%2C%20Interceptor%20missile%20(R).jpg?w=480&auto=format%2Ccompress&fit=max)
ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ಒಳಬರುವ ಶತ್ರು ಕ್ಷಿಪಣಿಯನ್ನು ಯಾವುದೇ ಹಂತದಲ್ಲಿ ಹೊಡೆದುರುಳಿಸುವ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ (BMD) 2ನೇ ಹಂತದ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನೆರವೇರಿದೆ.
ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಉಡಾಯಿಸಲಾದ ಕಡಿಮೆ-ಎತ್ತರದ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಕ್ಷಿಪಣಿಯು ಅಬ್ದುಲ್ ಕಲಾಂ ದ್ವೀಪದಿಂದ 15 ಕಿಮೀಗಿಂತ ಕಡಿಮೆ ಎತ್ತರದಲ್ಲಿ ಉಡಾವಣೆಯಾದ ಗುರಿಯಾಗಿದ್ದ ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಇದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಖಂಡಾಂತರ ಕ್ಷಿಪಣಿಯ 2ನೇ ಹಂತದ ಪರೀಕ್ಷಾರ್ಥ ಪ್ರಯೋಗದ ಭಾಗವಾಗಿತ್ತು.
ಉದ್ದೇಶಿತ ಕ್ಷಿಪಣಿಯನ್ನು ಎಲ್ ಸಿ-4 ಧ್ರಾಮಾ ಉಡ್ಡಯನ ಕೇಂದ್ರದಿಂದ ಸಂಜೆ 4-20ಕ್ಕೆ ಎದುರಾಳಿ ಖಂಡಾಂತರ ಕ್ಷಿಪಣಿಯನ್ನು ಅನುಕರಿಸುವಂತೆ ಮಾಡಲಾಯಿತು.ಈ ಪ್ರದೇಶದಲ್ಲಿ ಅಳವಡಿಸಿದ್ದ ರಾಡಾರ್ ಗಳು ಕ್ಷಿಪಣಿಯನ್ನು ಪತ್ತೆ ಮಾಡಿ, ಅದಕ್ಕೆ ಪ್ರತಿಯಾಗಿ ಎಡಿ ಇಂಟರ್ ಸೆಪ್ಟರ್ ಸಿಸ್ಟಂ ಅನ್ನು ಕಾರ್ಯಗತಗೊಳಿಸಿತ್ತು . ಸಂಜೆ 4-24ಕ್ಕೆ 2ನೇ ಹಂತದ ಎಡಿ ಎಂಡೋ ಅಸ್ಮಾಸ್ಪಿಯರಿಂಗ್ ಕ್ಷಿಪಣಿಯನ್ನು ಎಲ್ ಸಿ-3 ಉಡ್ಡಯನ ಕೇಂದ್ರದಿಂದ ಹಾರಿಸಲಾಯಿತು. ಪರೀಕ್ಷೆ ಎಲ್ಲಾ ಹಂತಗಳಲ್ಲೂ ಯಶಸ್ವಿಯಾಯಿತು. ಬಹುದೂರದ ಸೆನ್ಸರ್ ಗಳು, ಕಡಿಮೆ ಸುಪ್ತ ಸಂವಹನ ವ್ಯವಸ್ಥೆ ಹಾಗೂ ಅತ್ಯಾಧುನಿಕ ಇಂಟರ್ ಸೆಪ್ಟರ್ ಕ್ಷಿಪಣಿಗಳು ಇವಾಗಿವೆ ಎಂದು ಮೂಲಗಳು ತಿಳಿಸಿವೆ.
ಭಾರತವು BMD ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಆರನೇ ರಾಷ್ಟ್ರವಾಗಿದೆ. US, UK, ಇಸ್ರೇಲ್, ರಷ್ಯಾ ಮತ್ತು ಚೀನಾದ ನಂತರದ ಸ್ಥಾನವನ್ನು ಭಾರತ ಪಡೆದಿದೆ. ಸ್ವದೇಶಿ ನಿರ್ಮಿತ ರಕ್ಷಣಾ ವ್ಯವಸ್ಥೆ ಇದಾಗಿದ್ದು, 5 ಸಾವಿರ ಕಿಲೋ ಮೀಟರ್ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಯಶಸ್ವಿ ಪರೀಕ್ಷೆ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕ್ಷಿಪಣಿ ಸಾಮರ್ಥ್ಯದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದು, ಇದರಲ್ಲಿ ತೊಡಗಿಸಿಕೊಂಡಿದ್ದ ಡಿಆರ್ ಡಿಒ ಮತ್ತು ಉದ್ಯಮವನ್ನು ಶ್ಲಾಘಿಸಿದ್ದಾರೆ.
Advertisement