
ಬೆಂಗಳೂರು: ಐದು ವರ್ಷಗಳ ಹಿಂದೆ ಆರಂಭವಾಗಿದ್ದ ಸುರಂಗ ಮಾರ್ಗದ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು, ದಕ್ಷಿಣ ಭಾರತದ ಮೊದಲ ಮೆಟ್ರೋ ಸುರಂಗ ಮಾರ್ಗ ಎಂಬ ಖ್ಯಾತಿಗಳಿಸಿರುವ ವಿಧಾನಸೌಧ ಮೆಟ್ರೋ ನಿಲ್ದಾಣದ ಯಶಸ್ಸಿನ ಹಿಂದೆ ಸುಮಾರು 240 ಕಾರ್ಮಿಕರ ಶ್ರಮವಿದೆ.
ಈ ಐತಿಹಾಸಿಕ ಮೆಟ್ರೋ ಸುರಂಗ ಮಾರ್ಗ ಕಾಮಗಾರಿಗೆ ಆರಂಭದಿಂದಲೂ ಸಾಕಷ್ಟು ಅಡೆತಡೆಗಳು ಎದುರಾಗಿ ಬಳಿಕ 2–3 ಸಲ ಅಂತಿಮ ಗಡುವು ವಿಸ್ತರಣೆಯಾಗಿತ್ತು. ರಾಜ್ಯದ ಶಕ್ತಿ ಸೌಧ ವಿಧಾನಸೌಧದ ಬಳಿಯ ನಿಲ್ದಾಣವೆಂದೇ ಪ್ರಾಮುಖ್ಯತೆ ಪಡೆದಿದ್ದ ಈ ಮೆಟ್ರೋ ನಿಲ್ದಾಣಕ್ಕಾಗಿ ಬರೊಬ್ಬರಿ 10 ಸಾವಿರ ಬಾರಿ ನೆಲದಾಳದಲ್ಲಿ ಸ್ಫೋಟ ನಡೆಸಲಾಗಿತ್ತು. ನಿಲ್ದಾಣದ ಕಾಮಗಾರಿಗಾಗಿ ಸುಮಾರು 240ಕ್ಕೂ ಅಧಿಕ ಮಂದಿ ಕಾರ್ಮಿಕರು ಹಗಲು-ರಾತ್ರಿ ಎನ್ನದೇ ದುಡಿದ ಉದಾಹರಣೆ ಕೂಡ ಇದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕ ಕಾರ್ಮಿಕರು ಹೊರ ರಾಜ್ಯದವರಾಗಿದ್ದು, ಪಶ್ಚಿಮ ಬಂಗಾಳ, ಬಿಹಾರ ಮತ್ತು ಆಂಧ್ರ ಪ್ರದೇಶದಿಂದ ಬಂದವರಾಗಿದ್ದಾರೆ. ಇಲ್ಲಿ ನಡೆದ ಸುಮಾರು 10 ಸಾವಿರ ಸ್ಫೋಟಕ್ಕಾಗಿ ಸುಮಾರು 50 ಸಾವಿರ ಕೆಜಿ ಸ್ಫೋಟಕಗಳನ್ನು ಬಳಸಿಕೊಳ್ಳಲಾಗಿತ್ತಂತೆ. ಕೋಲಾರ ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ರಾಕ್ ಮೆಕ್ಯಾನಿಕ್ಸ್ ಸಂಸ್ಥೆ ನುರಿತ ಇಂಜಿನಿಯರ್ ಗಳು ಈ ಬೃಹತ್ ಸ್ಫೋಟ ಕಾಮಗಾರಿಗಾಗಿಯೆಂದೇ ಬೆಂಗಳೂರಿನಲ್ಲಿ ನೆಲೆಯೂರಿದ್ದ ವಿಚಾರವನ್ನು ಬಿಎಂಆರ್ ಸಿಎಲ್ ನ ಉಪ ಮುಖ್ಯ ಇಂಜಿನಿಯರ್ ಸುಬ್ರಹ್ಮಣ್ಯ ಗುಡ್ಗೆ ಅವರು ತಿಳಿಸಿದ್ದಾರೆ.
2011 ಮಾರ್ಚ್ 11ರಿಂದ ಆರಂಭವಾದ ಸ್ಫೋಟ ಕಾರ್ಯ 2013ರವರೆಗೂ ನಡೆದಿತ್ತು. ಬೆಳಗ್ಗೆ 6ರಿಂದ 7 ಗಂಟೆಯ ಅವಧಿಯಲ್ಲಿ ಈ ಭಾಗದಲ್ಲಿ ಹೆಚ್ಚಿನ ಜನ ದಟ್ಟಣೆ ಇಲ್ಲದಿರುವುದರಿಂದ ಈ ವೇಳೆಯಲ್ಲಿಯೇ ಸ್ಫೋಟ ನಡೆಸಲಾಗುತ್ತಿತ್ತು. ಕೇವಲ ಐದೇ ಸೆಕೆಂಟ್ ಗಳಲ್ಲಿ ಸ್ಫೋಟ ಕಾರ್ಯ ಮುಕ್ತಾಯವಾಗುತ್ತಿತ್ತಾದರೂ ಸ್ಫೋಟ ಕಾರ್ಯಕ್ಕೆ ಸಿದ್ಧತೆ ಮಾತ್ರ ಬೆಳಗ್ಗೆ 3.30ರಿಂದಲೇ ಪ್ರಾರಂಭವಾಗುತ್ತಿತ್ತು. ಇದಕ್ಕಾಗಿ ಕಾರ್ಮಿಕರನ್ನು ಹಲವು ವಿಭಾಗಗಳಾಗಿ ವಿಂಗಡಿಸಿ, ಪ್ರತೀ ವಿಭಾಗದಲ್ಲಿಯೂ 60 ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಪ್ರತಿಯೊಂದು ಗುಂಪಿಗೂ 100 ಮೀ ವ್ಯಾಪ್ತಿಯ ಪ್ರದೇಶ ನೀಡಿ ಅಲ್ಲಿ ಕಾಮಗಾರಿ ನಡೆಸುವಂತೆ ಸೂಚಿಸಲಾಗುತ್ತಿತ್ತು ಎಂದು ಗುಡ್ಗೆ ಹೇಳಿದ್ದಾರೆ.
ಸ್ಫೋಟಕ ಕಾರ್ಯ ಹೇಗೆ?
ನೆಲದಡಿಯ ಮೆಟ್ರೋ ನಿಲ್ದಾಣಕ್ಕಾಗಿ ಗುರುತಿಸಲಾಗಿದ್ದ ನೆಲದಡಿಯ ಜಾಗದಲ್ಲಿದ್ದ ಬೃಹತ್ ಕಲ್ಲನ್ನು ಸಿಡಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಕಲ್ಲಿನ ಕೆಲ ಭಾಗಗಳಲ್ಲಿ ರಂದ್ರ ಕೊರೆದು ಅಲ್ಲಿ ಸ್ಫೋಟರವನ್ನು ಅಳವಡಿಸಿ ಬಳಿಕ ಸ್ಫೋಟಿಸಲಾಗುತ್ತಿತ್ತು. ಈ ರಂಧ್ರ ಕೊರೆತಕ್ಕಾಗಿ ಜ್ಯಾಕ್ ಹ್ಯಾಮರ್ ಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಪ್ರತೀ ರಂದ್ರದಲ್ಲಿಯೂ 125 ಗ್ರಾಂನಷ್ಟು ನೈಟ್ರೇಟ್ ಮಿಶ್ರಿತ ಸ್ಫೋಟಕಗಳನ್ನು ಅಳವಡಿಸಲಾಗುತ್ತಿತ್ತು. ಇದಕ್ಕಾಗಿ ಫ್ಯೂಸ್ ನಿಂದ ಕೂಡಿದ ವೈರ್ ಗಳ ಮೂಲಕ ಬಾಂಬ್ ಸ್ಫೋಟ ನಿಯಂತ್ರಣ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿತ್ತು. ಯಾವುದೇ ಕಾರಣಕ್ಕೂ ಸ್ಫೋಟಗೊಂಡ ಕಲ್ಲುಗಳು ದೂರದೂರಕ್ಕೆ ಹಾರದಿರಲಿ ಎಂದು ಕಡಿಮೆ ತೀವ್ರತೆ ಸ್ಫೋಟಕಗಳನ್ನು ಮತ್ತು ರಬ್ಬರ್ ಮ್ಯಾಟ್ ಗಳನ್ನು ಬಳಸಿಕೊಳ್ಳಲಾಗುತ್ತಿತ್ತು ಮತ್ತು ಈ ರಬ್ಬರ್ ಮ್ಯಾಟ್ ಗಳನ್ನು ಹೈದರಾಬಾದ್ ನಿಂದ ತರಿಸಿಕೊಳ್ಳಲಾಗಿತ್ತು. ಪ್ರತೀ ರಬ್ಬರ್ ಮ್ಯಾಟ್ ಸುಮಾರು 1,400 ಕೆಜಿ ತೂಗುತಿತ್ತು ಮತ್ತು ಈ ಮ್ಯಾಟ್ ನ ಸಹಾಯದಿಂದ 50 ಸ್ಫೋಟಗಳನ್ನು ನಡೆಸಲಾಗುತ್ತಿತ್ತು ಎಂದು ಗಡ್ಗೆ ತಿಳಿಸಿದ್ದಾರೆ.
ಕಾಮಗಾರಿಗೆ ಎದುರಾಗದ ನೀರಿನ ಸಮಸ್ಯೆ!
ವಿಧಾನಸೌಧದ ಸುತ್ತಮುತ್ತಲಿನ ಭಾಗದಲ್ಲಿ ಅಂತರ್ಜಲ ಸಾಕಷ್ಟು ಉತ್ತಮವಾಗಿದ್ದು, ಕೆವಲ 4ರಿಂದ ಐದು ಅಡಿ ಭೂಮಿ ಕೊರೆದರೂ ನೀರು ಯಥೇಚ್ಚವಾಗಿ ಚಿಮ್ಮುತ್ತಿತ್ತು. ಹೀಗಾಗಿ ಹಲವು ವೇಳೆ ಕಾಮಗಾರಿ ವಿಳಂಬವಾಗುತ್ತಿತ್ತಾದರೂ, ಎಂದೂ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ನೀರಿನ ಸಮಸ್ಯೆಯಿಂದ ಎಂದೂ ಕಾಮಗಾರಿ ನಿಂತಿರಲಿಲ್ಲ. ಇಲ್ಲಿ ಸಿಕ್ಕ ಹೆಚ್ಚುವರಿ ನೀರನ್ನು ನೀರಿನ ಸಮಸ್ಯೆ ಇದ್ದ ಇತರೆ ಘಟಕಗಳಿಗೆ ರವಾನೆ ಮಾಡಿದ ಉದಾಹರಣೆ ಕೂಡ ಇದೆ. ಇಷ್ಟು ದೊಡ್ಡ ಕಠಿಣ ಕಾಮಗಾರಿಯಲ್ಲಿ ಈ ವರೆಗೂ ಯಾವೊಬ್ಬ ಸಿಬ್ಬಂದಿಯೂ ಗಾಯಗೊಳ್ಳದೇ ಇರುವುದು ಅದೃಷ್ಟವೇ ಸರಿ. ಇದೀಗ ನಮ್ಮ ಶ್ರಮ ಸಾರ್ಥಕವಾಗಿದ್ದು, ಶುಕ್ರವಾರ ಮೆಟ್ರೋ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮ ವೀಕ್ಷಣೆಗೆ ತಾವೂ ಕೂಡ ಕಾತರರಾಗಿದ್ದೇವೆ ಎಂದು ಸುಬ್ರಹ್ಮಣ್ಯ ಗುಡ್ಗೆ ಹೇಳಿದ್ದಾರೆ.
ಸಣ್ಣ ಪುಟ್ಟ ಕೆಲಸಗಳಷ್ಟೇ ಬಾಕಿ
ಸುರಂಗ ಮಾರ್ಗದಲ್ಲಿ ಬರುವ 5 ನಿಲ್ದಾಣಗಳಲ್ಲಿ ಬಹುತೇಕ ಎಲ್ಲ ನಿಲ್ದಾಣಗಳ ಕಾಮಗಾರಿಗಳು ಪೂರ್ಣಗೊಂಡಿದೆಯಾದರೂ ಆದರೂ, ಚಿಕ್ಕಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಇನ್ನು ನಿಲ್ದಾಣದ 2 ಪ್ರವೇಶ ದ್ವಾರಗಳಲ್ಲಿ ಒಂದೊಂದು ಕಡೆ ಎಸ್ಕಲೇಟರ್ ಅಳವಡಿಕೆ ಕಾರ್ಯ ಇನ್ನೂ ಮುಗಿದಿಲ್ಲ. ಅದರಲ್ಲೂ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಲ್ಲಿ 10 ಎಸ್ಕಲೇಟರ್‌ಗಳನ್ನು ಅಳವಡಿಸಲಾಗುತ್ತಿದೆ. ಇವುಗಳ ಪೈಕಿ ಬಹುತೇಕ ಎಸ್ಕಲೇಟರ್‌ಗಳ ಅಳವಡಿಕೆ ಕಾರ್ಯ ಪೂರ್ಣವಾಗಿಲ್ಲ. ಹಾಗೆಯೇ ಉತ್ತರ-ದಕ್ಷಿಣ ಕಾರಿಡಾರ್‌ನ ನಿಲ್ದಾಣದ ಕೆಲಸ ಇನ್ನೂ ಪೂರ್ಣಗೊಳ್ಳದ ಕಾರಣ, ಅಲ್ಲಿಗೆ ಪ್ರವೇಶ ಒದಗಿಸುವ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿಳಿದುಬಂದಿದೆ. ಕುತೂಹಲದಿಂದ ಪ್ರಯಾಣಿಕರು ಅತ್ತ ಕಡೆ ಹೋಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
Advertisement