ಕಪ್ಪೆಗಳ ಉಳಿವಿಗಾಗಿ ಜಾಗೃತಿ ಮೂಡಿಸಲು ಕರ್ನಾಟಕದಲ್ಲಿ ಕಪ್ಪೆಗಳ ಹಬ್ಬ ಆಯೋಜನೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮುಪ್ಪಾನೆ ಎಂಬ ನಿರ್ಜನ ಪ್ರವಾಸಿ ತಾಣದಲ್ಲಿ “ಕಪ್ಪೆ ಹಬ್ಬ”ಕ್ಕೆ ಚಾಲನೆ ಸಿಗಲಿದ್ದು, ಸತತ 6 ತಿಂಗಳ ಕಾಲ ಕಪ್ಪೆ ಹಬ್ಬ ನಡೆಯಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಧುನಿಕತೆಯ ಧೂಳಿಗೆ ತಂತ್ರಜ್ಞಾನದ ಗೀಳಿಗೆ ಬರಿದಾಗುತ್ತಿರುವ ಹಸಿರಿಗೆ ಕಪ್ಪೆಗಳೂ ಬರಿದಾಗುತ್ತಿವೆ. ಮಳೆರಾಯನ ಆಗಮನಕ್ಕೋ ಕೆರೆಯನ್ನು ತುಂಬಿಸಲೋ ಕಪ್ಪೆರಾಯನನ್ನು ಪೂಜಿಸುವುದು ನಮ್ಮಲ್ಲಿ ಹಿಂದಿನಿಂದ ನಡೆದುಬಂದ ಪದ್ಧತಿಯಾದರೂ ಇತ್ತೀಚೆಗೆ ಕಪ್ಪೆಗಳ ವಟಗುಟ್ಟುವಿಕೆಯ ಸದ್ದು ಕಡಿಮೆಯಾಗುತ್ತಿದೆ. 

ಪರಿಸರದ ಆರೋಗ್ಯದ ಬಗ್ಗೆ ಸೂಚನೆ ನೀಡುವ ಮತ್ತು ನೈಸರ್ಗಿಕ ಕೀಟ ನಿಯಂತ್ರಕವಾಗಿರುವ ಮಂಡೂಕ ಸಂತತಿಯ ಬಗ್ಗೆ ನಮಗಿರುವ ತಿಳಿವಳಿಕೆ ಅತ್ಯಲ್ಪ. ಕಪ್ಪೆಗಳು ಮಾಯವಾಗುತ್ತಿದ್ದರೆ ಅಲ್ಲಿನ ಪರಿಸರ ಹದಗೆಡುತ್ತಿದೆ ಎನ್ನುವುದರ ಸ್ಪಷ್ಟ ಸೂಚನೆ ಅದು. 

ಕಪ್ಪೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ತುರ್ತುಸ್ಥಿತಿ ಈಗ ದೇಶದೆಲ್ಲೆಡೆ ಇದೆ. ಹೀಗಾಗಿ ಇತ್ತೀಚೆಗೆ ದೇಶದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಮಂಡೂಕಗಳ ಬಗ್ಗೆ ಜಾಗೃತಿ ಮೂಡಿಸುವ ಹಬ್ಬವೊಂದನ್ನು ಆಯೋಜಿಸಲಾಗಿದೆ. 

ಪ್ರಾಣಿ, ಪಕ್ಷಿಗಳಂತೆ ಇದೀಗ ಕಪ್ಪೆಯ ಉಳಿವು ಕೂಡ ಕದ ತಟ್ಟುತ್ತಿದೆ. ರೈತೋಪಯೋಗಿ ಜೀವವೈವಿಧ್ಯತೆಯ ಪ್ರತೀಕ “ಕಪ್ಪೆ”ಗಳ ಸಂತತಿ ಅಳಿಯುತ್ತಿದೆ. ಅಳಿದುಳಿದಿರುವ ಒಂದಿಷ್ಟು ಕಪ್ಪೆಗಳನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ''ಕಪ್ಪೆ ಹಬ್ಬ' ಆಚರಿಸಲಾಗುತ್ತಿದೆ. 

ವಿನಾಶದಂಚಿನಲ್ಲಿರುವ ಕಪ್ಪೆಗಳ ಸಂತತಿಯನ್ನು ಉಳಿಸಲೆಂದೇ ಕಪ್ಪೆ ಹಬ್ಬ ಆಯೋಜನೆಗೊಳ್ಳುತ್ತಿದೆ. ಹಾರುವ ಕಪ್ಪೆ, ಚಿಮ್ಮುವ ಕಪ್ಪೆ ಹೀಗೆ ನಾನಾ ಪ್ರಬೇಧದ ಕಪ್ಪೆಗಳು ಕಾಣಸಿಗುತ್ತವೆ. ಕೆಲವು ಕಳೆನಾಶಕ ಕಪ್ಪೆಗಳಾದರೆ ಇನ್ನೂ ಕೆಲವು ಔಷಧೀಯಂತೆ ಬಳಕೆಯೂ ಆಗುತ್ತವೆ. ಮತ್ತೆ ಕೆಲವು ರಾಸಾಯನಿಕಗಳಂತೆ ಉಪಯೋಗಕಾರಿಯೂ ಆಗಿವೆ. ಹೀಗಾಗಿ ಬದಲಾದ ಕಾಲಘಟ್ಟ ಹವಾಮಾನ್ಯ ವೈಪರೀತ್ಯಕ್ಕೂ ನಾಶವಾಗುತ್ತಿರುವ ಕಪ್ಪೆಗಳನ್ನು ಉಳಿಸುವ ಅನಿವಾರ್ಯತೆ ಎದುರಾಗಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ಪರಿಸರವಾದಿಗಳು ರಾಜ್ಯ ಕಪ್ಪೆ ಘೋಷಣೆಗೆ ಚಿಂತನೆ ನಡೆಸಿದ್ದರು. ಪಶ್ಚಿಮಘಟ್ಟಗಳಲ್ಲಿ ಕಂಡು ಬರುವ ಮಲಬಾರ್ ಟ್ರೀ ಟೋಡ್ ಎಂಬ ಅಪರೂಪದ, ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಣೆ ಮಾಡಬೇಕೆಂದು ತಜ್ಞರು ಒತ್ತಾಯವನ್ನೂ ಮಾಡಿದ್ದರು.

ಅದರ ಮುಂದುವರೆದ ಭಾಗವಾಗಿ ಇದೀಗ ಕಪ್ಪೆಯ ಉಳಿವಿಗಾಗಿ ಜಾಗೃತಿ ಮೂಡಿಸಲೆಂದೇ ಇದೇ ಡಿ.18, 19 ಎರಡು ದಿನಗಳ ಕಾಲ ಕಪ್ಪೆ ಹಬ್ಬ ನಡೆಸಲು ಕರ್ನಾಟಕ ರಾಜ್ಯ ಅರಣ್ಯ, ವನ್ಯಜೀವಿ ಸಂರಕ್ಷಣೆ ಶಿವಮೊಗ್ಗ, ಸಾಗರ, ಕಾರ್ಗಲ್ ವಿಭಾಗ ದೇಶದಲ್ಲಿಯೇ ಮೊದಲ ಬಾರಿಗೆ ''ಕಪ್ಪೆ ಹಬ್ಬ'' ವನ್ನು ಆಯೋಜಿಸುತ್ತಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮುಪ್ಪಾನೆ ಎಂಬ ನಿರ್ಜನ ಪ್ರವಾಸಿ ತಾಣದಲ್ಲಿ “ಕಪ್ಪೆ ಹಬ್ಬ”'ಕ್ಕೆ ಚಾಲನೆ ಸಿಗಲಿದ್ದು, ಸತತ 6 ತಿಂಗಳ ಕಾಲ ಕಪ್ಪೆ ಹಬ್ಬ ನಡೆಯಲಿದೆ. ಕಪ್ಪೆಗಳ ಮಹತ್ವದ ಬಗ್ಗೆ ಮಾತನಾಡುವ ಪರಿಸರವಾದಿ ಡಾ.ಕೆ.ವಿ.ಗುರುರಾಜ್‌, ಶಶಿ ಸಂಪಳ್ಳಿ ಸೇರಿದಂತರ ಅರಣ್ಯಾಧಿಕಾರಿಗಳು ಭಾಗವಹಿಸಿ ಉತ್ಸವದಲ್ಲಿ ಮಂಡೂಕದ ಕುರಿತು ನೀಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com