ಶಿವಮೊಗ್ಗ: ಸಾಂಕ್ರಾಮಿಕ ರೋಗದ ಪರಿಣಾಮ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣ ಮೇಲೆ ಈ ಸಾಂಕ್ರಾಮಿಕ ರೋಗ ಗಂಭೀರ ಪರಿಣಾಮ ಬೀರಿದೆ. ಈ ನಡುವಲ್ಲೇ ಸಂಕಷ್ಟದಲ್ಲಿರುವ ಬಡವರು ಹಾಗೂ ಕೋವಿಡ್ ನಿಂದ ಅನಾಥರಾಗಿರುವ ಮಕ್ಕಳಿಗೆ ಸಹಾಯ ಹಸ್ತ ಚಾಚುತ್ತಿರುವ ಇಲ್ಲಿನ ದೈಹಿಕ ಶಿಕ್ಷಕಿಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.
ಹುಣಸೇಕಟ್ಟೆಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಅನಿತಾ ಮೇರಿಯವರು ಬಡವರು ಹಾಗೂ ಅನಾಥ ಮಕ್ಕಳಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.
ಹಸಿವು ಹಾಗೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಅನಿತಾ ಅವರ ಸಹೋದರಿ ಸಾವನ್ನಪ್ಪಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಅನಿತಾ ಅವರು ಬಡವರು ಹಾಗೂ ಹಿಂದುಳಿದ ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರಕ್ಕೆ ಬಂದಿದ್ದರು.
ಕೋವಿಡ್ ಪರಿಣಾಮ ಸರ್ಕಾರ ವಿದ್ಯಾಗಮ ಯೋಜನೆಯನ್ನು ಆರಂಭ ಮಾಡಿತ್ತು. ಈ ಸಂದರ್ಭದಲ್ಲಿ ಅನಿತಾ ಅವರು, ಶಿಕ್ಷಣದಿಂದ ವಂಚಿತರಾಗುತ್ತಿದ್ದ ಮಕ್ಕಳಿಗೆ 25-30 ಪುಟಗಳುಳ್ಳ ನೋಟ್ಸ್ ಗಳ ಫೋಟೋಕಾಪಿ ಮಾಡಿಸಿ ವಿತರಿಸಿದ್ದರು.
ಇಸ್ರೇಲ್ ಮೂಲದ ಅರ್ಪಿತ್ ಪೆರೇರಾ ಎಂಬುವವರು ಫೋಟೋಕಾಪಿ ಕಮ್ ಪ್ರಿಂಟರ್ ಯಂತ್ರವನ್ನು ಮಕ್ಕಳಿಗಾಗಿ ದಾನ ಮಾಡಿದ್ದು, ಇದರ ಸಹಾಯದೊಂದಿಗೆ ಅನಿತಾ ಅವರು ನೋಟ್ಸ್ ಗಳನ್ನು ಪ್ರಿಂಟ್ ಮಾಡಿ ಮಕ್ಕಳಿಗೆ ವಿತರಿಸಿದ್ದರು.
ಶಿಕ್ಷಣದ ಪ್ರಾಮುಖ್ಯತೆ ಹಾಗೂ ಕಲಿಕೆಯ ಕುರಿತು ಪೋಷಕರಿಗೆ ವಿವರಿಸಿ ಹೇಳುವುದು ಕಷ್ಟ. ಆದರೂ, 3-5 ಮಕ್ಕಳು ಶಾಲೆಗೆ ಬಂದು ನೋಟ್ಸ್ ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂದು ಎನಿತಾ ಅವರು ಹೇಳಿದ್ದಾರೆ.
ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರ ವಾಟ್ಸಾಪ್ ಸಂದೇಶವನ್ನು ನೋಡಿದ್ದ ಅನಿತಾ ಅವರು ಕೋವಿಡ್ ನಿಂದ ಅನಾಥರಾದ ಮಕ್ಕಳಿಗೂ ಸಹಾಯ ಮಾಡಲು ಮುಂದಾಗಿದ್ದರು. ತಾವಿದ್ದ ಜಿಲ್ಲೆಯಲ್ಲಿ ನಾಲ್ಕು ಅನಾಥ ಮಕ್ಕಳನ್ನು ಗುರುತಿಸಿ, ಉಚಿತ ಶಿಕ್ಷಣ ಕೊಡಿಸಿದ್ದಾರೆ. ಇದಷ್ಟೇ ಅಲ್ಲದೆ, ಅನಾಥ ಮಕ್ಕಳ ಮನೆಗಳಿಗೆ ತಮ್ಮ ಒಂದು ತಿಂಗಳ ವೇತನವನ್ನು ಖರ್ಚು ಮಾಡಿ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ. ಇತರರು ಸಹಾಯ ಮಾಡುವಂತೆ ಮಾಡಿದ್ದಾರೆ. ಇವರ ಈ ಕಾರ್ಯದಿಂದ ಇದೀಗ ಖಾಸಗಿ ಆಭರಣ ಮಳಿಗೆಗಳ ಮಾಲೀಕರೂ ಕೂಡ ನೆರವು ನೀಡಲು ಮುಂದಾಗಿದ್ದು, ಅನಾಥ ಮಕ್ಕಳ ಕುಟುಂಬಕ್ಕೆ ರೇಷನ್ ಕಿಟ್ ಗಳನ್ನು ವಿತರಿಸುವ ಕೆಲಸ ಆರಂಭಿಸಿದ್ದಾರೆ.
Advertisement