20ರ ಸಂಭ್ರಮದ ಹೊರತಾಗಿಯೂ ಜನ್ಮ ದಿನಾಚರಣೆಯ ನಿಖರ ದಿನಾಂಕವನ್ನೇ ಮರೆತ 'ಗೂಗಲ್'!

ನಮ್ಮ ಯಾವುದೇ ಪ್ರಶ್ನೆಗೂ ಕ್ಷಣಾರ್ಧದಲ್ಲಿ ಉತ್ತರಿಸುವ ಗೂಗಲ್ ಗೆ ತನ್ನ ಜನ್ಮ ದಿನಾಚರಣೆಯ ನಿಖರ ದಿನಾಂಕವೇ ಮರೆತು ಹೋಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ನಮ್ಮ ಯಾವುದೇ ಪ್ರಶ್ನೆಗೂ ಕ್ಷಣಾರ್ಧದಲ್ಲಿ ಉತ್ತರಿಸುವ ಗೂಗಲ್ ಗೆ ತನ್ನ ಜನ್ಮ ದಿನಾಚರಣೆಯ ನಿಖರ ದಿನಾಂಕವೇ ಮರೆತು ಹೋಗಿದೆ...
ಅರೆ ಇದು ಜೋಕ್ ಅಲ್ಲ.. ನಿಜ.. ಈ ಬಗ್ಗೆ ಸ್ವತಃ ಗೂಗಲ್ ಸಂಸ್ಥೆ ತನ್ನ ಅಧಿಕೃತ ಬ್ಲಾಗ್ ನಲ್ಲಿ ಬರೆದುಕೊಂಡಿತ್ತು, ಸೆಪ್ಟೆಂಬರ್ 4ರಂದು ಅಧಿಕೃತವಾಗಿ ಗೂಗಲ್ ಜನ್ಮ ದಿನಾಚರಣೆಯನ್ನು ಆಚರಿಸುತ್ತದೆಯಾದರೂ ಇಂದಿಗೂ ಗೂಗಲ್ ಜನ್ಮ ತಾಳಿದ ನಿಖರ ದಿನಕ್ಕಾಗಿ ಶೋಧ ನಡೆಯುತ್ತಿದೆ ಎಂದು ಹೇಳಿಕೊಂಡಿದೆ. ಗೂಗಲ್ ಹುಟ್ಟಿ 20 ವರ್ಷ ಕಳೆದ ಸಂಭ್ರಮದ ನಿಮಿತ್ತ ತನ್ನ ಬ್ಲಾಗ್ ನಲ್ಲಿ ತನ್ನ ಬಳಕೆದಾರರ ಉದ್ದೇಶಿಸಿ ಗೂಗಲ್ ಲೇಖನ ಪ್ರಕಟಿಸಿದ್ದು, ಈ ಲೇಖನದಲ್ಲಿ ಹಲವು ಅಚ್ಚರಿದಾಯಕ ಅಂಶಗಳನ್ನು ಹೇಳಿಕೊಂಡಿದೆ. ಈ ಪೈಕಿ ತನ್ನ ಜನ್ಮ ದಿನಾಚರಣೆಯ ನಿಖರ ದಿನಕ್ಕಾಗಿ ಹುಡುಕಾಡುತ್ತಿರುವ ಕುರಿತೂ ಗೂಗಲ್ ಹೇಳಿಕೊಂಡಿದೆ. 
'ಗೂಗಲ್ ನ ನಿಖರ ಜನ್ಮ ದಿನಕ್ಕಾಗಿ ನಮ್ಮ ತಂಡದಲ್ಲೇ ಇಂದಿಗೂ ವಾದಗಳು ನಡೆಯುತ್ತಿವೆ. ಅಧಿಕೃತವಾಗಿ ಈಗ ಸೆಪ್ಟೆಂಬರ್ 4ರಂದು ಜನ್ಮ ದಿನಾಚರಣೆ ಆಚರಣೆ ಮಾಡಲಾಗುತ್ತಿದೆಯಾದರೂ, ದಶಕಗಳ ಹಿಂದೆ ಸೆಪ್ಟೆಂಬರ್ 27ರಂದು ಜನ್ಮ ದಿನಾಚರಣೆ ಆಚರಿಸಲಾಗುತ್ತಿತ್ತು. ಸಂಸ್ಥೆಯ ಬೆಳವಣಿಗೆ ನಿಜಕ್ಕೂ ಖುಷಿ ತಂದಿದ್ದು, ಇಂದು ಸುಮಾರು 60 ದೇಶಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ಹೊಂದಿದ್ದೇವೆ. ಗೂಗಲ್ ಇದೀಗ ಆಲ್ಫಾಬೆಟ್ ಭಾಗವಾಗಿದ್ದು, 2015ರಲ್ಲಿ ನಮ್ಮ ಮಾತೃಸಂಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಈಗಷ್ಟೇ ನಾವು ಜನ್ಮ ದಿನಾಚರಣೆ ಆಚರಿಸಿದ್ದು, ನಮ್ಮ ಹುಟ್ಟಿನಿಂದ ಈ ವರೆಗಿನ ನಮ್ಮ ಬೆಳವಣಿಗೆ ಖುಷಿ ತಂದಿದೆ. ಕ್ರೋಮ್ ಬ್ರೌಸರ್ ನ 10 ಜನ್ಮ ದಿನಾಚರಣೆಯಿಂದ ಈ ವರೆಗೂ ಸುಂದರ್ ಪಿಚೈ ಅವರ ನೇತೃತ್ವದಲ್ಲಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆದಿದೆ. ಸರ್ಚ್ ಎಂಜಿನ್ ಮತ್ತು ಯೂಟ್ಯೂಬ್ ನಿಂದಾಗಿ ಗೂಗಲ್ ಆದಾಯ ಶೇ.26ರಷ್ಟು ಏರಿಕೆಯಾಗಿದ್ದು, 2018ರ ಎರಡನೇ ತ್ರೈಮಾಸಿಕ ವರದಿ ವೇಳೆಗೆ ಸಂಸ್ಥೆ 23.3 ಬಿಲಿಯನ್ ಡಾಲರ್ ಆದಾಯ ಗಳಿಸಿದೆ. 
ಗೂಗಲ್ ಜಾಹಿರಾತು ಆದಾಯ ಕೂಡ ಶೇ.23ರಷ್ಟು ಏರಿಕೆಯಾಗಿದ್ದು, ಗೂಗಲ್ ಆಲ್ಫಾಬೆಟ್ ಕಳೆದ ಜೂನ್ 30ರ ಹೊತ್ತಿಗೆ 26.24 ಬಿಲಿಯನ್ ಡಾಲರ್ ಆದಾಯ ಗಳಿಸಿದೆ. ಅಂತೆಯೇ ಗೂಗಲ್ ಷೇರು ವಹಿವಾಟಿನಲ್ಲೂ ಕೂಡ ಆದಾಯ 3.2 ಬಿಲಿಯನ್ ಡಾಲರ್ ಗೂ ಮೀರಿದೆ. ನಮ್ಮ ನೂತನ ತಂತ್ರಜ್ಞಾನ ಶೋಧ ಹೀಗೆ ಮುಂದುವರೆಯಲಿದ್ದು, ಪ್ರಮುಖವಾಗಿ ಕೃತಕ ಬುದ್ದಿಮತ್ತೆಯನ್ನು ಮತ್ತಷ್ಟು ಪ್ರಬಲಗೊಳಿಸುವ ಕಾರ್ಯ ನಿರಂತರವಾಗಲಿದೆ ಎಂದು ಗೂಗಲ್ ತನ್ನ ಗ್ರಾಹಕರಿಗೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com