ಹಿಂಗಾರು ಬೆಳೆ ಇಳುವರಿ ಹೆಚ್ಚಿಸಲು ಕಡಿಮೆ ಖರ್ಚಿನ ಕೃಷಿ ತಾಂತ್ರಿಕತೆ ಸಲಹೆಗಳು

ಗೋವಿನ ಜೋಳದ ತೆನೆ ದಿಂಡು ಮತ್ತು ಸಿಪ್ಪೆ, ಸೂರ್ಯಕಾಂತಿಯ ತೆನೆ ದಿಂಡು ಮತ್ತು ಕಟ್ಟಿಗೆ, ಕಬ್ಬಿನ ರವದಿ, ಹತ್ತಿ ಮತ್ತು ತೊಗರಿ ಕಟ್ಟಿಗೆ ಮುಂತಾದವುಗಳನ್ನು ಸುಡದೇ ಕೃಷಿಯಲ್ಲಿ ಮರುಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲೇಖಕರು: ಡಾ. ಅಶೋಕ ಪಿ.
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು
ಐ.ಸಿ.ಎ.ಆರ್ , ಕೃಷಿ ವಿಜ್ಞಾನ ಕೇಂದ್ರ 
ಹನುಮನಮಟ್ಟಿ, ಹಾವೇರಿ 

ಹಿಂಗಾರು ಬೆಳೆಗಳಲ್ಲಿ ಇಳುವರಿ ಹೆಚ್ಚಿಸಲು ಕಡಿಮೆ ಖರ್ಚಿನ ಉತ್ಪಾದನಾ ತಾಂತ್ರಿಕತೆಗಳಾದ ಮಣ್ಣಿನ ಫಲವತ್ತತೆಗಾಗಿ ಬೆಳೆಯುಳಿಕೆಗಳಾದ ಮುಂಗಾರಿ ಜೋಳದ ಹಾಗೂ ಗೋವಿನ ಜೋಳದ ದಂಟುಗಳು, ಗೋವಿನ ಜೋಳದ ತೆನೆ ದಿಂಡು ಮತ್ತು ಸಿಪ್ಪೆ, ಸೂರ್ಯಕಾಂತಿಯ ತೆನೆ ದಿಂಡು ಮತ್ತು ಕಟ್ಟಿಗೆ, ಕಬ್ಬಿನ ರವದಿ, ಹತ್ತಿ ಮತ್ತು ತೊಗರಿ ಕಟ್ಟಿಗೆ ಮುಂತಾದವುಗಳನ್ನು ಸುಡದೇ ಕೃಷಿಯಲ್ಲಿ ಮರುಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು. 

ಬೇಸಾಯದಲ್ಲಿ ಮಿಶ್ರ ಬೆಳೆ ಪದ್ಧತಿ ಅನುಸರಿಸುವುದು ಉತ್ತಮ, ಇದರಿಂದ ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿಯಲ್ಲಿ ಮಾರುಕಟ್ಟೆಯ ಬೆಲೆಗಳಲ್ಲಾಗುವ ಏರುಪೇರು ಅಥವಾ ಇನ್ನಾವುದೋ ಕಾರಣಗಳಿಂದ ಒಂದು ಬೆಳೆ ಹಾಳಾದರೂ ಇನ್ನೊಂದು ಬೆಳೆಯಿಂದ ಆದಾಯವನ್ನು ಪಡೆಯಲು ಸಾಧ್ಯ. ದ್ವಿದಳ ಧಾನ್ಯ ಬೀಜಗಳಿಗೆ ಜೈವಿಕ ಗೊಬ್ಬರಗಳಾದ ರೈಜೋಬಿಯಂ ಮತ್ತು ಏಕದಳ ಧಾನ್ಯಗಳಿಗೆ ಅಜೋಸ್ಪಿರಿಲಂನಿಂದ ಬೀಜೋಪಚಾರ ಲಾಭದಾಯಕ ಪ್ರತಿವರ್ಷ ಹಸಿರೆಲೆ ಗೊಬ್ಬರ ಬೆಳೆಗಳಾದ ಸೆಣಬು, ಡಯಂಚಾ, ಹೊಂಗೆ, ಗ್ಲಿರಿಸೀಡಿಯಾ, ಅಲಸಂದಿ, ಸುಬಾಬುಲ್ ಇತ್ಯಾದಿ ಉಪಯೋಗಿಸುವುದರಿಂದ ಮಣ್ಣಿನ ಆರೋಗ್ಯ ಕಾಪಾಡಬಹುದು.

ಮೊಳಕೆ ಹಂತದಲ್ಲೇ ಹತೋಟಿ

ಹಿಂಗಾರು ಬೆಳೆಗಳ ಬಿತ್ತನೆ ಬೀಜಗಳಿಗೆ ಬೀಜೋಪಚಾರಕ್ಕೆ ಉಪಯೋಗಮಾಡುವ ರಾಸಾಯನಿಕಗಳೆಂದರೆ ಶಿಲೀಂಧ್ರನಾಶಕಗಳು, ಬ್ಯಾಕ್ಟೀರಿಯಾ ನಾಶಕಗಳು, ಪಾದರಸಯುಕ್ತ ರಾಸಾಯನಿಕಗಳು ಇತ್ಯಾದಿ. ಆಯಾ ಬೆಳೆಗೆ ಶಿಫಾರಸ್ಸು ಮಾಡಿದ ರಾಸಾಯನಿಕಗಳನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸುವುದರಿಂದ ಬೀಜದಿಂದ ಹರಡುವ ರೋಗಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆ ಮೊಳಕೆಯೊಡೆಯುವ ಹಂತದಲ್ಲಿಯೇ ಹತೋಟಿ ಮಾಡಿ ಮುಂದೆ ಆಗಬಹುದಾದ ಇಳುವರಿ ನಷ್ಟವನ್ನು ತಪ್ಪಿಸಬಹುದು. 

ಬೀಜಕ್ಕೆ ಮೊದಲು ರಾಸಾಯನಿಕದಿಂದ, ನಂತರ ಅಣುಜೀವಿ ಗೊಬ್ಬರಗಳಿಂದ (ಎರಡು ಪಟ್ಟು ಪ್ರಮಾಣದಲ್ಲಿ) ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಬೇರೆ ಬೇರೆ ಬೆಳೆಗಳಿಗೆ ಶಿಫಾರಸ್ಸು ಮಾಡಿದ ಪ್ರಮಾಣ ಮತ್ತು ಪದ್ಧತಿಯಲ್ಲಿ ರಸಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಬೆಳೆಗೆ ಹಾಕಿದ ರಸಗೊಬ್ಬರಗಳು ಪೋಲಾಗದೆ ಬೆಳೆಗಳಿಗೆ ಸರಿಯಾದ ಸಮಯದಲ್ಲಿ ಲಭ್ಯವಾಗಿ ಹೆಚ್ಚಿನ ಇಳುವರಿ ಸಾಧ್ಯ. 

ಮಣ್ಣಿನ ಆರೋಗ್ಯ ಕಾಪಾಡಿ

ಇತ್ತೀಚಿನ ದಿನಗಳಲ್ಲಿ ಸಾವಯವ ಗೊಬ್ಬರಗಳಾದ ಕಾಂಪೋಸ್ಟ್ / ಕೊಟ್ಟಿಗೆ ಗೊಬ್ಬರ / ಎರೆಹುಳು ಗೊಬ್ಬರ / ಹಸಿರೆಲೆ ಗೊಬ್ಬರಗಳ ಬಳಕೆ ಕಡಿಮೆಯಾಗಿದ್ದು ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಿದೆ. ಇದರಿಂದ ಫಲವತ್ತತೆ ಕ್ಷೀಣಿಸಿದೆ. ಸಾವಯವ ಗೊಬ್ಬರಗಳನ್ನು ಹೆಚ್ಚು ಬಳಸುವುದರಿಂದ ಮಣ್ಣಿನಲ್ಲಿನ ಉಪಯುಕ್ತ ಅಣುಜೀವಿಗಳ ಸಂಖ್ಯೆ ಹೆಚ್ಚಾಗಿ ಅವುಗಳು ಮಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ ಮತ್ತು ಬೆಳೆಗಳ ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತವೆ. 

ಬರೀ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿ ಅಣುಜೀವಿಗಳು ನಾಶವಾಗಿ ಮಣ್ಣಿನ ಆರೋಗ್ಯ ಹಾಳಾಗಿ ಬೆಳೆಗಳ ಇಳುವರಿ ಕುಂಠಿತಗೊಳ್ಳುವುದು. ಆದ್ದರಿಂದ ಪ್ರತಿ ವರ್ಷವು ತಪ್ಪದೇ ರಾಸಾಯನಿಕ ಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸುವುದು ಅವಶ್ಯ. ರಸಗೊಬ್ಬರಗಳನ್ನು ಮಣ್ಣು ಪರೀಕ್ಷಾ ಆಧಾರದ ಮೇಲೆ ಬಳಸುವುದರಿಂದ ರಸಗೊಬ್ಬರಗಳ ಮೇಲಿನ ಖರ್ಚನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಹತ್ತಿಯಲ್ಲಿ ಎಲೆ ಕೆಂಪಾಗುವಿಕೆಯ ನಿರ್ವಹಣೆ 

ಹತ್ತಿ ಬೆಳೆಯಲ್ಲಿ ಎಲೆ ಕೆಂಪಾಗುವಿಕೆ ಕಂಡು ಬಂದಲ್ಲಿ ಅದು ಮೇಗ್ನಿಷಿಯಂ ಪೋಷಕಾಂಶದ ಕೊರತೆಯಿಂದಾಗಿ ಕಂಡು ಬರುತ್ತದೆ ಅದರ ನಿರ್ವಹಣೆಗಾಗಿ ಮುಂದಿನ ದಿನಗಳಲ್ಲಿ ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ 10 ಕಿ. ಗ್ರಾಂ. ಮೆಗ್ನಿಷಿಯಂ ಸಲ್ಫೇಟ್ ಹಾಗೂ ಶೇ. 25 ರಷ್ಟು ಹೆಚ್ಚಿನ ಶಿಫಾರಿತ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಬೇಕು. ಸಧ್ಯದ ಪರಿಸ್ಥಿತಿಯಲ್ಲಿ ನಿರ್ವಹಣೆಗಾಗಿ ಶೇ. 1.0 ರ ಮೆಗ್ನೇಶಿಯಂ ಸಲ್ಫೇಟ್‌ನ ಜೊತೆಯಲ್ಲಿ ಶೇ. 1.0 ರ 19:19:19 ಸಾ. ರಂ. ಪೋ. ನ (ನೀರಿನಲ್ಲಿ ಕರಗುವ ಗೊಬ್ಬರ) ದ್ರಾವಣವನ್ನು ಸಿಂಪರಣೆ ಮಾಡಬೇಕು. 

ಪರ್ಯಾಯ ಬೆಳೆ ಯೋಜನೆ

ಮಳೆಯ ಅನಿಶ್ಚಿತತೆ ಎದುರಿಸಲು ಅಳವಡಿಸಿಕೊಳ್ಳಬೇಕಾದ ಬದಲಿ ಬೆಳೆ ಪದ್ಧತಿಗಳಿಗೆ “ಪರ್ಯಾಯ ಬೆಳೆ ಯೋಜನೆ” ಎನ್ನುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ ಪರಿವರ್ತನೆ ಮಾಡಿಕೊಂಡು ಪರ್ಯಾಯ ಕ್ರಮಗಳಿಂದ ಲಾಭವಾಗುತ್ತದೆ. ಸಾಂಪ್ರದಾಯಿಕ ಬೆಳೆಗಳಿಗಿಂದ ಪರ್ಯಾಯ ಬೆಳೆಗಳು ಭಿನ್ನವಾಗಿರುತ್ತವೆ. ಮಳೆಯ ಆಗಮನ, ನಿರಂತರತೆ ಹಾಗೂ ಪ್ರಮಾಣವನ್ನು ಅವಲಂಬಿಸಿ, ಭೂಗುಣಕ್ಕೆ ತಕ್ಕಂತೆ ಬೆಳೆದಲ್ಲಿ ಅಧಿಕ ಸಾಧ್ಯವಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com