
ನವದೆಹಲಿ: ಬಾಹ್ಯಾಕಾಶಕ್ಕೆ ಹಾರುವ ಮುನ್ನ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು, ನಟ ಹೃತಿಕ್ ರೋಷನ್ ನಟನೆಯ 2024ರಲ್ಲಿ ಬಿಡುಗಡೆಯಾದ ಫೈಟರ್ ಸಿನಿಮಾದ ಹಾಡನ್ನು ಕೇಳಿದ್ದಾರೆ.
ತಮ್ಮ ಮೊದಲ ಬಾಹ್ಯಾಕಾಶ ಹಾರಾಟಕ್ಕಾಗಿ ಫಾಲ್ಕನ್ -9 ರಾಕೆಟ್ ಹತ್ತಲು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಪ್ಯಾಡ್ 39-ಎ ಗೆ ಹೋಗುವಾಗ ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರು, ಫೈಟರ್ ಸಿನಿಮಾದ ‘ವಂದೇ ಮಾತರಂ’ ದೇಶ ಭಕ್ತಿಯನ್ನು ಸಾರುವ ಹಾಡನ್ನು ಕೇಳಿದ್ದಾರೆ.
ನಾಸಾದಲ್ಲಿ ಹಳೆಯ ಸಂಪ್ರದಾಯವೊಂದು ಇದ್ದು, ಗಗನಯಾತ್ರಿಗಳು ತಮ್ಮ ಕಾರ್ಯಾಚರಣೆಗಳಿಗಾಗಿ ಉಡಾವಣಾ ಪ್ಯಾಡ್‌ಗೆ ಕಾರಿನಲ್ಲಿ ಹೋಗುವಾಗ ತಮ್ಮ ಕುಟುಂಬಗಳಿಗೆ ವಿದಾಯ ಹೇಳಿ, ವಾಹನ ಚಲಾಯಿಸುವಾಗ ಅವರು ಆಯ್ಕೆ ಮಾಡಿದ ಸಂಗೀತವನ್ನು ಕೇಳುವ ಅವಕಾಶ ನೀಡಲಾಗುತ್ತದೆ.
ಗಗನಯಾತ್ರಿಗಳು ವಿಶ್ರಾಂತಿ ಪಡೆಯಲು ಮತ್ತು ಗಮನಹರಿಸಲು ಸಹಾಯ ಮಾಡಲು ರಾಕೆಟ್‌ನಲ್ಲಿ ಉಡಾವಣೆ ಮಾಡುವ ಮೊದಲು ಸಂಗೀತವನ್ನು ನುಡಿಸುತ್ತಾರೆ. ಒತ್ತಡವನ್ನು ನಿರ್ವಹಿಸಲು ಸಂಗೀತವು ಪ್ರಬಲ ಸಾಧನವಾಗಿದೆ. ವಿಶೇಷವಾಗಿ ಬಾಹ್ಯಾಕಾಶ ಪ್ರಯಾಣದ ಹೆಚ್ಚಿನ ಒತ್ತಡದ ವಾತಾವರಣದಲ್ಲಿ. ಇದು ಭೂಮಿ ಮತ್ತು ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧಿಸಲು ಒಂದು ಮಾರ್ಗವಾಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ಸ್ಫೂರ್ತಿ ಮತ್ತು ಪ್ರೇರಣೆಯ ಮೂಲವಾಗಿದೆ. ಹೀಗಾಗಿ, ಮ್ಯೂಸಿಕ್ ಪ್ಲೇ ಮಾಡಲಾಗುತ್ತದೆ.
ತಿರಂಗಾ ನನ್ನ ಜೊತೆಗಿದೆ
'ನಮಸ್ಕಾರ ದೇಶವಾಸಿಗಳೇ. ಜೈ ಹಿಂದ್. ನಾವು 41 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಬಂದಿದ್ದೇವೆ. ಇದು ಅದ್ಭುತ ಯಾನವಾಗಿದೆ. ಇದು 41 ವರ್ಷಗಳ ಬಳಿಕ ಬಾಹ್ಯಾಕಾಶ ಕೇಂದ್ರಕ್ಕೆ ಹೊರಟಿರುವ ಭಾರತೀಯ ಶುಭಾಂಶು ಶುಕ್ಲಾ ಅವರು ಗಗನಯಾನದ ವೇಳೆ ಆಡಿದ ಉತ್ಸಾಹದ ಮಾತುಗಳು.
ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ 3 ಗಗನ ಯಾತ್ರಿಗಳೊಂದಿಗೆ ನಭಕ್ಕೆ ನೆಗೆದ ಶುಕ್ಲಾ, ಭೂಮಿಯಿಂದ 200 ಕಿ.ಮೀ. ಎತ್ತರದಲ್ಲಿ ಡ್ರಾಗನ್ ನೌಕೆ ಭೂಮಿಯ ಕಕ್ಷೆಯಲ್ಲಿ ಸುತ್ತತೊಡಗಿದಾಗ ಹರ್ಷ ವ್ಯಕ್ತಪಡಿಸಿದ್ದಾರೆ.
'ಗಂಟೆಗೆ 7.5 ಕಿ.ಮೀ. ವೇಗದಲ್ಲಿ ನಾವು ಭೂಮಿ ಯನ್ನು ಸುತ್ತುತ್ತಿದ್ದೇವೆ. ನನ್ನ ಭುಜದ ಮೇಲಿರುವ ಭಾರತದ ತ್ರಿವರ್ಣ ಧ್ವಜವು, ನಾನು ನಿಮ್ಮೆಲ್ಲರೊಂದಿಗಿದ್ದೇನೆ ಎಂದು ಹೇಳುತ್ತಿದೆ. ಇದು ಕೇಲ ನನ್ನ ಐಎಸ್‌ಎಸ್ ಯಾನವಲ್ಲ, ಬದಲಿಗೆ ಭಾರತದ ಮಾನವಸಹಿತ ಬಾಹ್ಯಾಕಾಶಯಾನದ ಆರಂಭವೂ ಆಗಿದೆ. ನೀವೆಲ್ಲ ಇದರ ಭಾಗವಾಗಬೇಕೆಂದು ಬಯಸುತ್ತೇನೆಂದು ಹೇಳಿದ್ದಾರೆ.
6 ಮುಂದೂಡಿಕೆಗಳ ನಂತರ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರ ಬಾಹ್ಯಾಕಾಶಯಾನ ಬುಧವಾರ ಆರಂಭವಾಗಿದೆ.
'ಆಕ್ತಿಯೋಂ-4' ಮಿಷನ್ ನ ಭಾಗವಾಗಿ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇವರನ್ನು ಹೊತ್ತ ಸ್ಪೇಸ್ ಎಕ್ಸ್‌ನ ಫಾಲ್ಕನ್ -9 ರಾಕೆಟ್, ಭಾರತೀ ಯ ಕಾಲಮಾನ ಮಧ್ಯಾಹ್ನ 12.01ಕ್ಕೆ ನಭಕ್ಕೆ ಚಿಮ್ಮಿದೆ.
ಶುಕ್ಲಾ 41 ವರ್ಷಗಳ ಬಳಿಕ ಅಂತರಿಕ್ಷಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್‌ಎಸ್) ತೆರಳುತ್ತಿರುವ ಮೊದಲ ಭಾರತೀಯ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ಶುಕ್ಲಾ ಸೇರಿ ನಾಲ್ವರ ಯಾನ ಬುಧವಾರ ಮಧ್ಯಾಹ್ನ 12.01ಕ್ಕೆ ಆರಂಭವಾಯಿತು. ಗಗನಯಾತ್ರಿಗಳು 28 ಗಂಟೆಗಳ ಪ್ರಯಾಣದ ಬಳಿಕ ಗುರುವಾರ ಭಾರತೀಯ ಕಾಲಮಾನ ಸಂಜೆ ಸುಮಾರು 4.30ಕ್ಕೆ ಬಾಹ್ಯಾಕಾಶ ಕೇಂದ್ರಕ್ಕೆ ಡಾಕ್ (ಜೋಡಣೆ) ಆಗುವ ನಿರೀಕ್ಷೆ ಇದೆ.
ಶುಕ್ಲಾ ಜತೆ ಅಮೆರಿಕದ ಪೆಗ್ಗಿ ವಿಲ್ಸನ್, ಪೋಲೆಂಡ್‌ನ ಸವೋಝ್ ಉನಾಯ್ಕ, ಹಂಗರಿಯ ಟಿಬ ಕಪ್ಪು ಈ ಯೋಜನೆಯ ಭಾಗವಾಗಿದ್ದಾರೆ.
ಇವರೆಲ್ಲರೂ 14 ದಿನಗಳ ಕಾಲ ಐಎಸ್‌ಎಸ್‌ನಲ್ಲಿ ಇರಲಿದ್ದು, 60ಕ್ಕೂ ಅಧಿಕ ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ. ಈ ಪೈಕಿ ಶುಭಾಂಶು ಶುಕ್ಲಾ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪರ 7 ಅಧ್ಯಯನ ನಡೆಸಲಿದ್ದಾರೆ. ಇವು ಭವಿಷ್ಯದಲ್ಲಿ ಭಾರತದ ಅಂತರಿಕ್ಷಯಾನಕ್ಕೆ ನೆರವಾಗಲಿವೆ.
ಇನ್ನು ಫಾಲ್ಕನ್ -9 ರಾಕೆಟ್ ನಭಕ್ಕೆ ಚಿಮ್ಮಿದ 8 ನಿಮಿಷದಲ್ಲೇ 4 ಬಾಹ್ಯಾಕಾಶ ಯಾತ್ರಿ ಗಳಿದ್ದ ಡ್ರಾಗನ್ ಕ್ಯಾಪ್ಯೂಲ್‌ನಿಂದ ಬೇರ್ಪಟ್ಟು ಭೂಮಿಗೆ ಸುರಕ್ಷಿತವಾಗಿ ಮರಳಿದೆ. ಫ್ಲೋರಿಡಾದ ಕೇಪ್ ಕೆನವೆರಲ್ ಸ್ಟೇಷನ್‌ನಲ್ಲಿ ಬಂದು ಇಳಿದಿದೆ. ಈ ಮೂಲಕ, ರಾಕೆಟ್ ಮರುಬಳಕೆಯ ಯತ್ನ ಕೂಡ ಯಶಸ್ಸು ಕಂಡಿದೆ. ಗಗನಯಾತ್ರಿಗಳು ಕಕ್ಷೆಯನ್ನು ತಲುಪುತ್ತಿದ್ದಂತೆ, ಅವರಿದ್ದ ಕ್ಯಾಪ್ಸಲ್‌ಗೆ 'ಗ್ರೇಸ್' ಎಂದು ಹೆಸರಿಟ್ಟಿದ್ದಾರೆ.
ಈ ಮೊದಲು ತಾಂತ್ರಿಕ ಸಮಸ್ಯೆ, ಹವಾಮಾನ್ಯ ವೈಪ ರೀತ್ಯದಿಂದ ಉಡ್ಡಯನವನ್ನು ಹಲವು ಬಾರಿ ಮುಂದೂಡಲಾಗಿತ್ತು. ಈಗ 7ನೇ ಯತ್ನ ಯಶಸ್ವಿಯಾಗಿದೆ.
Advertisement