ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 'ಕಪ್ಪುಕುಳಿ'ಯ ಮೊದಲ ಚಿತ್ರ ಬಿಡುಗಡೆ

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ವಿಜ್ಞಾನಿಗಳಿಗೆ ಚಿದಂಬರ ರಹಸ್ಯವಾಗಿದ್ದ ಕಪ್ಪುಕುಳಿಯ ಚಿತ್ರವನ್ನು ತೆಗೆಯುವಲ್ಲಿ ಕೊನೆಗೂ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

Published: 10th April 2019 12:00 PM  |   Last Updated: 10th April 2019 07:32 AM   |  A+A-


First ever black hole image released by Astronomers

ಕಪ್ಪುಕುಳಿಯ ಮೊದಲ ಚಿತ್ರ

Posted By : SVN SVN
Source : Online Desk
ವಾಷಿಂಗ್ಟನ್: ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ವಿಜ್ಞಾನಿಗಳಿಗೆ ಚಿದಂಬರ ರಹಸ್ಯವಾಗಿದ್ದ ಕಪ್ಪುಕುಳಿಯ ಚಿತ್ರವನ್ನು ತೆಗೆಯುವಲ್ಲಿ ಕೊನೆಗೂ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಹೌದು.. ವಿಶ್ವವನ್ನೇ ನುಂಗಿ ಹಾಕುವ ಕಪ್ಪುಕುಳಿಯ ಕುರಿತು ಅಮೆರಿಕದ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಮಾಹಿತಿ ನೀಡಿದ್ದರು. ಈ ಬಳಿಕ ಸಾಕಷ್ಟು ವಿಜ್ಞಾನಿಗಳು ಈ ಕುರಿತು ಸಂಶೋಧನೆ ಕೈಗೊಂಡರೂ ಅದರಲ್ಲಿ ಹೇಳಿಕೊಳ್ಳುವಂತಹ ಯಶಸ್ವಿಯಾಗಿರಲಿಲ್ಲ. ಕಪ್ಪುಕುಳಿ ಇದೆ ಎಂದು ಮಾಹಿತಿ ಇತ್ತಾದರೂ ಅದು ಎಲ್ಲಿದೆ.. ಅದು ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಇಷ್ಟು  ದಿನ ಪ್ರಶ್ನೆಗಳಾಗಿಯೇ ಉಳಿದಿತ್ತು. ಆದರೆ ಇದೀಗ ದಶಕಗಳ ಪರಿಶ್ರಮದ ಬಳಿಕ ಕೊನೆಗೂ ವಿಜ್ಞಾನಿಗಳು ಕಪ್ಪುಕಳಿಯ ರಹಸ್ಯ ಮಾಹಿತಿಯನ್ನು ಬೇದಿಸಿದ್ದು, ಇದೇ ಮೊದಲ ಬಾರಿಗೆ ಕಪ್ಪುಕುಳಿಯ ನೈಜ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ನೆದರ್ಲೆಂಡ್ ನ ರ್ಯಾಡ್ ಬೌಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮೊಟ್ಟ ಮೊದಲ ಬಾರಿಗೆ ಈ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಈ ಯೋಜನೆಗಾಗಿ ವಿಜ್ಞಾನಿಗಳು ಜಗತ್ತಿನ ವಿವಿಧ ಮೂಲೆಗಳಲ್ಲಿ ನಿರ್ಮಾಣ ಮಾಡಲಾಗಿರುವ ಬರೊಬ್ಬರಿ 8 ಅತ್ಯಾಧುನಿಕ ಟೆಲಿಸ್ಕೋಪ್ ಗಳನ್ನು ಬಳಕೆ ಮಾಡಿದ್ದು, ಬೋಸ್ಟನ್ ನಲ್ಲಿರುವ ಟೆಲಿಸ್ಕೋಪ್ ಅನ್ನು ಕೇಂದ್ರವಾಗಿಟ್ಟುಕೊಂಡು ವಿಶ್ವದ ವಿವಿಧೆಡೆಯ ಪ್ರಮುಖ 7 ಟೆಲಿಸ್ಕೋಪ್ ಗಳ ನೆರವಿನಿಂದ ಈ ಕಪ್ಪುಕುಳಿಯ ಅತ್ಯಪರೂಪದ ಚಿತ್ರವನ್ನು ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ.
ಈ ಕಪ್ಪುಕುಳಿಯನ್ನು ವಿಜ್ಞಾನಿಗಳು ನಮ್ಮ ಮಿಲ್ಕಿವೇ ಗ್ಯಾಲಕ್ಸಿ ಬಳಿ ಇರುವ ಎಂ87 ಬ್ಲಾಕ್ ಹೋಲ್ ಎಂದು ಗುರುತಿಸಿದ್ದಾರೆ. ಈ ಕಪ್ಪುಕುಳಿ ಭೂಮಿಯಿಂದ ಸುಮಾರು 40 ಬಿಲಿಯನ್ ಕಿಮೀ ದೂರದಲ್ಲಿದ್ದು, ಅಂದರೆ ಭೂಮಿಗಿಂತ ಅದರ ಸುಮಾರು 3 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಅಂತೆಯೇ ಈ ಕಪ್ಪುಕುಳಿಯನ್ನು 500 ಮಿಲಿಯನ್ ಟ್ರಿಲಿಯನ್ ಕಿಮೀ ದೂರದಿಂದ ಸೆರೆ ಹಿಡಿಯಲಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ನಮ್ಮ ಇಡೀ ಸೌರವ್ಯೂಹಕ್ಕಿಂತಲೂ ನಾವು ಊಹಿಸಲೂ ಸಾಧ್ಯವಾಗದಷ್ಟು ದೊಡ್ಡ ಪ್ರಮಾಣದಲ್ಲಿ ಈ ಕಪ್ಪುಕುಳಿ ಇದ್ದು, ನಮ್ಮ ಸೂರ್ಯನ ಗಾತ್ರಕ್ಕಿಂತ ಇದು 6.5 ಮಿಲಿಯನ್ ಪಟ್ಟು ದೊಡ್ಡದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. 
ಚಿತ್ರದಲ್ಲಿ ಕಪ್ಪುಕುಳಿಯಲ್ಲಿರುವ ಅಪಾರ ಪ್ರಮಾಣದ ಸೂಪರ್ ಹೀಟೆಡ್ ಗ್ಯಾಸ್ (ಅತ್ಯಂತ ಶಾಖದಿಂದ ಕೂಡಿದ ಅನಿಲ) ತನ್ನ ಬಳಿಯ ಗ್ಯಾಲಕ್ಸಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈ ಕಪ್ಪುಕುಳಿಯಲ್ಲಿನ ಬೆಳಕಿನ ಅಗಾಧತೆ ಎಷ್ಟಿದೆ ಎಂದರೆ ಸೌರವ್ಯೂಹಕ್ಕಿಂತ ಅನೇಕ ಲಕ್ಷ ಪಟ್ಟು ಪ್ರಕಾಶಮಾನವಾಗಿದೆ. ಇದರ ಸಾಮರ್ಥ್ಯ ಹೇಗಿದೆ ಎಂದರೆ ಬೆಳಕೂ ಕೂಡ ಇದರ ಗುರುತ್ವಾಕರ್ಷಣೆ ಬಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಒಟ್ಟಾರೆ ಕಪ್ಪುಕುಳಿಯ ಕುರಿತಂತೆ ದಶಕಗಳಿಂದಲೂ ಅಧ್ಯಯನ ನಡಸುತ್ತಿದ್ದ ವಿಜ್ಞಾನಿಗಳಿಗೆ ಈ ಮಹತ್ವದ ಸಂಶೋಧನೆ ಅದರ ಕುರಿತು ಮತ್ತಷ್ಟು ತಿಳಿಯುವ ಉತ್ಸಾಹ ಮೂಡಿಸಿದೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp