ಇಸ್ರೋದ ಐಆರ್ ಎನ್ಎಸ್ಎಸ್-1ಹೆಚ್ ಉಪಗ್ರಹದ ವಿಶೇಷತೆಗಳು!

ನಮ್ಮದೇ ಸ್ವದೇಶಿ ನಿರ್ಮಿತ ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಹೊಂದುವ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ನಾವಿಕ್ ಅಂತಿಮ ಘಟ್ಟದಲ್ಲಿದ್ದು, ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ 8ನೇ ಉಪಗ್ರಹ ಐಆರ್ ಎನ್ ಎಸ್ ಎಸ್ ಗುರುವಾರ ನಭಕ್ಕೆ ಹಾರಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನಮ್ಮದೇ ಸ್ವದೇಶಿ ನಿರ್ಮಿತ ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಹೊಂದುವ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ನಾವಿಕ್ ಅಂತಿಮ ಘಟ್ಟದಲ್ಲಿದ್ದು, ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ  8ನೇ  ಉಪಗ್ರಹ ಐಆರ್ ಎನ್ ಎಸ್ ಎಸ್ ಗುರುವಾರ ನಭಕ್ಕೆ ಹಾರಲಿದೆ.

ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ ಅಭಿವೃದ್ಧಿ ಪಡಿಸುತ್ತಿರುವ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಇದೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ಐಆರ್​ಎನ್​ ಎಸ್​ಎಸ್- 1ಹೆಚ್  ಉಪಗ್ರಹವನ್ನು ನಿರ್ವಿುಸಿದ್ದು, ಪಿಎಸ್​ಎಲ್​ವಿ ಎಕ್ಸ್​ಎಲ್ ಸರಣಿಯ ರಾಕೆಟ್ ಮೂಲಕ ಐಆರ್​ಎನ್​ಎಸ್​ಎಸ್- 1ಹೆಚ್ ಉಪಗ್ರಹ ಕಕ್ಷೆಗೆ ತಲುಪಲಿದೆ.

ದಿಕ್ಸೂಚಿ ವ್ಯವಸ್ಥೆಗಾಗಿ ಇಷ್ಟು ದಿನ ಭಾರತ ವಿದೇಶಿ ಉಪಗ್ರಹಗಳನ್ನು ಅವಲಂಭಿಸಿತ್ತು, ಈ ಸೇವೆ ತೀರಾ ದುಬಾರಿಯಾಗಿತ್ತು. ಹೀಗಾಗಿ ನಮ್ಮದೇ ಸ್ವದೇಶಿ ದಿಕ್ಸೂಚಿ ಉಪಗ್ರಹವನ್ನು ಹೊಂದುವ ಆಸೆಗೆ ಇಸ್ರೋ ನಾವಿಕ್ ಯಜನೆ  ಮೂಲಕ ನೀರೆರೆದಿದ್ದು, ಈ ಸಂಬಂಧ ಈಗಾಗಲೇ 7 ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿದೆ. ಐಆರ್​ಎನ್​ ಎಸ್​ಎಸ್- 1ಹೆಚ್  ಈ ಸರಣಿಯ 8ನೇ ಉಪಗ್ರಹವಾಗಿದ್ದು, ಸುಮಾರು 1,420 ಕೋಟಿ ರೂ. ವೆಚ್ಚದಲ್ಲಿ  ಐಆರ್​ಎನ್​ಎಸ್​ಎಸ್- 1ಹೆಚ್ ಉಪಗ್ರಹ ನಿರ್ವಣ ಮಾಡಲಾಗಿದೆ.

ಈ ಉಪಗ್ರಹ ನಿರ್ಮಾಣದಲ್ಲಿ  ಬೆಂಗಳೂರು ಮೂಲದ ಸಂಸ್ಥೆಯೂ ಸೇರಿದಂತೆ ಒಟ್ಟು ಆರು ಖಾಸಗಿ ಸಂಸ್ಥೆಗಳು ಸಹಭಾಗಿತ್ವ ಹೊಂದಿದ್ದು, ಈ ಸಂಸ್ಥೆಗಳು ಉಪಗ್ರಹದ ಕೆಲವೊಂದು ಭಾಗಗಳನ್ನು ಅಭಿವೃದ್ಧಿಪಡಿಸಿವೆ. ಐಆರ್ ​ಎನ್​ ಎಸ್​ಎಸ್- 1ಹೆಚ್ ದೇಶೀಯ ಪ್ರಾದೇಶಿಕ ಸಂಚಾರದಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಈ ಯೋಜನೆ ಮೂಲಕ ವಿದೇಶದ ಮೇಲಿನ ಅವಲಂಬನೆ ತಪ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಸ್ವದೇಶಿ ದಿಕ್ಸೂಚಿ  ವ್ಯವಸ್ಥೆ ಅಸ್ತಿತ್ವಕ್ಕೆ ತರಲು ನಾವಿಕ್ ಯೋಜನೆಯನ್ನು ಇಸ್ರೋ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಐಆರ್​ ಎನ್​ ಎಸ್ ​ಎಸ್- 1ಹೆಚ್ ಉಡಾವಣೆ ಮಾಡಲಾಗುತ್ತಿದೆ.

ಈ ಯೋಜನೆಯಿಂದ ಕಡಿಮೆ ವೆಚ್ಚದಲ್ಲಿ ನಿಖರ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವಿಜ್ಞಾನಿಗಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶಿಯ ಉಪಗ್ರಹಗಳ ಉಡಾವಣೆಯ ಜತೆಗೆ, ವಿದೇಶಿ ಉಪಗ್ರಹಗಳು, ನ್ಯಾನೋ  ಉಪಗ್ರಹಗಳ ಉಡಾವಣೆಗೆ ಹಲವು ರಾಷ್ಟ್ರಗಳು ಭಾರತದ ನೆರವು ಬಯಸುತ್ತಿವೆ. ಹೀಗಾಗಿ ಬಾಹ್ಯಾಕಾಶ ಸಂಶೋಧನೆ ಮತ್ತು ಯೋಜನೆಯಲ್ಲಿ ಇಸ್ರೋ ಹೆಚ್ಚು ತೊಡಗಿಸಿಕೊಳ್ಳುತ್ತಿದೆ. ಈಗ ಇದರಲ್ಲಿ ಮೊದಲ ಬಾರಿಗೆ ಖಾಸಗಿ  ಕಂಪನಿಗಳಿಗೆ ಅವಕಾಶ ಕಲ್ಪಿಸಿರುವುದು ಮಹತ್ವ ಪಡೆದುಕೊಂಡಿದೆ.

ತ್ವರಿತವಾಗಿ ಉಪಗ್ರಹ ನಿರ್ಮಾಣ ಮತ್ತು ಉಡಾವಣೆಯ ಉದ್ದೇಶದಿಂದ ಇಸ್ರೋ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿದ್ದು, ಈ ಉಪಗ್ರಹ ಯೋಜನೆಯಲ್ಲಿ ಶೇ. 25 ಖಾಸಗಿ ಸಹಭಾಗಿತ್ವವಿದೆ. ಅಂತೆಯೇ  ಉಡಾವಣೆಯ ಬಳಿಕದ ಯಶಸ್ಸನ್ನು ಅವಲೋಕಿಸಿ ಮುಂದೆ ಮತ್ತಷ್ಟು ಬಾಹ್ಯಾಕಾಶ ಯೋಜನೆಗಳಿಗೆ ಖಾಸಗಿ ಸಹಭಾಗಿತ್ವ ನೀಡುವ ಕುರಿತು ನಿರ್ಧರಿಸಲಾಗುತ್ತದೆ ಇಸ್ರೋ ಸ್ಪಷ್ಟಪಡಿಸಿದೆ.

ಇನ್ನು ಈ ಯೋಜನೆಯಲ್ಲಿ ಬೆಂಗಳೂರು ಮೂಲಕ ಅಲ್ಪಾ ಡಿಸೈನ್ ಟೆಕ್ನಾಲಜೀಸ್ ಎಂಬ ಖಾಸಗಿ ಬಾಹ್ಯಾಕಾಶ ಸಂಸ್ಥೆ ಕೂಡ ಈ ಯೋಜನೆಯಲ್ಲಿ ಪಾಲ್ಗೊಂಡಿದೆ. ಐಆರ್ ಎನ್ ಎಸ್ ಎಸ್-1ಹೆಚ್ ಉಪಗ್ರಹವನ್ನು ಇಸ್ರೋದ  ಯಶಸ್ವೀ ಉಪಗ್ರಹ ಉಡಾವಣಾ ವಾಹಕ ಪಿಎಸ್ ಎಲ್ ವಿ ಹೊತ್ತು ಸಾಗಲಿದ್ದು, ಇದಕ್ಕಾಗಿ ಪಿಎಸ್ ಎಲ್ ವಿ ರಾಕೆಟ್ ಗೆ ಆರು ಹೆಚ್ಚುವರಿ ಬೂಸ್ಟರ್​ಗಳನ್ನು ಅಳವಡಿಸಲಾಗಿದೆ. ಪಿಎಸ್​ಎಲ್​ವಿ ಸರಣಿಯ ಸಿ39ನೇ ಯೋಜನೆ  ಇದಾಗಿದ್ದು, ಅಧಿಕ ಭಾರದ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಗುರಿ ಹೊಂದಿದೆ.

ಈ ಸ್ವದೇಶಿ ದಿಕ್ಸೂಚಿ ವ್ಯವಸ್ಥೆಯಿಂದ ಅನುಕೂಲವೇನು?
ಅಮೆರಿಕದ ಜಿಪಿಎಸ್ ಮಾದರಿಯ ಉಪಗ್ರಹದಂತೆ ಭಾರತದಲ್ಲಿ ನಾವಿಕ್ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ವಾಯುಯಾನ, ನೌಕಾ ಸಂಚಾರ ಮತ್ತು ಭೂಸಾರಿಗೆಯ ವಿವಿಧ ಕಾರ್ಯಗಳಿಗೆ ಬಳಕೆಯಾಗಲಿದೆ. ವಾಯು ಸಂಚಾರ  ನಿಯಂತ್ರಣ, ರೈಲು ಸಾರಿಗೆಯ ಸಮರ್ಪಕ ನಿರ್ವಹಣೆ, ಮೀನುಗಾರಿಗೆ ಮತ್ತು ಸಂಚಾರ ಬೋಟ್, ಹಡಗುಗಳ ಪಥ ನಿರ್ಧಾರ ಸಹಿತ ವಿವಿಧ ಕ್ಷೇತ್ರಗಳಲ್ಲಿ ಈ ನಾವಿಕ್ ಯೋಜನೆ ಪ್ರಯೋಜನಕಾರಿಯಾಗಲಿದೆ.

ಅಂತೆಯೇ ಭದ್ರತಾ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದ್ದು,  ಬದಲಿ ಉಪಗ್ರಹ ನಾವಿಕ್ ದಿಕ್ಸೂಚಿ ವ್ಯವಸ್ಥೆಗಾಗಿ ಈಗಾಗಲೇ 7 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆದರೆ ಈ ಹಿಂದೆ ಉಡಾವಣೆಯಾಗಿದ್ದ  ಐಆರ್​ಎನ್​ಎಸ್​ಎಸ್ -1ಎ ಉಪಗ್ರಹದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಲ್ಲಿ ಅಳವಡಿಸಲಾದ ಆಟೋಮಿಕ್ ಕ್ಲಾಕ್ ಕಾರ್ಯ ಸ್ಥಗಿತಗೊಂಡಿದೆ. ಹೀಗಾಗಿ ಪರ್ಯಾಯವಾಗಿ ಐಆರ್ ಎನ್ಎಸ್ಎಸ್-1ಹೆಚ್  ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ.

ಐಆರ್​ಎನ್​ಎಸ್​ಎಸ್ -1ಎ ಉಪಗ್ರಹವನ್ನು 2013 ಜುಲೈ1ರಂದು ಉಡಾವಣೆ ಮಾಡಲಾಗಿತ್ತು. ರಷ್ಯಾ ಹಾಗೂ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳ ದಿಕ್ಸೂಚಿ ವ್ಯವಸ್ಥೆ ಅಸ್ತಿತ್ವಕ್ಕೆ ತಂದಿದ್ದ ಸಂದರ್ಭದಲ್ಲೂ ಇದೇ ಸಮಸ್ಯೆ  ಎದುರಾಗಿತ್ತು.

ನಾವಿಕ್ ಯೋಜನೆಯಡಿಯಲ್ಲಿ ಈ ಹಿಂದೆ ಉಡಾವಣೆಯಾದ ಉಪಗ್ರಹಗಳ ಪಟ್ಟಿ ಇಂತಿದೆ.
ಐರ್ ಆಎನ್ ಎಸ್ ಎಸ್-1ಜಿ (ಏಪ್ರಿಲ್ 28, 216)
ಐರ್ ಆಎನ್ ಎಸ್ ಎಸ್-1ಎಫ್ (ಮಾರ್ಚ್ 10, 2016)
ಐರ್ ಆಎನ್ ಎಸ್ ಎಸ್-1ಇ (ಜನವರಿ 20, 2016)
ಐರ್ ಆಎನ್ ಎಸ್ ಎಸ್-1ಡಿ (ಮಾರ್ಚ್ 28, 2015)
ಐರ್ ಆಎನ್ ಎಸ್ ಎಸ್-1ಸಿ (ಅಕ್ಟೋಬರ್ 16, 2014)
ಐರ್ ಆಎನ್ ಎಸ್ ಎಸ್-1ಬಿ (ಏಪ್ರಿಲ್ 4, 2014)
ಐರ್ ಆಎನ್ ಎಸ್ ಎಸ್-1ಎ (ಜುಲೈ 01, 2013)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com