿ ವಾಟ್ಸಪ್ ನಂಬರ್ ಸೇರಿದಂತೆ ವೈಯುಕ್ತಿಕ ಮಾಹಿತಿಗಳನ್ನು ಪ್ರದರ್ಶನ ಮಾಡವುದನ್ನು ನೂತನ ಗೌಪ್ಯತಾ ನೀತಿಯಲ್ಲಿ ಅಳವಡಿಸಿದೆ.

ಅದರಂತೆ ವಾಟ್ಸಪ್ ನ ನೂತನ ಅಪ್ ಡೇಟ್ ನಲ್ಲಿ ಈ ಗೌಪ್ಯತಾ ನೀತಿ ಇದ್ದು, ಗ್ರಾಹಕರು ಅದನ್ನು ಕ್ಲಿಕ್ಕಿಸಿದರೆ ವಾಟ್ಸಪ್ ಮಾಹಿತಿಯನ್ನು ಫೇಸ್ ಬುಕ್ ನಲ್ಲಿ ಷೇರ್ ಮಾಡಲು ನಾವೇ ಅನುಮತಿ  ನೀಡಿದಂತಾಗುತ್ತದೆ. ವಾಟ್ಸಪ್ ಈ ನೂತನ ನೀತಿಗೆ ವಿದೇಶಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಖಾಸಗಿ ಭದ್ರತೆಗೆ ಈ ನೂತನ ನೀತಿ ಯಾವುದೇ ರೀತಿಯಿಂದಲೂ ನೆರವಾಗುವುದಿಲ್ಲ ಎಂಬ  ಅಭಿಪ್ರಾಯವ್ಯಕ್ತವಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್ ಬುಕ್ ಸಂಸ್ಥೆ, ನೂತನ ಗೌಪ್ಯತಾ ನೀತಿಯಿಂದಾಗಿ ಗ್ರಾಹಕರ ಖಾಸಗಿತನಕ್ಕೆ ಯಾವುದೇ ಸಮಸ್ಯೆ ಇಲ್ಲ. ದುರುದ್ದೇಶ ಪೂರಿತ  ಖಾತೆಗಳನ್ನು ನಿಯಂತ್ರಿಸಲು ಇದು ಸಹಕಾರಿಯಾಗುತ್ತದೆ. ಇದಲ್ಲದೆ ಗ್ರಾಹಕರು ಹೇಗೆ ಆ್ಯಪ್ ಗಳನ್ನು ಬಳಕೆ ಮಾಡುತ್ತಾರೆ ಎಂಬುದನ್ನು ಅರಿಯಲು ನೆರವಾಗುತ್ತದೆ ಎಂದು ಹೇಳಿದೆ.

ಆದಾಯ ಹೆಚ್ಚಿಸಿಕೊಳ್ಳಲು ಗ್ರಾಹಕರ ವೈಯುಕ್ತಿಕ ಮಾಹಿತಿ ಪ್ರದರ್ಶನ
ಇನ್ನು ವಾಟ್ಸಪ್ ನ ನೂತನ ಗೌಪ್ಯತಾ ನೀತಿಯಿಂದಾಗಿ ಫೇಸ್ ಬುಕ್ ಬಳಕೆದಾರರು, ವಾಣಿಜ್ಯೋದ್ಯಮಿಗಳು, ವಾಪಾರಸ್ಥರು ಮತ್ತು ಇತರರು ಸುಲಭವಾಗಿ ವಾಟ್ಸಪ್ ಗ್ರಾಹಕರ ಸಂಪರ್ಕ  ಸಾಧಿಸಬಹುದಾಗಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಪ್ರೊಫೈಲ್ ಗೆ ಹೋಗಿ ಪರಿಶೀಲಿಸಿದರೆ ಅಲ್ಲಿ ಆ ಗ್ರಾಹಕನ ವಾಟ್ಸಪ್ ಪ್ರೊಫೈಲ್ ತೆರೆದುಕೊಳ್ಳುತ್ತದೆ. ಅದರ ಮೂಲಕವಾಗಿ  ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು ಮತ್ತು ಇತರರು ತಮ್ಮ ವಾಣಿಜ್ಯ ಸಂಬಂಧಿ ವ್ಯವಹಾರಗಳನ್ನು ಸುಲಭವಾಗಿ ನಡೆಸಬಹುದಾಗಿದೆ. ವಾಟ್ಸಪ್ ನ ಈ ನೂತನ ಗೌಪ್ಯತಾ ನೀತಿ ವಾಣಿಜ್ಯ ವ್ಯವಹಾರಸ್ಥರಿಗೆ, ಉದ್ಯಮಿಗಳಿಗೆ ಅನುಕೂಲಕರವಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆದರೆ ಇದಕ್ಕೆ ಗ್ರಾಹಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


ವಾಟ್ಸಪ್ ಮಾಹಿತಿ ಫೇಸ್ ಬುಕ್ ನಲ್ಲಿ ಪ್ರದರ್ಶನವಾಗುವುದನ್ನು ತಡೆಯುವುದು ಹೇಗೆ?


ವಾಟ್ಸಪ್ ಅನ್ನು ನಾವು ಅಪ್ ಡೇಟ್ ಮಾಡಿದಾಗ ಅಲ್ಲೊಂದು ಗೌಪ್ಯತಾ ನೀತಿಗೆ ಅನುಮತಿ ನೀಡುವಂತೆ ಸಂದೇಶ ಕಾಣುತ್ತದೆ. ಇದನ್ನು ಗಮನಿಸದೇ ನಾವು ಅದಕ್ಕೆ ಅನುಮತಿ ನೀಡಿದ್ದರೆ  ಅದನ್ನು ಸ್ಥಗಿತಗೊಳಿಸಬಹುದು. ಇದಕ್ಕಾಗಿ ವಾಟ್ಸಪ್ ನಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ "ಅಕೌಂಟ್" ಕ್ಲಿಕ್ಕಿಸಿದರೆ ಅಲ್ಲಿ "ಶೇರ್ ಮೈ ಅಕೌಂಟ್ ಇನ್ಫೋ" ಎಂಬ ಸಂದೇಶ ಪ್ರದರ್ಶನ ಗೊಳ್ಳುತ್ತದೆ.  ಇದನ್ನು ಅನ್ ಚೆಕ್ ಮಾಡಿದರೆ ವಾಟ್ಸಪ್ ಪ್ರೊಫೈಲ್ ಮಾಹಿತಿ ಫೇಸ್ ಬುಕ್ ನಲ್ಲಿ ಶೇರ್ ಆಗುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com