ಮಧ್ಯ ಪ್ರದೇಶ: ಮಳೆ ನೀರಿನಲ್ಲಿ ಸಿಲುಕಿದ್ದ ತುಂಬು ಗರ್ಭಿಣಿಗೆ ಆಟೋದಲ್ಲೇ ಹೆರಿಗೆ ಮಾಡಿಸಿದ ಮಹಿಳಾ ಪೊಲೀಸ್

ಮಹಿಳಾ ಪೊಲೀಸರು ಪ್ರವಾಹದಲ್ಲಿ ಸಿಲುಕಿದ್ದ ಆಟೋ ರಿಕ್ಷಾದಲ್ಲೇ ತುಂಬು ಗರ್ಭಿಣಿಗೆ ಹೆರಿಗೆ ಮಾಡಿಸಿದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೋಪಾಲ್: ಮಹಿಳಾ ಪೊಲೀಸರು ಪ್ರವಾಹದಲ್ಲಿ ಸಿಲುಕಿದ್ದ ಆಟೋ ರಿಕ್ಷಾದಲ್ಲೇ ತುಂಬು ಗರ್ಭಿಣಿಗೆ ಹೆರಿಗೆ ಮಾಡಿಸಿದ ಘಟನೆ ನಡೆದಿದೆ.

ಮಧ್ಯಪ್ರದೇಶದ ರಾಜಘಢ ಜಿಲ್ಲೆಯ ಸುಥಾಲಿಯಾ ಪಟ್ಟಣದಲ್ಲಿ ಪ್ರವಾಹದ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ಆಟೋ ರಿಕ್ಷಾದಲ್ಲಿ ಗರ್ಭಿಣಿಯೊಬ್ಬರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಲು ಇಬ್ಬರು ಪೋಲಿಸ್ ಮಹಿಳೆಯರು ಸಹಾಯ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ಅರುಂಧತಿ ರಜಾವತ್ ಮತ್ತು ಕಾನ್ಸ್‌ಟೇಬಲ್ ಇತಿಶ್ರೀ ರಾಥೋಡ್ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಟೋರಿಕ್ಷಾದಲ್ಲಿ ಚಲಿಸುತ್ತಿರುವುದನ್ನು ಗಮನಿಸಿದರು. ವೈದ್ಯಕೀಯ ಸಹಾಯಕ್ಕಾಗಿ ತೆರಳುತ್ತಿದ್ದ ಮಹಿಳೆಗೆ ಪ್ರವಾಹದಿಂದಾಗಿ ಸಕಾಲದಲ್ಲಿ ಆಸ್ಪತ್ರೆಗೆ ತಲುಪಲು ಸಾಧ್ಯವಾಗುವುದಿಲ್ಲ ಎಂದು ಅರಿತುಕೊಂಡ ಪೊಲೀಸ್ ಸಿಬ್ಬಂದಿಗಳು  ತಕ್ಷಣ ದಾದಿಯನ್ನು ಕರೆಸಿಕೊಂಡು ಮೂವರೂ ಸೇರಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.  

ರಸ್ತೆಯಲ್ಲಿ ನೀರಿನ ಮಟ್ಟ ಇಳಿದ ನಂತರ, ಮಹಿಳೆ ಮತ್ತು ನವಜಾತ ಶಿಶುವನ್ನು ಚಿಕಿತ್ಸೆಗಾಗಿ ಮತ್ತು ಆರೈಕೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಎಂದು ಅವರು ಹೇಳಿದರು.

ಪೊಲೀಸ್ ಸಿಬ್ಬಂದಿಗಳ ಮಾನವೀಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಮಹಿಳಾ ಪೊಲೀಸರ ಕ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com