
ನ್ಯೂಯಾರ್ಕ್: ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್ ಆಗುವ ಅಂತರ್ಜಾಲ ಲಿಂಕ್ ಗಳ ಪೈಕಿ ಶೇ.50ರಷ್ಟು ಲಿಂಕ್ ಗಳನ್ನು ಯಾರೂ ತೆರೆದು ನೋಡುವ ಪ್ರಯತ್ನವನ್ನೇ ಮಾಡುವುದಿವಲ್ಲ ಎಂದು ವರದಿಯೊಂದು ಹೇಳಿದೆ.
ಖ್ಯಾತ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ತಜ್ಞರು ಜಂಟಿಯಾಗಿ ಈ ಸಂಶೋಧನೆ ನಡೆಸಿದ್ದು, ಸಂಶೋಧನೆಗಾಗಿ ಸುಮಾರು 2.8 ಮಿಲಿಯನ್ ಟ್ವಿಟರ್ ಶೇರಿಂಗ್ ದತ್ತಾಂಶವನ್ನು ಸಂಗ್ರಹಿಸಿದ್ದಾರೆ. ಈ ದತ್ತಾಂಶಗಳನ್ನು ಪರಿಶೀಲಿಸಿದಾಗ ಈ ಪೈಕಿ ಶೇ.59ರಷ್ಟು ಲಿಂಕ್ ಗಳನ್ನು ಯಾರೂ ತೆರೆದು ನೋಡಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.
ಟ್ವಿಟರ್ ನಲ್ಲಿ ಶೇರ್ ಆಗಿರುವ ಅಂತರ್ಜಾಲ ಲಿಂಕ್ ಗಳ ಪೈಕಿ ಬಹುತೇಕ ಲಿಂಕ್ ಗಳು ಸುದ್ದಿಗೆ ಸಂಬಂಧಿಸಿದ ಲಿಂಕ್ ಗಳಾಗಿದ್ದು, ಅವಗಳಲ್ಲಿ ಬಹುತೇಕ ಬಿಬಿಸಿ, ಸಿಎನ್ ಎನ್, ಫಾಕ್ಸ್ ನ್ಯೂಸ್ ಮತ್ತು ದಿ ನ್ಯೂಯಾರ್ಕ್ ಟೈಮ್ಸ್ ಮತ್ತು ಹುಫಿಂಗ್ಟನ್ ಪೋಸ್ಟ್ ಅಂತರ್ಜಾಲ ಸುದ್ದಿ ಪತ್ರಿಕೆಗಳಿಗೆ ಸೇರಿದ ಲಿಂಕ್ ಗಳಾಗಿವೆ ಎಂದು ತಿಳಿದುಬಂದಿದೆ. ಇದೇ ಮೊದಲ ಬಾರಿಗೆ ಇಂತಹ ಸಂಶೋಧನೆ ನಡೆಸಿದ್ದು, ತೀರಾ ಬ್ಲಾಕ್ ಬಸ್ಟರ್ ಸುದ್ದಿ ಎನ್ನಬಹುದಾದ ಸುದ್ದಿಗಳ ಪೈಕಿ ಶೇ.9ರಷ್ಚು ಮಾತ್ರ ಕ್ಲಿಕ್ ಮಾಡಲಾಗಿದ್ದು, ಶೇ.90 ರಷ್ಟು ಸುದ್ದಿಗಳನ್ನು ತೆರೆದು ಓದುವ ಗೋಜಿಗೇ ಖಾತೆದಾರರು ಹೋಗಿಲ್ಲವಂತೆ.
ಇನ್ನು ಕ್ಲಿಕ್ ಮಾಡಿ ಓದಲಾದ ಬಹುತೇಕ ಸುದ್ದಿಗಳು 24 ಗಂಟೆಗಳ ಒಳಗೆ ಶೇರ್ ಮಾಡಲಾದ ಸುದ್ದಿಗಳಾಗಿದ್ದು, ಉತ್ಪ್ರೇಕ್ಷಿತ ಮುಖ್ಯಾಂಶಗಳುಳ್ಳ ಸುದ್ದಿಗಳು ಹೆಚ್ಚು ಓದಲ್ಪಟ್ಟಿವೆಯಂತೆ. ಅಂತೆಯೇ ಸೆನ್ಷೇಷನಲ್ ಮತ್ತು ತಪ್ಪು ಮಾಹಿತಿಯುಳ್ಳ ಮುಖ್ಯಾಂಶಗಳ ಲಿಂಕ್ ಅನ್ನು ಸರಿ ಪಡಿಸುವ ಮತ್ತು ಅದು ತಪ್ಪು ಎಂದು ಹೇಳುವ ಉದ್ದೇಶಕ್ಕಾಗಿ ಹಲವರು ಓದಿದ್ದಾರೆ ಎಂದು ವರದಿ ತಿಳಿಸಿದೆ.
ಒಟ್ಟಾರೆ ಮೈಕ್ರೋಸಾಫ್ಟ್ ಮತ್ತು ಕೊಲಂಬಿಯಾ ವಿವಿ ನಡೆಸಿದ ಈ ವಿನೂತನ ಸಂಶೋಧನೆಯಿಂದಾಗಿ ಸಾಮಾಜಿಕ ಜಾಲತಾಣಗಳನ್ನು ಖಾತೆದಾರರು ಹೆಚ್ಚಾಗಿ ಸುದ್ದಿ ಓದುವುದಕ್ಕೆ ಮತ್ತು ತಮಗೆ ತಿಳಿದ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಬಳಕೆ ಮಾಡುತ್ತಿದ್ದಾರೆ ಎಂಬ ಅಂಶ ತಿಳಿದುಬಂದಿದೆ.
Advertisement