ತಮಿಳುನಾಡು: ಇಡ್ಲಿ ಅಮ್ಮ ಖ್ಯಾತಿಯ ವೃದ್ಧೆಗೆ ಮನೆ ನಿರ್ಮಿಸಿಕೊಡಲು ಉದ್ಯಮಿ ಆನಂದ್ ಮಹೀಂದ್ರಾ ಮುಂದು!

'ಇಡ್ಲಿ ಅಮ್ಮ' ಎಂದೇ ಹೆಸರುವಾಸಿಯಾಗಿರುವ ವೃದ್ಧ ಮಹಿಳೆ ಕಮಲಥಾಲ್ ಅವರಿಗೆ ಆಟೋಮೊಬೈಲ್ ಕಂಪನಿ ಮಹೀಂದ್ರಾ ಗ್ರೂಪ್ ನಿಂದ ಕ್ಯಾಂಟೀನ್ ನೊಂದಿಗೆ  ಮನೆಯೊಂದನ್ನು ಕಟ್ಟಿಸಿಕೊಡಲಾಗುತ್ತಿದೆ.
ಭೂ ದಾಖಲಾತಿ ಸ್ವೀಕರಿಸುತ್ತಿರುವ ಇಡ್ಲಿ ಅಮ್ಮ
ಭೂ ದಾಖಲಾತಿ ಸ್ವೀಕರಿಸುತ್ತಿರುವ ಇಡ್ಲಿ ಅಮ್ಮ

ಕೊಯಂಬತ್ತೂರ್: ನಗರದ ಹೊರವಲಯ ವಡಿವೇಲಂಪಲಯಂನಲ್ಲಿ ಒಂದು ರೂಪಾಯಿಗೆ ಒಂದು ಇಡ್ಲಿ ಮಾರಾಟದಿಂದ ' ಇಡ್ಲಿ ಅಮ್ಮ' ಎಂದೇ  ಹೆಸರುವಾಸಿಯಾಗಿರುವ ವೃದ್ಧ ಮಹಿಳೆ ಕಮಲಥಾಲ್ ಅವರಿಗೆ ಆಟೋಮೊಬೈಲ್ ಕಂಪನಿ ಮಹೀಂದ್ರಾ ಗ್ರೂಪ್ ನಿಂದ ಕ್ಯಾಂಟೀನ್ ನೊಂದಿಗೆ  ಮನೆಯೊಂದನ್ನು ಕಟ್ಟಿಸಿಕೊಡಲಾಗುತ್ತಿದೆ.

ಈ ಕುರಿತ ಮಾಹಿತಿಯನ್ನು ಶುಕ್ರವಾರ ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಮಹೀಂದ್ರಾ  ಸಮೂಹ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ, ಯಾರೋ ಒಬ್ಬರ ಸ್ಪೂರ್ತಿದಾಯಕ ಕಥೆಯಲ್ಲಿ ಅಪರೂಪಕ್ಕೆ ಒಬ್ಬರು ಸಣ್ಣ ಪಾತ್ರ ನಿರ್ವಹಿಸುತ್ತಾರೆ. ಸಣ್ಣ ಪಾತ್ರ ನಿರ್ವಹಿಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಇಡ್ಲಿ ಅಮ್ಮಾ ಎಂದೇ ಹೆಸರಾಗಿರುವ ಕಮಲಥಾಲ್ ಅವರಿಗೆ ಧನ್ಯವಾದಗಳು. ಇಡ್ಲಿ ತಯಾರಿಕೆ ಹಾಗೂ ಮಾರಾಟಕ್ಕೆ ಅವಕಾಶವಾಗುವಂತೆ ಶೀಘ್ರದಲ್ಲಿಯೇ ಅವರು ಮನೆಯೊಂದನ್ನು ಹೊಂದಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವಡಿವೇಲಂಪಲಯಂನಲ್ಲಿ 3.5 ಸೆಂಟ್ ಭೂಮಿಯನ್ನು ಕಂಪನಿ ಕೊಡುಗೆಯಾಗಿ ಇಡ್ಲಿ ಅಮ್ಮಾನಿಗೆ ನೀಡಿದೆ. ಕಳೆದ ಸೋಮವಾರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಕಮಲಥಾಲ್ ಅವರು ಇಡ್ಲಿ ತಯಾರಿಕೆ ಹಾಗೂ ಮಾರಾಟಕ್ಕೆ ಅನುಗುಣವಾಗಿರುವ ಕ್ಯಾಂಟೀನ್ ನೊಂದಿಗೆ ಒಂದು ಬಿಹೆಚ್ ಕೆ ಮನೆಯೊಂದನ್ನು ಮಹೀಂದ್ರಾ ಲೈಫ್ ಸ್ಪೇಸಸ್ ಕಟ್ಟಿಸಿಕೊಡಲಿದೆ. 

ವಡಿವೇಲಂಪಲಯಂನಲ್ಲಿನ ದಿನಗೂಲಿ ಕಾರ್ಮಿಕರೇ ಆಕೆಯ ಪ್ರಮುಖ ಗ್ರಾಹಕರು.  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕಮಲಥಾಲ್, ತುಂಬಾ ಸಂತೋಷವಾಗುತ್ತಿದೆ. ನೆರವು ನೀಡಿದ್ದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರು ಬಂದು ಭೂಮಿಗೆ ಸಂಬಂಧಿಸಿದ ದಾಖಲಾತಿ ನೀಡಿದ್ದು, ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com