
ಚೆನ್ನೈ: ಭೀಕರ ವರ್ಧಾ ಚಂಡಮಾರುತದಿಂದ ನಲುಗಿ ಹೋಗಿದ್ದ ಚೆನ್ನೈ ಮಹಾನಗರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 10 ಸಾವಿರ ಮಂದಿಯನ್ನು ಇಸ್ರೋ ಸ್ಯಾಟೆಲೈಟ್ ಮೂಲಕ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಆಂಗ್ಲ ಸುದ್ದಿ ಪತ್ರಿಕೆಯೊಂದು ವರದಿ ಮಾಡಿದ್ದು, ಇಸ್ರೋದ ಎರಡು ಪ್ರಮುಖ ಸ್ಯಾಟಲೈಟ್ ಗಳು ವರ್ಧಾ ಚಂಡಮಾರುತದ ಚಲನೆಯನ್ನು ಮೊದಲೇ ಗುರುತಿಸಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿತ್ತು. ಹೀಗಾಗಿ ಚಂಡಮಾರುತ ಅಪ್ಪಳಿಸುವ ಪ್ರದೇಶಗಳನ್ನು ಗುರುತಿಸಿದ ಅಧಿಕಾರಿಗಳನ್ನು ಅಲ್ಲಿದ್ದ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಿಸ ರಕ್ಷಿಸಿದ್ದಾರೆ. ವರ್ಧಾ ಚಂಡಮಾರುತದ ವೇಳೆ ಭಾರಿ ಚಂಡಮಾರುತದಿಂದಾಗಿ ರಕ್ಷಣಾಕಾರ್ಯಕ್ಕೆ ತೀವ್ರ ಅಡಚಣೆಯಾಗಿತ್ತು. ಚೆನ್ನೈನಲ್ಲಿ ರಾಷ್ಟ್ರೀಯ ವಿಪತ್ತು ನಿಗ್ರಹ ದಳದ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದರಾದರೂ, ಭಾರಿ ಗಾಳಿ ಮತ್ತು ಮಳೆಯಿಂದಾಗಿ ಅಪಾಯಕ್ಕೆ ಸಿಲುಕಿರುವವ ರಕ್ಷಣೆಗೆ ತೊಡಕಾಗಿತ್ತು. ಹೀಗಾಗಿ ಅಧಿಕಾರಿಗಳು ಹವಾಮಾನ ಇಲಾಖೆ ಹಾಗೂ ಇಸ್ರೋದ ಮೊರೆ ಹೋಗಿದ್ದರು.
ಇಸ್ರೋದ ಇನ್ಸಾಟ್ 3ಡಿಆರ್ ಮತ್ತು ಸ್ಕಾಟ್ ಸ್ಯಾಟ್-1 ಉಪಗ್ರಹಗಳ ಮೂಲಕ ಚೆನ್ನೈನಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 10 ಸಾವಿರ ಮಂದಿಯನ್ನು ಎನ್ ಡಿಆರ್ ಎಫ್ ತಂಡ ರಕ್ಷಣೆ ಮಾಡಿದೆ. ಪ್ರಮುಖವಾಗಿ ಉಪಗ್ರಹ ನೀಡಿದ ಮಾಹಿತಿಯಾಧಾರದ ಮೇಲೆ ತಿರುವಳ್ಳೂರು ಹಾಗೂ ಕಾಂಚಿಪುರಂಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಕುರಿತು ಸ್ಯಾಟಲೈಟ್ ಗಳು ಮಾಹಿತಿ ನೀಡಿದ್ದವು. ಅಂತೆಯೇ ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲೂ ಚಂಡಮಾರುತ ಅಪ್ಪಳಿಸುವ ಕುರಿತು ಉಪಗ್ರಹಗಳು ಮಾಹಿತಿ ನೀಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ಸಾಟ್ 3ಡಿಆರ್ ಉಪಗ್ರಹ ಅತ್ಯಾಧುನಿ ಹವಾಮಾನಕ್ಕೆ ಸಂಬಂಧಿಸಿದ ಉಪಗ್ರಹವಾಗಿದ್ದು, ಚಂಡಮಾರುತ ಮತ್ತು ಮಳೆಯಂತಹ ವಿಕೋಪಗಳ ಕುರಿತು ಕಾಲಕಾಲಕ್ಕೆ ಫೋಟೋಗಳ ಮುಖಾಂತರ ಮಾಹಿತಿ ನೀಡುತ್ತಿರುತ್ತದೆ. ಕಳೆದ ಸೆಪ್ಟೆಂಬರ್ 8ರಂದು ಈ ಬಹು ಉದ್ದೇಶಿತ ಉಪಗ್ರಹವನ್ನು ಜಿಎಸ್ ಎಲ್ ವಿ ಉಡಾವಣಾ ವಾಹಕದ ಮೂಲಕ ಉಡಾವಣೆ ಮಾಡಲಾಗಿತ್ತು. ಅಂತೆಯೇ ಸ್ಕಾಟ್ ಸ್ಯಾಟ್-1 ಕೂಡ ಹವಾಮಾನಕ್ಕೆ ಸಂಬಂಧಿಸಿದ ಉಪಗ್ರಹವಾಗಿದ್ದು, ಇದನ್ನು ಅದೇ ಸೆಪ್ಟೆಂಬರ್ 26ರಂದು ಪಿಎಸ್ ಎಲ್ ವಿ ಉಡಾವಣಾ ವಾಹಕದ ಮೂಲಕ ಉಡಾವಣೆ ಮಾಡಲಾಗಿತ್ತು.
ಪ್ರಮುಖ ಅಂಶವೆಂದರೆ ಈ ಎರಡೂ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರಕ್ಕೂ ಚಂಡಮಾರುತ ಭೀತಿ ಎದುರಾಗಿತ್ತು. ಆದರೆ ಅದೃಷ್ಟವಶಾತ್ ಉಡಾವಣಾ ಕೇಂದ್ರಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement